ADVERTISEMENT

ಅಂಬೇಡ್ಕರ್‌ ಮಹಾಪರಿನಿಬ್ಬಾಣ ಕಾರ್ಯಕ್ರಮ; ಪ್ರತಿ ವರ್ಷ ಭೀಮ ದಸರಾ ನಡೆಸಿ: ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 15:56 IST
Last Updated 6 ಡಿಸೆಂಬರ್ 2025, 15:56 IST
<div class="paragraphs"><p>ಬೆಂಗಳೂರಿನ ಅರಮನೆ ಮೈದಾನ– ಶೃಂಗಾರ್‌ ಪ್ಯಾಲೇಸ್‌ನಲ್ಲಿ ನಿರ್ಮಿಸಿರುವ ತಾತ್ಕಾಲಿಕ ಚೈತ್ಯಾಲಯಕ್ಕೆ ಬುದ್ಧ ಮತ್ತು ಬಿ.ಆರ್‌. ಅಂಬೇಡ್ಕರ್‌ ಅವರ ಅಸ್ಥಿಯನ್ನು ತರಲಾಯಿತು. </p></div>

ಬೆಂಗಳೂರಿನ ಅರಮನೆ ಮೈದಾನ– ಶೃಂಗಾರ್‌ ಪ್ಯಾಲೇಸ್‌ನಲ್ಲಿ ನಿರ್ಮಿಸಿರುವ ತಾತ್ಕಾಲಿಕ ಚೈತ್ಯಾಲಯಕ್ಕೆ ಬುದ್ಧ ಮತ್ತು ಬಿ.ಆರ್‌. ಅಂಬೇಡ್ಕರ್‌ ಅವರ ಅಸ್ಥಿಯನ್ನು ತರಲಾಯಿತು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಮೈಸೂರು ದಸರಾ ಮಾದರಿಯಲ್ಲಿ ಪ್ರತಿ ವರ್ಷ ಭೀಮ ದಸರಾವನ್ನು ಸರ್ಕಾರ ಆಚರಿಸಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ. ವೆಂಕಟಸ್ವಾಮಿ, ರಾಜ್ಯ ಸಂವಿಧಾನ ಬಳಗದ ಅಧ್ಯಕ್ಷ ಎಸ್‌. ಜಯಕಾಂತ್‌ ಚಾಲುಕ್ಯ ಆಗ್ರಹಿಸಿದರು.

ADVERTISEMENT

ಡಾ.ಬಿ.ಆರ್‌. ಅಂಬೇಡ್ಕರ್‌ ಮಹಾಪರಿನಿಬ್ಬಾಣದ ಅಂಗವಾಗಿ ನಾಗಸೇನಾ ಶಾಲೆಯಿಂದ ಶೃಂಗಾರ್‌ ಪ್ಯಾಲೇಸ್‌ವರೆಗೆ ಭಗವಾನ್‌ ಬುದ್ಧ ಮತ್ತು ಅಂಬೇಡ್ಕರ್‌ ಅವರ ಅಸ್ಥಿಯನ್ನು ಶನಿವಾರ ಮೆರವಣಿಗೆಯಲ್ಲಿ ತಂದು ಚೈತ್ಯಾಲಯ ಮಾದರಿಯಲ್ಲಿ ಇರಿಸಿ ಅವರು ಮಾತನಾಡಿದರು.

ಅಂಬೇಡ್ಕರ್‌ ಪರಿನಿಬ್ಬಾಣದ ಸಮಯದಲ್ಲಿ ದಸರಾ ಆಚರಿಸಬೇಕು. ದಸರಾ ಮೆರವಣಿಗೆ ರೀತಿಯಲ್ಲೇ ವಿಧಾನಸೌಧದಿಂದ ಅರಮನೆ ಮೈದಾನದವರೆಗೆ ಆನೆ ಮೇಲಿನ ಅಂಬಾರಿಯಲ್ಲಿ ಬಾಬಾಸಾಹೇಬರ ಬಂಗಾರದ ಪುತ್ಥಳಿಯನ್ನು ಇರಿಸಿ ಮೆರವಣಿಗೆ ನಡೆಸಬೇಕು. ಪರಿಶಿಷ್ಟ ಜಾತಿ ಉಪಯೋಜನೆಯ ಅನುದಾನದಲ್ಲಿ ಈ ಹಬ್ಬಕ್ಕೆ ₹3 ಕೋಟಿ ಒದಗಿಸಬೇಕು ಎಂದು ಒತ್ತಾಯಿಸಿದರು. 

ಬಂಗಾರದ ಪುತ್ಥಳಿ ನಿರ್ಮಿಸಲು ಪ್ರತಿಯೊಬ್ಬರೂ ಕನಿಷ್ಠ ಒಂದು ರೂಪಾಯಿ ಆದರೂ ನೀಡಬೇಕು. ಸರ್ಕಾರ ಪುತ್ಥಳಿಯನ್ನು ಅನಾವರಣಗೊಳಿಸಬೇಕು ಎಂದು ತಿಳಿಸಿದರು.

ಮುಂಬೈಯ ದಾದರ್‌ನಲ್ಲಿರುವ ಚೈತ್ಯಭೂಮಿಯ ಮಾದರಿಯಲ್ಲಿ, ಇಲ್ಲಿ ತಾತ್ಕಾಲಿಕ ಚೈತ್ಯಾಲಯ ನಿರ್ಮಿಸಲಾಗಿದೆ. ದಾದರ್‌ಗೆ ಹೋಗಲು ಸಾಧ್ಯವಾಗದವರು ನಿಬ್ಬಾಣದ ದಿನ ಇಲ್ಲೇ ಭೇಟಿ ನೀಡಲಿ ಎಂಬುದು ಇದರ ಉದ್ದೇಶವಾಗಿದೆ. ದಾದರ್‌ನಿಂದ ಅಂಬೇಡ್ಕರ್‌ ಅಸ್ಥಿ, ಶ್ರೀಲಂಕಾದಿಂದ ಬುದ್ಧನ ಅಸ್ಥಿ ತರಲಾಗಿದೆ ಎಂದರು.

ಭಿಕ್ಕುಣಿ ಮೈತ್ರಿ ಮಾತಾಜಿ ಮಾತನಾಡಿ, ‘ಅಂಬೇಡ್ಕರ್‌ ನೀಡಿದ ಉಡುಗೊರೆಯನ್ನು ನಾವು ಬರೆಯುವಂತಿಲ್ಲ. ಅವರು ನೀಡಿದ ಸಂವಿಧಾನ, ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಇದ್ದರೂ ಭಾರತದಿಂದ ಮರೆಯಾಗಿದ್ದ ಬೌದ್ಧ ಧರ್ಮವನ್ನು ಪುನರ್‌ಸ್ಥಾಪಿಸಿದ ಕೊಡುಗೆಗಳನ್ನು ಮರೆಯಬಾರದು’ ಎಂದು ಹೇಳಿದರು.

ಬೌದ್ಧ ಭಿಕ್ಕುಗಳಾದ ಭಂತೆ ಬೋಧಿದತ್ತ ಮಹಾಥೇರ, ಭಂತೆ ನಾಗಸೇನ, ಭಿಕ್ಕುಣಿ ಗೌತಮಿ ಮಾತಾಜಿ, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಪಣೆ, ಹಗಲು ರಾತ್ರಿ ಬುದ್ಧವಂದನೆ, ಭೀಮಗೀತೆ ಗಾಯನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.