ಕೆಂಗೇರಿ: 'ಮನುಷ್ಯರು ಪರಸ್ಪರ ಪ್ರೀತಿಯಿಂದ ಬದುಕಬೇಕು. ತಾವು ಸ್ವತಂತ್ರವಾಗಿ ಬದುಕಿ ಮತ್ತೊಬ್ಬರಿಗೂ ಬದುಕುವ ಪರಿಸರವನ್ನು ಸೃಷ್ಟಿಸಿಕೊಡಬೇಕು. ಅದುವೇ ಅಂಬೇಡ್ಕರ್ ವಾದ’ ಎಂದು ಹಿರಿಯ ಚಿಂತಕ ಶಿವಶಂಕರ್ ಅಭಿಪ್ರಾಯಪಟ್ಟರು.
ಕೆಂಗೇರಿ ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಯಾವುದೇ ಜನಾಂಗಕ್ಕೆ, ವಿಚಾರಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಮಾನವೀಯ ಮೌಲ್ಯಗಳನ್ನು ಬಿತ್ತಿದ್ದ ಮನುಜಧರ್ಮ ಪ್ರವರ್ತಕರಾಗಿದ್ದರು. ಜನ ಸಂಸ್ಕೃತಿಯ ನಿಜ ವಾರಸುದಾರರಾದ ಅಂಬೇಡ್ಕರರ ಬದುಕು ಬರಹಗಳನ್ನು ಯುವಜನಾಂಗಕ್ಕೆ ದಾಟಿಸಬೇಕಿದೆ ಎಂದರು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ ಕೃಷ್ಣ ಮಾತನಾಡಿ, ‘ಹಿಂದೂ ಕೋಡ್ ಬಿಲ್ ಮೂಲಕ ಸಮಸ್ತ ಸ್ತ್ರೀಕುಲದ ಅಭ್ಯುದಯಕ್ಕೆ ಶ್ರಮಿಸಿದ ಅಂಬೇಡ್ಕರ್ ಅವರನ್ನು ಕೇವಲ ದಲಿತರೆಂದು ಅರ್ಥೈಸಬಾರದು’ ಎಂದು ಹೇಳಿದರು.
ಯುವ ಜನಾಂಗಕ್ಕೆ ಈ ದೇಶದ ಇತಿಹಾಸ, ಸಂವಿಧಾನದ ಬಗ್ಗೆ ಅರಿವು ಇರಬೇಕು. ಈ ನಿಟ್ಟಿನಲ್ಲಿ ‘ಅಂಬೇಡ್ಕರ್ ಓದು’ವಿನಂತಹ ಕಾರ್ಯಕ್ರಮಗಳು ಅತ್ಯಂತ ಅವಶ್ಯವಾಗಿವೆ ಎಂದು ಹೇಳಿದರು.
ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಸುರೇಶ್ ಗೌತಮ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.