ADVERTISEMENT

ಭೂಕಬಳಿಕೆಯಲ್ಲಿ ಸಚಿವ ಬೈರತಿ ಬಸವರಾಜ ಭಾಗಿ

ಪರಿಷತ್‌ನಲ್ಲಿ ಕಾಂಗ್ರೆಸ್‌ನ ಎಂ. ನಾರಾಯಣಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 21:50 IST
Last Updated 9 ಮಾರ್ಚ್ 2021, 21:50 IST

ಬೆಂಗಳೂರು: ನಗರದ ಕೆ.ಆರ್‌.ಪುರ ವ್ಯಾಪ್ತಿಯ ಬಸವನಪುರ ಗ್ರಾಮದ ಸರ್ವೆ ನಂಬರ್‌ 26/01ರಲ್ಲಿ 4 ಎಕರೆ 18 ಗುಂಟೆ ಸರ್ಕಾರಿ ಜಮೀನು ಕಬಳಿಕೆಯಾಗಿದ್ದು, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅದರಲ್ಲಿ ಭಾಗಿಯಾಗಿದ್ದಾರೆ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ ವಿಧಾನ ಪರಿಷತ್‌ನಲ್ಲಿ ಮಂಗಳವಾರ ಆರೋಪಿಸಿದರು.

ಸರ್ಕಾರಿ ಜಮೀನು ಕಬಳಿಕೆ ನಡೆದಿರುವ ಕುರಿತು ಗಮನ ಸೆಳೆಯುವ ಸೂಚನೆ ಮಂಡಿಸಿದ ಅವರು, ‘₹ 70 ಕೋಟಿ ಮೌಲ್ಯದ ಜಮೀನು ಕಬಳಿಕೆಯಾಗಿದೆ. ಸರ್ಕಾರಿ ಜಮೀನಿನ ದಾಖಲೆಗಳನ್ನು ತಿದ್ದಿ ಖಾಸಗಿಯವರ ಹೆಸರಿಗೆ ವರ್ಗಾವಣೆ ಮಾಡಲಾಗಿದೆ. ಹಿಂದಿನ ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆದರೆ, ಯಾವ ಕ್ರಮವೂ ಆಗಿಲ್ಲ. ಈಗಲೂ ಅಲ್ಲಿ ನಿರಂತರವಾಗಿ ಕೆಲಸ ನಡೆಯುತ್ತಿದೆ’ ಎಂದರು.

ಮಧ್ಯ ಪ್ರವೇಶಿಸಿದ ಬೈರತಿ ಬಸವರಾಜ, ‘ನಾನು ಆ ಕ್ಷೇತ್ರದ ಶಾಸಕ. ಆ ಜಮೀನು ಸರ್ಕಾರದ್ದಲ್ಲ. ಖಾಸಗಿಯವರಿಗೆ ಸೇರಿದ್ದು. ಅಲ್ಲಿ ಯಾವುದೇ ಅಕ್ರಮವೂ ನಡದಿಲ್ಲ’ ಎಂದು ಉತ್ತರ ನೀಡಲು ಮುಂದಾದರು.

ADVERTISEMENT

ಕಂದಾಯ ಸಚಿವ ಆರ್‌. ಅಶೋಕ ಅವರೇ ಉತ್ತರ ನೀಡಬೇಕೆಂದು ಪಟ್ಟು ಹಿಡಿದ ನಾರಾಯಣಸ್ವಾಮಿ, ‘ನೀವೇ ಅಕ್ರಮದಲ್ಲಿ ಭಾಗಿಯಾಗಿದ್ದೀರಿ. ಭೂಕಬಳಿಕೆಯಲ್ಲಿ ನೇರವಾಗಿ ನಿಮ್ಮ ಕೈವಾಡವೇ ಇದೆ’ ಎಂದು ಆರೋಪಿಸಿದರು.

ಇದೇ ವಿಚಾರವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ಆರಂಭವಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಕಂದಾಯ ಸಚಿವರಿಂದಲೇ ಉತ್ತರ ಕೊಡಿಸುವಂತೆ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.