ADVERTISEMENT

ಅಮಿತ್ ಶಾಗೆ ಝೀರೊ ಟ್ರಾಫಿಕ್; ಹೈರಾಣಾದ ಜನ

* ಬಳ್ಳಾರಿ ರಸ್ತೆಯಲ್ಲಿ ಸಿಲುಕಿದ್ದ ಆಂಬುಲೆನ್ಸ್ * 100 ಮೀಟರ್ ಚಲಿಸಲು 1 ಗಂಟೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 21:28 IST
Last Updated 18 ಜನವರಿ 2020, 21:28 IST
ಅರಮನೆ ರಸ್ತೆಯಲ್ಲಿ ಉಂಟಾದ ದಟ್ಟಣೆಯಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳು
ಅರಮನೆ ರಸ್ತೆಯಲ್ಲಿ ಉಂಟಾದ ದಟ್ಟಣೆಯಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳು    
""

ಬೆಂಗಳೂರು: ನಗರಕ್ಕೆ ಶನಿವಾರ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಂಚಾರಕ್ಕಾಗಿ ಬಳ್ಳಾರಿ ರಸ್ತೆ ಹಾಗೂ ಸುತ್ತಮುತ್ತ ಝೀರೊ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರಿಂದಾಗಿ ವಿಪರೀತ ವಾಹನ ದಟ್ಟಣೆ ಉಂಟಾಗಿ, ಜನ ರಸ್ತೆಯಲ್ಲೇ ಕಾದು ಹೈರಾಣಾದರು.

ಅಧಿಕೃತ ವೇಳಾಪಟ್ಟಿ ಪ್ರಕಾರ ಶಾ ಅವರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಹುಬ್ಬಳ್ಳಿಗೆ ತೆರಳಬೇಕಿತ್ತು. ಆದರೆ, ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆ ಮಾಡಿದ್ದರಿಂದ ಅವರ ಸಂಚಾರಕ್ಕೆ ಕೆಲವು ಮಾರ್ಗಗಳಲ್ಲಿ ಪೊಲೀಸರು ಝೀರೊ ಟ್ರಾಫಿಕ್‌ ವ್ಯವಸ್ಥೆ ಮಾಡಬೇಕಾಯಿತು. ಅವರು ಸಾಗಿದ ರಸ್ತೆಗಳಲ್ಲಿ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಯಿತು.

ಪೇಜಾವರಶ್ರೀಗಳ ಬೃಂದಾವನಕ್ಕೆ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ನೂತನ ಕಚೇರಿಗೆ ಶಾ ಭೇಟಿ ನೀಡಿದರು. ಶಾ ಅವರಿದ್ದ ವಾಹನ ಹಾಗೂ ಬೆಂಗಾವಲು ವಾಹನಗಳುಬಳ್ಳಾರಿ ರಸ್ತೆ ಮೂಲಕ ಜಯನಗರ ಹಾಗೂ ವಿದ್ಯಾಪೀಠದತ್ತ ತೆರಳಿದವು. ಪ್ರತಿ ರಸ್ತೆಯಲ್ಲೂ ಖಾಸಗಿ ವಾಹನಗಳನ್ನು ತಡೆದು ನಿಲ್ಲಿಸಲಾಯಿತು. ವಾಹನಗಳು ಗಂಟೆಗಟ್ಟಲೇ ಸಾಲುಗಟ್ಟಿ ನಿಂತಿದ್ದವು.

ADVERTISEMENT

ಎಚ್‌ಎಎಲ್‌, ಬಸವೇಶ್ವರ ವೃತ್ತ, ರಾಜಭವನ ರಸ್ತೆ, ಮೆಜೆಸ್ಟಿಕ್, ಕೆ.ಆರ್‌.ವೃತ್ತ, ನೃಪತುಂಗ ರಸ್ತೆ, ಬಳ್ಳಾರಿ ರಸ್ತೆ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು ಕಂಡುಬಂತು. ಮಧ್ಯಾಹ್ನ ಶಾಲೆಯಿಂದ ಮನೆಗೆ ಹೊರಟಿದ್ದ ವಿದ್ಯಾರ್ಥಿಗಳೂ ರಸ್ತೆಯಲ್ಲೇ ಕಾಯುವಂತಾಯಿತು. ಬಳ್ಳಾರಿ ರಸ್ತೆಯಲ್ಲಿ ರೋಗಿಯನ್ನು ಸಾಗಿಸುತ್ತಿದ್ದ ಆಂಬುಲೆನ್ಸ್‌ ಸಹ ದಟ್ಟಣೆಯಲ್ಲಿ ಸಿಲುಕಿಕೊಂಡಿತ್ತು.

100 ಮೀಟರ್‌ ಸಾಗಲು 1 ಗಂಟೆ; ರಸ್ತೆಯಲ್ಲೇ ಕಾದು ಸುಸ್ತಾದ ಹಲವರು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.

‘ಹೆಬ್ಬಾಳದಿಂದ ಅರಮನೆ ರಸ್ತೆಯವರೆಗೂ ಸಿಕ್ಕಾಪಟ್ಟೆ ವಾಹನಗಳ ದಟ್ಟಣೆ ಇದೆ. 100 ಮೀಟರ್ ಸಾಗಲು 1 ಗಂಟೆ ಹಿಡಿದಿದೆ. ಇನ್ನು ದಟ್ಟಣೆಯಲ್ಲೇ ಸಿಲುಕಿದ್ದು, ಮುಂದಕ್ಕೆ ಹೋಗುವುದು ಯಾವಾಗ’ ಎಂದು ಪ್ರಶ್ನಿಸಿ ಖಾಸಗಿ ಕಂಪನಿ ಉದ್ಯೋಗಿ ಡಿಸೋಜ ಟ್ವೀಟ್ ಮಾಡಿದ್ದಾರೆ.

‘ಅಮಿತ್ ಶಾ ಅವರ ಬೆಂಗಳೂರು ಭೇಟಿಗೆ ಧನ್ಯವಾದಗಳು. ಎಚ್‌ಎಎಲ್‌ನಿಂದ ಎಂ.ಜಿ.ರಸ್ತೆಗೆ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ರಸ್ತೆಯುದ್ದಕ್ಕೂ 500ಕ್ಕೂ ಹೆಚ್ಚು ಪೊಲೀಸರು ನಿಂತಿದ್ದಾರೆ. 15 ನಿಮಿಷಗಳ ಸಂಚಾರ ಇಂದು 45 ನಿಮಿಷ ಬೇಕಾಯಿತು’ ಎಂದು ಧೀರಜ್‌ ರೆಡ್ಡಿ ಟ್ವೀಟ್‌ ಮಾಡಿದ್ದಾರೆ.

ವಿದ್ಯಾಪೀಠದಲ್ಲಿರುವ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಬೃಂದಾವನಕ್ಕೆ ತೆರಳಿ ಅಮಿತ್‌ ಶಾ ನಮನ ಸಲ್ಲಿಸಿದರು.

ತಡವಾಗಿ ಹಾರಿದ ವಿಮಾನ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಹೊರಟಿದ್ದ ಪ್ರಯಾಣಿಕರು ಬಳ್ಳಾರಿ ರಸ್ತೆಯ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದರು. ಇದರಿಂದಾಗಿ ಮಧ್ಯಾಹ್ನ 12.55ಕ್ಕೆ ಹೊರಡಬೇಕಿದ್ದ ಇಂಡಿಗೊ 6ಇ ವಿಮಾನ, ಮಧ್ಯಾಹ್ನ 3.25ಕ್ಕೆ ಹಾರಾಟ ನಡೆಸಿತು. ಈ ಬಗ್ಗೆ ‘ಬೆಂಗಳೂರು ಏವಿಯೇಷನ್’ ತಂಡ ಟ್ವೀಟ್ ಮಾಡಿದೆ.

ಧನ್ಯವಾದ ತಿಳಿಸಿದ ಕಮಿಷನರ್
‘ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಗಣ್ಯರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದ ಪೊಲೀಸರ ಜೊತೆ ಸಹಕರಿಸಿದ ಬೆಂಗಳೂರು ಜನರಿಗೆ ಧನ್ಯವಾದಗಳು. ಯಾರಿಗಾದರೂ ತೊಂದರೆ ಆಗಿದ್ದರೆ ವಿಷಾದಿಸುತ್ತೇನೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.