ADVERTISEMENT

ವಾರ್ಷಿಕ ಬ್ಯಾರಿ ಪ್ರಶಸ್ತಿ ಪ್ರದಾನ | ಸ್ನೇಹಭಾವದ ಬ್ಯಾರಿ ಸಮುದಾಯ: ಮಧು ಬಂಗಾರಪ್ಪ

‘ವಾರ್ಷಿಕ ಬ್ಯಾರಿ ಪ್ರಶಸ್ತಿ‘ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 15:49 IST
Last Updated 9 ಜೂನ್ 2024, 15:49 IST
<div class="paragraphs"><p>‘ದಿ ಬ್ಯಾರಿ ವೆಲ್‌ಫೇರ್‌ ಅಸೋಸಿಯೇಷನ್’ ವತಿಯಿಂದ ಹೈನೋದ್ಯಮಿಗಳಾದ ಮಗಳು–ತಾಯಿ ಮರ್ಜೀನಾ–ಮೈಮುನಾ ಹರೇಕಳ ಅವರಿಗೆ ‘ವರ್ಷದ ಬ್ಯಾರ್ದಿ’ ಹಾಗೂ&nbsp;ಸಾಮಾಜಿಕ ಕಾರ್ಯಕರ್ತ ಬಡಿಲ ಹುಸೈನ್ ಅವರಿಗೆ ‘ವರ್ಷದ ಬ್ಯಾರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.&nbsp; </p></div>

‘ದಿ ಬ್ಯಾರಿ ವೆಲ್‌ಫೇರ್‌ ಅಸೋಸಿಯೇಷನ್’ ವತಿಯಿಂದ ಹೈನೋದ್ಯಮಿಗಳಾದ ಮಗಳು–ತಾಯಿ ಮರ್ಜೀನಾ–ಮೈಮುನಾ ಹರೇಕಳ ಅವರಿಗೆ ‘ವರ್ಷದ ಬ್ಯಾರ್ದಿ’ ಹಾಗೂ ಸಾಮಾಜಿಕ ಕಾರ್ಯಕರ್ತ ಬಡಿಲ ಹುಸೈನ್ ಅವರಿಗೆ ‘ವರ್ಷದ ಬ್ಯಾರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. 

   

-ಪ್ರಜಾವಾಣಿ ಚಿತ್ರ 

ಬೆಂಗಳೂರು: ಸ್ನೇಹಭಾವದಿಂದ ಎಲ್ಲ ಭಾಷೆ, ಧರ್ಮದವರನ್ನು ಜೊತೆಯಲ್ಲಿ ಕರೆದೊಯ್ಯುವ ಗುಣ ಬ್ಯಾರಿ ಸಮುದಾಯಕ್ಕೆ ಇದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ADVERTISEMENT

‘ಬ್ಯಾರೀಸ್ ವೆಲ್‌ಫೇರ್‌ ಅಸೋಸಿಯೇಷನ್’ ಭಾನುವಾರ ಹಮ್ಮಿಕೊಂಡಿದ್ದ ‘ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ವಾರ್ಷಿಕ ಬ್ಯಾರಿ ಪ್ರಶಸ್ತಿ ಪ್ರದಾನ‘ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಸ್ಲಿಮರು ಇತ್ತೀಚೆಗೆ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಮುಂದಿನ 10 ವರ್ಷಗಳಲ್ಲಿ ಶೈಕ್ಷಣಿಕವಾಗಿ ಈ ಸಮುದಾಯದಲ್ಲಿ ಭಾರಿ ಬದಲಾವಣೆ ಕಾಣಲಿದೆ. ಶಿಕ್ಷಣವೇ ನಮ್ಮ ಆಸ್ತಿ. ಬ್ಯಾರಿ ಭಾಷಿಕರು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ವಿವರಿಸಿದರು.

ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಮಾತನಾಡಿ, ‘ವೇಷಭೂಷಣದಲ್ಲಿ ಮಾತ್ರ ಮುಸ್ಲಿಮರಾಗಿ ಉಳಿದರೆ ಸಮುದಾಯಕ್ಕೆ ದೊಡ್ಡ ನಷ್ಟ. ಕುರಾನ್ ಒಂದು ಸಮುದಾಯಕ್ಕೆ ಸೀಮಿತವಾದ ಗ್ರಂಥವಲ್ಲ. ಕುರಾನ್ ಅಧ್ಯಯನ ಮಾಡಿ, ಮನುಷ್ಯ ಗುಣವನ್ನು ಅರಿಯಬೇಕು. ಅದನ್ನು ಇತರ ಸಮಾಜಗಳಿಗೂ ತಲುಪಿಸಬೇಕು’ ಎಂದು ಹೇಳಿದರು.

ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಂ.ಫಾರೂಕ್ ಮಾತನಾಡಿ, ‘ಸುಮಾರು 30 ವರ್ಷಗಳ ಹಿಂದೆ ಬ್ಯಾರಿ ಸಮುದಾಯದ ಹಿರಿಯ ನೇತಾರರು ಬೆಂಗಳೂರಿನಲ್ಲಿ ಹುಟ್ಟಿಹಾಕಿದ ಚಳವಳಿಯು ಇಂದು ನಾವು ಬ್ಯಾರಿಗಳು ಎಂದು ಹೆಮ್ಮೆಯಿಂದ ಹೇಳುವಂತಹ ವಾತಾವರಣವನ್ನು ಸೃಷ್ಟಿಸಿದೆ. ಒಂದು ಕಾಲದಲ್ಲಿ ಬ್ಯಾರಿ ಸಮುದಾಯ ಶಿಕ್ಷಣ, ರಾಜಕೀಯ, ಸಾಮಾಜಿಕ ರಂಗದಲ್ಲಿ ತೀರಾ ಹಿಂದುಳಿತ್ತು. ಇಂದು ಈ ಎಲ್ಲ ವಲಯಗಳಲ್ಲಿ ಮುನ್ನಡೆಯುತ್ತಿದೆ‘ ಎಂದು ಶ್ಲಾಘಿಸಿದರು.

ಸಾಮಾಜಿಕ ಕಾರ್ಯಕರ್ತ ಬಡಿಲ ಹುಸೈನ್ ಅವರಿಗೆ ‘ವರ್ಷದ ಬ್ಯಾರಿ’ ಹಾಗೂ ಹೈನೋದ್ಯಮಿಗಳಾಗಿರುವ ತಾಯಿ–ಮಗಳು ಹರೇಕಳದ ಮೈಮುನಾ- ಮರ್ಜೀನಾ  ಅವರಿಗೆ ‘ವರ್ಷದ ಬ್ಯಾರ್ದಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಗಳು ತಲಾ ₹50 ಸಾವಿರ ನಗದು, ಸ್ಮರಣಿಕೆ ಒಳಗೊಂಡಿವೆ. ಇದೇ ವೇಳೆ ಬ್ಯಾರಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಬ್ಯಾರೀಸ್ ವೆಲ್‌ಫೇರ್‌ ಅಸೋಸಿಯೇಷನ್‍ನ ಸೈಯದ್ ಮಹಮ್ಮದ್ ಬ್ಯಾರಿ, ಮುಹಮ್ಮದ್ ಶರೀಫ್ ಟಿ.ಕೆ., ಬ್ಯಾರಿ ಸೌಹಾರ್ದ ಭವನದ ಮುಖ್ಯ ಆಡಳಿತಾಧಿಕಾರಿ ಅತ್ತೂರು ಚಾಯಬ್ಬ, ಪತ್ರಕರ್ತ ಬಿ.ಎಂ.ಹನೀಫ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.