ADVERTISEMENT

ಅಂಬೇಡ್ಕರ್‌ ಕ್ರೀಡಾಂಗಣಕ್ಕೆ ಹೈಟೆಕ್‌ ಸ್ಪರ್ಶ: ವಸತಿ ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 16:36 IST
Last Updated 18 ಮಾರ್ಚ್ 2021, 16:36 IST
ವಸತಿ ಸಚಿವ ವಿ.ಸೋಮಣ್ಣ ಕಾಮಗಾರಿಯ ನೀಲನಕ್ಷೆ ಪರಿಶೀಲಿಸಿದರು. ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಕೆ.ಉಮೇಶ್‌ ಶೆಟ್ಟಿ, ಗಂಗಭೈರಯ್ಯ, ಶಕುಂತಲ ದೊಡ್ಡಲಕ್ಕಪ್ಪ, ಮೋಹನ್‌ಕುಮಾರ್‌, ಜಯರತ್ನ, ರೂಪ ಲಿಂಗೇಶ್ವರ್‌ ಹಾಗೂ ಗೋವಿಂದರಾಜನಗರ ಬಿಜೆಪಿ ಮಂಡಲದ ಅಧ್ಯಕ್ಷ ವಿಶ್ವನಾಥ ಗೌಡ ಇದ್ದಾರೆ.
ವಸತಿ ಸಚಿವ ವಿ.ಸೋಮಣ್ಣ ಕಾಮಗಾರಿಯ ನೀಲನಕ್ಷೆ ಪರಿಶೀಲಿಸಿದರು. ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಕೆ.ಉಮೇಶ್‌ ಶೆಟ್ಟಿ, ಗಂಗಭೈರಯ್ಯ, ಶಕುಂತಲ ದೊಡ್ಡಲಕ್ಕಪ್ಪ, ಮೋಹನ್‌ಕುಮಾರ್‌, ಜಯರತ್ನ, ರೂಪ ಲಿಂಗೇಶ್ವರ್‌ ಹಾಗೂ ಗೋವಿಂದರಾಜನಗರ ಬಿಜೆಪಿ ಮಂಡಲದ ಅಧ್ಯಕ್ಷ ವಿಶ್ವನಾಥ ಗೌಡ ಇದ್ದಾರೆ.   

ಬೆಂಗಳೂರು: ‘ಗೋವಿಂದರಾಜನಗರ ಕ್ಷೇತ್ರದ ಡಾ.ರಾಜ್‌ಕುಮಾರ್‌ ವಾರ್ಡ್‌ನಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣಕ್ಕೆ ಹೈಟೆಕ್‌ ಸ್ಪರ್ಶ ನೀಡಲು ತೀರ್ಮಾನಿಸಲಾಗಿದೆ. ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ಕ್ರೀಡಾಂಗಣವನ್ನು ಉನ್ನತೀಕರಿಸಲಾಗುತ್ತಿದೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಗುರುವಾರ ಹೇಳಿದರು.

ಮುಖ್ಯಮಂತ್ರಿ ನವನಗರೋತ್ಥಾನ ಯೋಜನೆಯ ಅಡಿಯಲ್ಲಿ ಕ್ರೀಡಾಂಗಣದ ನವೀಕರಣ, ಬ್ಯಾಡ್ಮಿಂಟನ್‌ ಅಂಗಳ, ಜಾಗಿಂಗ್‌ ಟ್ರ್ಯಾಕ್‌, ಬ್ಯಾಸ್ಕೆಟ್‌ಬಾಲ್‌ ಅಂಗಳ ಮತ್ತು ಸ್ಕೇಟಿಂಗ್‌ ರಿಂಗ್‌ಗಳ ಉನ್ನತೀಕರಣ ಕಾಮಗಾರಿಗಳ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಸ್ಥಳೀಯ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶ. ಹೀಗಾಗಿ ₹18 ಕೋಟಿ ವೆಚ್ಚದಲ್ಲಿ ಮಾದರಿ ಕ್ರೀಡಾಂಗಣ ನಿರ್ಮಿಸಲು ಮುಂದಾಗಿದ್ದೇವೆ. ಆರೋಗ್ಯ ಸೇವೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಬಡವರಿಗೆ ಕೈಗೆಟಕುವ ದರದಲ್ಲಿ ವೈದ್ಯಕೀಯ ಚಿಕಿತ್ಸೆ ಸಿಗಬೇಕು ಎಂಬ ಉದ್ದೇಶದಿಂದ ಅಗ್ರಹಾರ ದಾಸರಹಳ್ಳಿ ವಾರ್ಡ್‌ನಲ್ಲಿ 200 ಹಾಸಿಗೆ ಸಾಮರ್ಥ್ಯದ ಹೈಟೆಕ್‌ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಮಾರುತಿ ಮಂದಿರ ವಾರ್ಡ್‌ನಲ್ಲಿ ಡಯಾಲಿಸಿಸ್‌ ಕೇಂದ್ರ, ಗೋವಿಂದರಾಜನಗರ ವಾರ್ಡ್‌ನಲ್ಲಿ ರೆಫರಲ್‌ ಆಸ್ಪತ್ರೆ ಆರಂಭಿಸಲಾಗಿದೆ’ ಎಂದರು.

ADVERTISEMENT

‘ಕಡಿಮೆ ವೆಚ್ಚದಲ್ಲಿ ಗರ್ಭಿಣಿಯರ ಆರೋಗ್ಯ ತಪಾಸಣೆ, ಹೆರಿಗೆ ಹಾಗೂ ಶಿಶುಗಳ ಆರೋಗ್ಯ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.