ADVERTISEMENT

ಬೆಂಗಳೂರು ನಗರದ ವಿವಿಧೆಡೆ ಸಂವಿಧಾನ ಶಿಲ್ಪಿಯ ಜನ್ಮದಿನದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 15:33 IST
Last Updated 14 ಏಪ್ರಿಲ್ 2025, 15:33 IST
ನಗರದ ಜ್ಞಾನಭಾರತಿ ಆವರಣದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಕುಲಪತಿ ಎಂ.ಎಸ್. ಜಯಕರ್ ಮತ್ತಿತರರು ಪಾಲ್ಗೊಂಡಿದ್ದರು
ನಗರದ ಜ್ಞಾನಭಾರತಿ ಆವರಣದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಕುಲಪತಿ ಎಂ.ಎಸ್. ಜಯಕರ್ ಮತ್ತಿತರರು ಪಾಲ್ಗೊಂಡಿದ್ದರು   

ಬೆಂಗಳೂರು: ನಗರದಾದ್ಯಂತ ಸೋಮವಾರ ಸಂವಿಧಾನಶಿಲ್ಪಿ ಬಾಬಾಸಾಹೇಬ್‌ ಡಾ.ಬಿ.ಆರ್. ಅಂಬೇಡ್ಕರ್‌ ಅವರ 134ನೇ ಜನ್ಮದಿನವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಬೆಂಗಳೂರು ವಿ.ವಿ (ಜ್ಞಾನಭಾರತಿ): ‘ಅವಮಾನ, ಜಾತಿ ತಾರತಮ್ಯ, ಮಾನಸಿಕ‌ವಾಗಿ ಕುಗ್ಗಿಸುವಂತಹ ಪರಿಸ್ಥಿತಿಗಳೇ ಬಾಬಾಸಾಹೇಬ್ ಅಂಬೇಡ್ಕರ್‌ ಅವರನ್ನು ಮಹಾಚೇತನವಾಗಿ ರೂಪಿಸಿತು’ ಎಂದು ಲೇಖಕಿ ಬಿ.ಟಿ.ಲಲಿತಾನಾಯಕ್ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆಡಳಿತ ಕಚೇರಿ ಮುಂಭಾಗದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ಸುತ್ತಲಿನ ಕಠಿಣ ಪರಿಸರವನ್ನೇ ಮೆಟ್ಟಿಲಾಗಿಸಿಕೊಂಡು ಅಂಬೇಡ್ಕರ್ ಜಗದಗಲ ಬೆಳೆದು ನಿಂತಿದ್ದಾರೆ. ಈ ಕಾರಣಕ್ಕೆ ಬಾಬಾಸಾಹೇಬರು ಅಸಂಖ್ಯಾತ ಜನರಿಗೆ ಸ್ಫೂರ್ತಿಯ ಧ್ಯೋತಕವಾಗಿದ್ದಾರೆ’ ಎಂದು ತಿಳಿಸಿದರು.

‘ಮಹಿಳಾ ಸಬಲೀಕರಣ, ಸ್ವಾತಂತ್ರ್ಯಕ್ಕಾಗಿ ಕಾನೂನು, ಸ್ತ್ರೀಯರಿಗೆ ಮತದಾನದ ಹಕ್ಕು, ಆಸ್ತಿಯ ಹಕ್ಕು, ಶಿಕ್ಷಣ, ಸಮಾನತೆಯ ಹಕ್ಕನ್ನು ಒದಗಿಸಿದರು’ ಎಂದು ಶ್ಲಾಘಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ ಎಸ್.ಎಂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಶೇಷಾಧಿಕಾರಿ ಪ್ರೊ.ಜಿ.ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.

ಬೆಂಗಳೂರು ನಗರ ವಿ.ವಿ: ‘ಅಸ್ಪೃಶ್ಯತೆ ಹಾಗೂ ಲಿಂಗ ತಾರತಮ್ಯ ನಿವಾರಣೆಯ ಮೂಲಕ ಸರ್ವರಿಗೂ ಸಮಾನ ಘನತೆಯ ಬದುಕನ್ನು ಒದಗಿಸುವ ನಿಟ್ಟಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್ ಅವರ ಕೊಡುಗೆ ಅವಿಸ್ಮರಣೀಯ‘ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಎಂ.ಪುಟ್ಟಯ್ಯ ತಿಳಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ(ಬಿಸಿಯು) ಆಯೋಜಿಸಿದ್ದ ಅಂಬೇಡ್ಕರ್‌ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

ಬೌದ್ಧ ಧರ್ಮದ ಮಾನವೀಯ ಮೌಲ್ಯಗಳು ಮತ್ತು ಮಾರ್ಕ್ಸ್‌ವಾದದ ಸಮಾನತೆಯ ತತ್ವಗಳನ್ನು ಸಮ್ಮಿಳಿತಗೊಳಿಸಿ ಸಂವಿಧಾನದ ನಿರ್ದೇಶಕ ತತ್ವಗಳನ್ನು ಅಂಬೇಡ್ಕರ್ ನಿರೂಪಿಸಿದರು ಎಂದು ವಿವರಿಸಿದರು.

ಕುಲಸಚಿವರಾದ ಟಿ.ಜವರೇಗೌಡ, ಪ್ರಭಾರ ಕುಲಪತಿ ಪ್ರೊ.ಕೆ.ಆರ್. ಜಲಜಾ, ಬಿಸಿಯು ಸಿಂಡಿಕೇಟ್ ಸದಸ್ಯರಾದ ಎಚ್.ಕೃಷ್ಣರಾಮ, ಫ್ರಾನ್ಸಿಸ್ ಅಲ್ಮಿಂಡಾ, ಬಿ.ಆರ್. ಸುಪ್ರೀತ್, ಪ್ರೊ.ಪಿ.ಆರ್. ಚೇತನಾ ಉಪಸ್ಥಿತರಿದ್ದರು.

ಬೆಸ್ಕಾಂ ಕೇಂದ್ರ ಕಚೇರಿ: ಬೆಸ್ಕಾಂ ಕಚೇರಿಯಲ್ಲಿ ನಡೆದ ಬಾಬಾಸಾಹೆಬ್ ಅಂಬೇಡ್ಕರ್ ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಕಾರ್ಯಕ್ರಮ ಉದ್ಘಾಟಿಸಿದರು.

ಅಂಬೇಡ್ಕರ್ ಕುರಿತು ವಿಶೇಷ ಉಪನ್ಯಾಸ ನೀಡಿದ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ, ‘ಬಾಬಾ ಸಾಹೇಬರ ಬಾಲ್ಯದ ನೋವೇ ಉತ್ತಮ ಸಂವಿಧಾನ ರಚನೆಗೆ ಆಕರವಾಯಿತು‘ ಎಂದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಕುಲಸಚಿವರಾದ ಟಿ.ಜವರೇಗೌಡ ಪ್ರಭಾರ ಕುಲಪತಿ ಪ್ರೊ.ಕೆ.ಆರ್. ಜಲಜಾ ಮತ್ತಿತರರು ಉಪಸ್ಥಿತರಿದ್ದರು.
ಬೆಸ್ಕಾಂ ಕಚೇರಿಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ಮತ್ತಿತರರು ಹಾಜರಿದ್ದರು.
ಯಲಹಂಕ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯಿಂದ ಕಾನ್ಶಿರಾಂ ನಗರದ ಅಂಬೇಡ್ಕರ್‌ ಭವನದಲ್ಲಿ ನಡೆದ  ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ ಅವರ ಜನ್ಮ ದಿನಾಚರಣೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ರಾಜ್ಯ ಸಂಯೋಜಕ ಆರ್.ಮುನಿಯಪ್ಪ ಮತ್ತಿತರರು ಭಾಗವಹಿಸಿದ್ದರು
ಬಿಬಿಎಂಪಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು.ಆಡಳಿತಗಾರ ಎಸ್.ಆರ್ ಉಮಾಶಂಕರ್ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರು ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.