ADVERTISEMENT

ಅಂಜನಾಪುರ: ರಸ್ತೆ ಹೊಂಡಕ್ಕೆ ತೆಪ್ಪ ಇಳಿಸಿ ಆಕ್ರೋಶ

ಭತ್ತದ ಸಸಿ ನಾಟಿ ಮಾಡಿ ಅಸಮಾಧಾನ ಹೊರ ಹಾಕಿದ ನಿವಾಸಿಗಳು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 21:39 IST
Last Updated 4 ಸೆಪ್ಟೆಂಬರ್ 2021, 21:39 IST
ರಸ್ತೆಯಲ್ಲಿನ ಹೊಂಡದಲ್ಲಿ ಭತ್ತದ ಸಸಿ ನಾಟಿ ಮಾಡುತ್ತಿರುವ ಸ್ಥಳೀಯರು
ರಸ್ತೆಯಲ್ಲಿನ ಹೊಂಡದಲ್ಲಿ ಭತ್ತದ ಸಸಿ ನಾಟಿ ಮಾಡುತ್ತಿರುವ ಸ್ಥಳೀಯರು   

ಬೆಂಗಳೂರು: ಹೊಂಡ ಬಿದ್ದು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿರುವ ಅಂಜನಾಪುರ ಮುಖ್ಯ ರಸ್ತೆಯಲ್ಲಿ ತುಂಬಿಕೊಂಡಿರುವ ನೀರಿನಲ್ಲಿ ತೆಪ್ಪ ಇಳಿಸಿ ಅದರಲ್ಲಿ ಕುಳಿತು ಮತ್ತು ಭತ್ತದ ಸಸಿ ನಾಟಿ ಮಾಡುವ ಮೂಲಕ ಸ್ಥಳೀಯರು ವಿಭಿನ್ನವಾಗಿ ಶನಿವಾರ ಪ್ರತಿಭಟನೆ ನಡೆಸಿದರು.

2007ರಲ್ಲಿ ಸುತ್ತಮುತ್ತಲ ಬಡಾವಣೆಗಳು ಬಿಬಿಎಂಪಿಗೆ ಸೇರ್ಪಡೆಯಾದರೂ, ಈ ರಸ್ತೆ ನಿರ್ವಹಣೆ ಮಾತ್ರ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ವ್ಯಾಪ್ತಿಯಲ್ಲೇ ಇದೆ. ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗೆ ಜಲಮಂಡಳಿಯಿಂದ ಅಗೆದು ಮಣ್ಣು ಮುಚ್ಚಲಾಗಿದೆ. ಆದರೆ, ರಸ್ತೆ ಮರು ನಿರ್ಮಾಣ ಮಾತ್ರ ಆಗಿಲ್ಲ.

ರಸ್ತೆ ಹುಡುಕಾಡಿಕೊಂಡು ತೆರಳಬೇಕಾದ ಸ್ಥಿತಿಯಿಂದ ರೋಸಿ ಹೋಗಿರುವ ನಿವಾಸಿಗಳು, ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು. ತೆಪ್ಪವೊಂದನ್ನು ತಂದು ಅದರಲ್ಲಿ ಕುಳಿತು ಬಿಡಿಎ ಅಧಿಕಾರಿಗಳು ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ವಿರುದ್ಧ ಘೋಷಣೆ ಮೊಳಗಿಸಿದರು. ಬಳಿಕ ಭತ್ತದ ಸಸಿಗಳನ್ನು ತಂದು ರಸ್ತೆಯ ಹೊಂಡದಲ್ಲೇ
ನಾಟಿ ಮಾಡಿದ ನಿವಾಸಿಗಳು ಸರ್ಕಾರದ ವಿರುದ್ಧ ತಮ್ಮ ಸಿಟ್ಟು ಹೊರ ಹಾಕಿದರು.

ADVERTISEMENT

ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರ ಮೆಟ್ರೊ ನಿಲ್ದಾಣದ ಸಮೀಪದಿಂದ ಆರಂಭವಾಗುವ ಅಂಜನಾಪುರ ಮುಖ್ಯ ರಸ್ತೆಯಲ್ಲಿ ಗೊಟ್ಟಿಗೆರೆ ತನಕ ಇದೇ ಸ್ಥಿತಿ ಇದೆ. ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಕಡೆಗೆ ಹೋಗಲು ಇರುವ ಪ್ರಮುಖ ಸಂಪರ್ಕ ರಸ್ತೆ ಇದಾಗಿದೆ. 12 ವರ್ಷಗಳಿಂದ ಅಭಿವೃದ್ಧಿ ಕಾಣದಿರುವುದರಿಂದ ರಸ್ತೆಯ ತುಂಬೆಲ್ಲಾ ಗುಂಡಿಗಳೇ ತುಂಬಿಕೊಂಡಿವೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡರೆ ವಾಹನ ಚಾಲನೆ ಮಾಡುವುದೇ ಕಷ್ಟವಾಗಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಬಂದ ಶಾಸಕ ಎಂ. ಕೃಷ್ಣಪ್ಪ ಅವರನ್ನು ಸುತ್ತಮುತ್ತಲ ಬಡಾವಣೆಯ ಮಹಿಳೆಯರು ತರಾಟೆಗೆ ತೆಗೆದುಕೊಂಡರು. ‘12 ವರ್ಷಗಳಿಂದ ಸಮಸ್ಯೆ ಸರಿಪಡಿಸಲು ಆಗಿಲ್ಲ ಏಕೆ’ ಎಂದು ಪ್ರಶ್ನಿಸಿದರು. ಮಾಧ್ಯಮ ಪ್ರತಿನಿಧಿಗಳಿಗೆ ಶಾಸಕರು ಸ್ಪಷ್ಟನೆ ನೀಡುವಾಗಲೂ ಘೋಷಣೆ ಕೂಗಿ ತಮ್ಮ ಅಸಮಾಧಾನ ಹೊರ ಹಾಕಿದರು.

ರಸ್ತೆ ದುಸ್ಥಿತಿ ಬಗ್ಗೆ ‘ಪ್ರಜಾವಾಣಿ’ ಗುರುವಾರ ವರದಿ ಪ್ರಕಟಿಸಿತ್ತು. ಸ್ಥಳೀಯ ನಿವಾಸಿಗಳೊಂದಿಗೆ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರನ್ನು ಅಂದೇ ಭೇಟಿ ಮಾಡಿದ್ದ ಎಂ.ಕೃಷ್ಣಪ್ಪ, ರಸ್ತೆ ಅವ್ಯವಸ್ಥೆ ಮನವರಿಕೆ ಮಾಡಿಸಿದ್ದರು. ಕೂಡಲೇ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಎಸ್.ಆರ್. ವಿಶ್ವನಾಥ್ ಭರವಸೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.