ಬೆಂಗಳೂರು: ‘ಭಾರತೀಯ ಸಾಹಿತ್ಯಕ್ಕೆ ಅನುವಾದಕರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅನುವಾದದ ಕೆಲಸ ಅಷ್ಟು ಸುಲಭವಲ್ಲ. ಒಂದು ಕೃತಿಯನ್ನು ಅರ್ಥ ಮಾಡಿಕೊಂಡು ಭಾಷಾಂತರ ಮಾಡುವ ದೊಡ್ಡ ಜವಾಬ್ದಾರಿ ಅವರ ಮೇಲಿದೆ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಶುಕ್ರವಾರ ಏರ್ಪಡಿಸಿದ್ದ ಅನುವಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಅನುವಾದದ ಕೆಲಸ ಸವಾಲಿನದ್ದಾಗಿದೆ. ಪಕ್ಕದ ರಾಜ್ಯ ಹಾಗೂ ಹೊರದೇಶಗಳ ಸಾಹಿತ್ಯವನ್ನು ತಿಳಿದುಕೊಳ್ಳಲು ಓದುಗರು ಕಾತರರಿಂದ ಇರುತ್ತಾರೆ. ಉತ್ತಮ ಬಾಂಧವ್ಯ ವೃದ್ಧಿಗೆ ಇದು ಸಹಕಾರಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ಅಕಾಡೆಮಿ ಅಧ್ಯಕ್ಷ ಮಾಧವ್ ಕೌಶಿಕ್ ಮಾತನಾಡಿ, ‘ಭಾರತದಲ್ಲಿ ಹಲವು ಭಾಷೆಗಳಲ್ಲಿ ಜನರು ಮಾತನಾಡುತ್ತಾರೆ. ಅನ್ಯ ಭಾಷೆಯ ಸಾಹಿತ್ಯವನ್ನು ನಮಗೆ ತಿಳಿಸುವ ಕೆಲಸವನ್ನು ಅನುವಾದಕರು ಮಾಡುತ್ತಾರೆ. ಭಾಷಾಂತರಕಾರ ಎಷ್ಟು ಮುಖ್ಯ ಎಂಬುದು ಸಮಾಜಕ್ಕೆ ಈಗ ಅರ್ಥವಾಗಿದೆ’ ಎಂದರು.
ಇದೇ ವೇಳೆ ಮಾಧವ್ ಕೌಶಿಕ್ ಹಾಗೂ ಉಪಾಧ್ಯಕ್ಷೆ ಕುಮುದ್ ಶರ್ಮಾ ಅವರು 24 ಮಂದಿಗೆ ಅನುವಾದ ಪ್ರಶಸ್ತಿ 2023 ಪ್ರದಾನ ಮಾಡಿದರು. ಫಲಕ ಮತ್ತು ₹ 50 ಸಾವಿರ ನಗದು ನೀಡಲಾಯಿತು.
ಪ್ರಶಸ್ತಿ ವಿಜೇತರು: ಲಕ್ಷ್ಯ ಜ್ಯೋತಿ ಗಗೈ ಸಂದಿಕೈ (ಅಸ್ಸಾಮೀ), ಮೃಣ್ಮಯ್ ಪ್ರಾಮಾಣಿಕ್ (ಬಂಗಾಳಿ), ಅಂಬಿಕಾಗಿರಿ ಹಾಜೋವಾರಿ (ಬೋಡೊ), ಸುಷ್ಮಾ ರಾಣಿ (ಡೋಗ್ರಿ), ದಿ.ನವನೀತ ದೇವ ಸೇನ್ (ಇಂಗ್ಲಿಷ್), ಮಿನಲ್ ಜಯಂತಿಲಾಲ್ ದವೆ (ಗುಜರಾತಿ), ರೀತಾರಾಣಿ ಪಾಲಿವಾಲ್ (ಹಿಂದಿ), ಕೆ.ಕೆ.ಗಂಗಾಧರನ್ (ಕನ್ನಡ), ಗುಲ್ಜಾರ್ ಅಹಮದ್ ರಾಥೆರ್ (ಕಶ್ಮೀರಿ), ಸುನೇತ್ರ ಗಜಾನನ ಜೋಗ್ (ಕೊಂಕಣಿ), ಮೇನಕಾ ಮಲ್ಲಿಕ್ (ಮೈಥಿಲಿ), ಪಿ.ಕೆ.ರಾಧಾಮಣಿ (ಮಲೆಯಾಳಂ), ಲಾಯಿಶ್ರಮ್ ಸೋಮೋರೆಂದ್ರೊ (ಮಣಿಪುರಿ), ಅಭಯ್ ಸದಾವರ್ತೆ (ಮರಾಠಿ), ಛತ್ರಮಾನ್ ಸುಬ್ಬ (ನೇಪಾಳಿ), ಬಂಗಾಳಿ ನಂದ (ಒಡಿಯಾ), ಜಗದೀಶ್ ರಾಯ್ ಕುಲರಿಯನ್ (ಪಂಜಾಬಿ), ನಾಗರತ್ನ ಹೆಗಡೆ (ಸಂಸ್ಕೃತ), ವೀರ ಪ್ರತಾಪ ಮುರ್ಮು (ಸಂತಾಲಿ), ಭಗವಾನ್ ಬಾಬಣಿ ‘ಬಂದೋ’ (ಸಿಂಧಿ), ಕಣ್ಣಯ್ಯನ್ ದಕ್ಷಿಣಾಮೂರ್ತಿ (ತಮಿಳು), ಸುರೇಂದ್ರ ನಾಗರಾಜು ‘ಎಲನಾಗ’ (ತೆಲುಗು), ಮೊಹಮ್ಮದ್ ಅಹಸನ್ ‘ಅಹಸನ್ ಅಯ್ಯುಬೀ’ (ಉರ್ದು),
ಭವರ್ ಲಾಲ್ ‘ಭ್ರಮರ್’ (ರಾಜಸ್ಥಾನಿ).
ಅಕಾಡೆಮಿ ಕಾರ್ಯದರ್ಶಿ ಕೆ.ಶ್ರೀನಿವಾಸರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.