ADVERTISEMENT

ರೌಡಿಶೀಟರ್‌ ಸೇರಿ ನಾಲ್ವರ ಬಂಧನ

ಕೇರಳದ ವಿದ್ಯಾರ್ಥಿಗಳ ನಗದು, ಚಿನ್ನಾಭರಣ ದರೋಡೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 7:10 IST
Last Updated 26 ಡಿಸೆಂಬರ್ 2019, 7:10 IST
   

ಬೆಂಗಳೂರು: ಕೇರಳದ ವಿದ್ಯಾರ್ಥಿಗಳು ನೆಲೆಸಿದ್ದ ಮನೆಗೆ ನುಗ್ಗಿ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟು, ಚಿನ್ನಾಭರಣ ದರೋಡೆ ಮಾಡಿದ್ದ ರೌಡಿಶೀಟರ್ ಸೇರಿ ನಾಲ್ವರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಲನ್‌ಗಾರ್ಡನ್ ನಿವಾಸಿ ರೌಡಿಶೀಟರ್ ಅಪ್ಪು ಅಲಿಯಾಸ್ ವಿಲಿಯಂ, ಶಶಿಧರ್ ಅಲಿಯಾಸ್ ಗುಂಡಾ, ಅವಿನಾಶ್ ಮತ್ತು ವಿದ್ಯಾರ್ಥಿ ಅಲೆನ್‌ ಪೌಲ್ ಬಂಧಿತರು. ಆರೋಪಿಗಳಿಂದ ಚಿನ್ನಾಭರಣ, ಲ್ಯಾಪ್‌ಟಾಪ್, ಐಪ್ಯಾಡ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಶಾಂತಿನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಬಿ. ಕಾಂ. ಓದುತ್ತಿರುವ ಕೇರಳದ ಆರು ವಿದ್ಯಾರ್ಥಿಗಳು, ಕಾಲೇಜು ಬಳಿಯಲ್ಲಿದ್ದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಈ ವಿದ್ಯಾರ್ಥಿಗಳಿಗೆ ಅಲೆನ್‌ ಪೌಲ್ ಸ್ನೇಹಿತನಾಗಿದ್ದು, ಆಗಾಗ ಅವರ ಮನೆಗೆ ಹೋಗಿ ಬರುತ್ತಿದ್ದ. ವಿದ್ಯಾರ್ಥಿಗಳ ಮನೆಯಲ್ಲಿ ಚಿನ್ನಾಭರಣ ಇರುವ ವಿಷಯ ಅಲೆನ್‌ಗೆ ತಿಳಿದಿತ್ತು. ಈ ವಿಷಯವನ್ನು ತನಗೆ ಪರಿಚಿತನಾಗಿದ್ದ ವಿಲಿಯಂಗೆ ಅಲೆನ್‌ ತಿಳಿಸಿದ್ದ. ಬಳಿಕ ಆರೋಪಿಗಳೆಲ್ಲರೂ ಸೇರಿ ದರೋಡೆಗೆ ಸಂಚು ರೂಪಿಸಿದ್ದರು.

ADVERTISEMENT

ಡಿ. 12ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಲಿಯಂ ತನ್ನ ಸಹಚರ ಜತೆ ವಿದ್ಯಾರ್ಥಿಗಳು ನೆಲೆಸಿದ್ದ ಮನೆಗೆ ಬಂದು ಚಾಕು ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡಲು ವಿದ್ಯಾರ್ಥಿಗಳು ನಿರಾಕರಿಸಿದಾಗ, ‘ನೀವು ಮಾದಕ ವ್ಯಸನಿಗಳು, ಗಾಂಜಾ ಮಾರಾಟ ಮಾಡುತ್ತಿದ್ದೀರಿ’ ಎಂದು ಬೆದರಿಸಿದ್ದ. ಇದಕ್ಕೆ ಹೆದರಿದ ವಿದ್ಯಾರ್ಥಿಗಳು, ಆರೋಪಿಗಳ ಪೈಕಿ ಒಬ್ಬನನ್ನು ಎಟಿಎಂ ಒಂದಕ್ಕೆ ಕರೆದುಕೊಂಡು ಹೋಗಿ ₹ 60 ಸಾವಿರ ಡ್ರಾ ಮಾಡಿ ಕೊಟ್ಟಿದ್ದರು.

ಅಷ್ಟಕ್ಕೇ ಬಿಡದ ಆರೋಪಿಗಳು, ವಿದ್ಯಾರ್ಥಿಗಳನ್ನು ಅವರ ಮನೆಯಲ್ಲಿಯೇ ಒಂದು ದಿನ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ಇನ್ನಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ನಂತರ ಆರೋಪಿಗಳು, ವಿದ್ಯಾರ್ಥಿಗಳ ಮನೆಯಲ್ಲಿದ್ದ ಚಿನ್ನಾಭರಣ, ಲ್ಯಾಪ್‌ ಟಾಪ್ ಮುಂತಾದ ವಸ್ತುಗಳನ್ನು ದರೋಡೆ ಮಾಡಿದ್ದರು.

ಘಟನೆಯಿಂದ ಹೆದರಿದ ವಿದ್ಯಾರ್ಥಿಗಳು ಪೊಲೀಸರಿಗೆ ದೂರು ನೀಡದೆ ಸುಮ್ಮನಾಗಿದ್ದರು. ವಕೀಲರೊಬ್ಬರು ಧೈರ್ಯ ಹೇಳಿದ ಬಳಿಕ ಅಶೋಕನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.