ADVERTISEMENT

ಪ್ರಾಚೀನ ಭಾರತದಲ್ಲೇ ಗಣರಾಜ್ಯ ಇತ್ತು: ಅಂಕಣಕಾರ ಸೂರ್ಯಪ್ರಕಾಶ್‌ ಪ್ರತಿಪಾದನೆ

ವಿಎಸ್‌ಕೆ ಮಾಧ್ಯಮ ಸಮಾವೇಶ: ಅಂಕಣಕಾರ ಸೂರ್ಯಪ್ರಕಾಶ್‌ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 18:41 IST
Last Updated 28 ಡಿಸೆಂಬರ್ 2025, 18:41 IST
ವಿಎಸ್‌ಕೆ ಮಾಧ್ಯಮ ಸಮಾವೇಶದಲ್ಲಿ ಆಯೋಜಿಸಲಾಗಿದ್ದ ಗೋಷ್ಠಿಯಲ್ಲಿ ಕಶ್ಯಪ್ ಎನ್. ನಾಯ್ಕ್‌, ಎ. ಸೂರ್ಯಪ್ರಕಾಶ್ ಮತ್ತು ಕೆ.ವಿ. ಸಿಬಂತಿ ಪದ್ಮನಾಭ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ವಿಎಸ್‌ಕೆ ಮಾಧ್ಯಮ ಸಮಾವೇಶದಲ್ಲಿ ಆಯೋಜಿಸಲಾಗಿದ್ದ ಗೋಷ್ಠಿಯಲ್ಲಿ ಕಶ್ಯಪ್ ಎನ್. ನಾಯ್ಕ್‌, ಎ. ಸೂರ್ಯಪ್ರಕಾಶ್ ಮತ್ತು ಕೆ.ವಿ. ಸಿಬಂತಿ ಪದ್ಮನಾಭ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಂಸದೀಯ ವ್ಯವಸ್ಥೆಯು ಭಾರತಕ್ಕೆ ಬ್ರಿಟಿಷರಿಂದ ಬಂದಿದ್ದು ಎಂಬುದು ಶುದ್ಧಸುಳ್ಳು. 4,500 ವರ್ಷಗಳ ಹಿಂದೆಯೇ ಭಾರತದ ಲಿಚ್ಛವಿ ಗಣರಾಜ್ಯದಲ್ಲಿ ಈ ವ್ಯವಸ್ಥೆ ಇತ್ತು’ ಎಂದು ಅಂಕಣಕಾರ ಎ.ಸೂರ್ಯಪ್ರಕಾಶ್‌ ಅವರು ಹೇಳಿದರು.

ಭಾನುವಾರ ನಡೆದ ‘ವಿಎಸ್‌ಕೆ ಮಾಧ್ಯಮ ಸಮಾವೇಶ’ದಲ್ಲಿ, ‘ಭಾರತೀಯ ಸಂಸ್ಕೃತಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವ’ ಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಸಂಸತ್ತು, ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲವೂ ಬ್ರಿಟಿಷರಿಂದ ಬಂದಿದ್ದು ಎಂದು ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ಹೇಳಿಕೊಡಲಾಗುತ್ತಿದೆ. ಇದನ್ನು ನಿವಾರಿಸಬೇಕು. ಆ ಹೊಣೆ ಮಾಧ್ಯಮಗಳ ಮೇಲೆ ಇದೆ’ ಎಂದರು.

‘ಲಿಚ್ಛವಿ ಗಣರಾಜ್ಯದಲ್ಲಿ ಸಭಾ ಮತ್ತು ಸಮಿತಿ ಎಂಬ ಉಭಯ ಸದನಗಳಿದ್ದವು. ಅವುಗಳಲ್ಲಿ ಹಿರಿಯರಿಗೆ, ಪ್ರಮುಖರಿಗೆ ಮೊದಲ ಸಾಲಿನಲ್ಲಿ ಆಸನದ ವ್ಯವಸ್ಥೆ ಇರುತ್ತಿತ್ತು. ತೆರಿಗೆ, ಕಾನೂನು ರಚನೆ, ದಂಡ ಮತ್ತಿತರ ಕಾರ್ಯಗಳನ್ನು ಈ ಸಭಾ ಮತ್ತು ಸಮಿತಿಗಳು ನಿರ್ವಹಿಸುತ್ತಿದ್ದವು. ಇವೆಲ್ಲವನ್ನೂ ಮತ, ಧ್ವನಿ ಮತದ ಮೂಲಕ ಅಂಗೀಕರಿಸಲಾಗುತ್ತಿತ್ತು’ ಎಂದು ವಿವರಿಸಿದರು.

ADVERTISEMENT

‘2,500 ವರ್ಷಗಳ ಹಿಂದೆ ಬೌದ್ಧ ಬಿಕ್ಕುಗಳ ಸಂಘಗಳು ಗಣರಾಜ್ಯ ವ್ಯವಸ್ಥೆಯನ್ನು ಪಾಲಿಸುತ್ತಿದ್ದವು. ಇವೆಲ್ಲವೂ ಬ್ರಿಟಿಷರಿಂದ ಬಂದದ್ದು ಎಂಬುದು ವಸಾಹತುಶಾಹಿ ಮನಸ್ಥಿತಿ ಅಲ್ಲದೆ ಬೇರೇನಲ್ಲ. ಈ ಮನಸ್ಥಿತಿಯನ್ನು ಹೋಗಲಾಡಿಸಿ, ಭಾರತೀಯತೆಯನ್ನು ತುಂಬಬೇಕು’ ಎಂದರು.

‘ಈ ಎಲ್ಲ ವಿಷಯಗಳ ಅರಿವಿದ್ದ ಕಾರಣಕ್ಕೇ ಬಿ.ಆರ್‌.ಅಂಬೇಡ್ಕರ್ ಅವರು 1949ರ ನವೆಂಬರ್ 25ರ ಭಾಷಣದಲ್ಲಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪುನರ್‌ ಸ್ಥಾಪಿಸುತ್ತಿದ್ದೇವೆ’ ಎಂದಿದ್ದರು. ಅಂಬೇಡ್ಕರ್ ಅವರ ಈ ಭಾಷಣವನ್ನು ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಪಾಠವಾಗಿ ಪರಿಚಯಿಸಬೇಕು’ ಎಂದು ಒತ್ತಾಯಿಸಿದರು.

ಸಂವಾದ ನಡೆಸಿಕೊಟ್ಟ ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಕೆ.ಬಿ.ಸಿಬಂತಿ ಪದ್ಮನಾಭ ಅವರು, ‘ಈಚಿನ ವರ್ಷಗಳಲ್ಲಿ ಮಾಧ್ಯಮಗಳು ತೀವ್ರ ಸ್ವರೂಪದ ವಾಣಿಜ್ಯೀಕರಣ ಮತ್ತು ಒಂದೇ ಉದ್ಯಮ ಗುಂಪಿನಲ್ಲಿ ಕೇಂದ್ರೀಕರಣ ಆಗುತ್ತಿವೆ. ಇದು ಅಪಾಯವೇ’ ಎಂದು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸೂರ್ಯನಾರಾಯಣ, ‘1947ರಿಂದ 2014ರವರೆಗೂ ನೆಹರೂ ಯುಗವಿತ್ತು. ಎಲ್ಲ ರಂಗಗಳಲ್ಲೂ ಅದೇ ಮನಸ್ಥಿತಿ ಇತ್ತು. ಆಗ ಪತ್ರಿಕೆಗಳಲ್ಲಿ, ಸುದ್ದಿವಾಹಿನಿಗಳಲ್ಲಿ ಈಗಿನಂತೆ ಪ್ರಶ್ನೆ ಮಾಡಲು ಸಾಧ್ಯವೇ ಇರಲಿಲ್ಲ. 2014ರಲ್ಲಿ ಅಂತಹ ವ್ಯವಸ್ಥೆ ಛಿದ್ರವಾಯಿತು. ಎಲ್ಲರೂ ಎಲ್ಲವನ್ನೂ ಪ್ರಶ್ನಿಸಲು ಆರಂಭಿಸಿದರು. ಇದು ಉತ್ತಮ ಬೆಳವಣಿಗೆ ಮತ್ತು ಇದೇ ಶಾಶ್ವತವಾಗಬೇಕು’ ಎಂದು ಪ್ರತಿಪಾದಿಸಿದರು.

ಧರ್ಮಶಾಸ್ತ್ರದಲ್ಲೇ ಸಂವಿಧಾನದ ಆಚರಣೆ’ ‘

ಪ್ರಾಚೀನ ಭಾರತದಲ್ಲಿಯೇ ಸಂವಿಧಾನದ ಪರಿಕಲ್ಪನೆ ಇತ್ತು. ಧರ್ಮಶಾಸ್ತ್ರದ ಕಾಲದಲ್ಲಿ ಸನಾತನ ಸಂವಿಧಾನ ಆಚರಣೆಯಲ್ಲಿತ್ತು. ಆಚಾರ ವ್ಯವಹಾರ ಪ್ರಾಯಶ್ಚಿತ್ತ ಮತ್ತು ದಂಡ ಎಂಬ ನಾಲ್ಕು ಆಂಗಗಳು ಆ ವ್ಯವಸ್ಥೆಯ ಆಧಾರ ಸ್ತಂಭಗಳಾಗಿದ್ದವು’ ಎಂದು ವಕೀಲ ಕಶ್ಯಪ್‌ ಎನ್.ನಾಯ್ಕ್‌ ಪ್ರತಿಪಾದಿಸಿದರು.  ‘ಐರೋಪ್ಯ ದೇಶಗಳಲ್ಲಿ 300 ವರ್ಷಗಳಿಗಿಂತ ಹಿಂದೆ ಪರಿಸ್ಥಿತಿ ಕರಾಳವಾಗಿಯೇ ಇತ್ತು. ಜನರ ಹಕ್ಕುಗಳನ್ನು ಚರ್ಚ್‌ಗಳು ಹತ್ತಿಕ್ಕಿದ್ದವು. ಚರ್ಚ್‌ ಪ್ರತಿಪಾದನೆ ಮತ್ತು ಆಡಳಿತದ ನೀತಿಗಳ ಮಧ್ಯೆ ಬಹಳ ಅಂತರವಿತ್ತು. ಆದರೆ ಭಾರತದಲ್ಲಿ ಅಂತಹ ಅಂತರವಿರಲಿಲ್ಲ. ಧರ್ಮ ಮತ್ತು ಆಡಳಿತವು ಒಂದೇ ರೀತಿಯಲ್ಲಿ ಇದ್ದವು’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.