
ಬೆಂಗಳೂರು: ‘ಪೋಷಕರು ಅಂಕ ಗಳಿಕೆ ಬಗ್ಗೆ ವಿದ್ಯಾರ್ಥಿಗಳ ಮೇಲೆ ವಿಪರೀತ ಒತ್ತಡ ಹೇರುವ ಜೊತೆಗೆ
ವೈದ್ಯಕೀಯ ಮತ್ತು ಎಂಜಿನಿರಿಂಗ್ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಪರ್ಯಾಯ ವೃತ್ತಿಪರ ಶಿಕ್ಷಣದ ಆಯ್ಕೆಗಳತ್ತ ಗಮನಹರಿಸುತ್ತಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ವತಿಯಿಂದ ಸೆಂಟ್ರಲ್ ಕಾಲೇಜು ಆವರಣದಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಮಾಲೋಚನೆ ಸಭೆ ಏರ್ಪಡಿಸಲಾಗಿತ್ತು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ನಿರ್ಣಾಯಕ ಹಂತವಾದ ಪದವಿ ಪೂರ್ವ ಶಿಕ್ಷಣದಲ್ಲಿ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಭವಿಷ್ಯದ ಕುರಿತ ಸೂಕ್ತ ಮಾರ್ಗದರ್ಶನ ನೀಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.
‘ಪದವಿಪೂರ್ವ ಶಿಕ್ಷಣ ಮಂಡಳಿ ತನ್ನ ಶೈಕ್ಷಣಿಕ ಕಾರ್ಯಕ್ರಮಗಳ ಕುರಿತು ಸಕಾಲಿಕ ಮಾಹಿತಿ ಒದಗಿಸಬೇಕು. ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಶೇ 90ರಷ್ಟು ಬೋಧಕ ಹುದ್ದೆಗಳು ಖಾಲಿ ಇರುವುದು ಕಳವಳಕಾರಿ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಬಿ. ರಮೇಶ್ ಮಾತನಾಡಿ, ‘ಉನ್ನತ ಶಿಕ್ಷಣ ಹಂತದಲ್ಲಿ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹೊರಗೆ ಉಳಿಯುತ್ತಿರುವುದು ಗಂಭೀರ ಬಿಕ್ಕಟ್ಟು ಸೃಷ್ಟಿಸುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.