ADVERTISEMENT

ಹಿಟಾಚಿ ಯಂತ್ರ ಕದ್ದಿದ್ದ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 15:43 IST
Last Updated 20 ಜುಲೈ 2024, 15:43 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಇಲ್ಲಿನ ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ನಿಲುಗಡೆ ಮಾಡಿದ್ದ ಹಿಟಾಚಿ ಯಂತ್ರವನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಜಿಗಣಿಯ ಸಚ್ಚಿದಾನಂದ ಹಾಗೂ ಶಕ್ತಿವೇಲು ಬಂಧಿತ ಆರೋಪಿಗಳು. ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದ ಶೋಧ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಠಾಣಾ ವ್ಯಾಪ್ತಿಯಲ್ಲಿರುವ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಲಿಫ್ಟ್ ನಿರ್ಮಾಣ ಕಾಮಗಾರಿಗಾಗಿ ಗೋವಿಂದರಾಜು ಎಂಬುವವರು ಹಿಟಾಚಿ ತಂದು ನಿಲುಗಡೆ ಮಾಡಿದ್ದರು. ಅವರೊಂದಿಗೇ ಆರೋಪಿಗಳಾದ ಸಚ್ಚಿದಾನಂದ ಹಾಗೂ ಶಕ್ತಿವೇಲು ಅವರು ಕೆಲಸ ಮಾಡುತ್ತಿದ್ದರು. ಜುಲೈ 17ರ ರಾತ್ರಿ 1 ಗಂಟೆ ಸುಮಾರಿಗೆ ಲಾರಿ ಸಮೇತ ಆರೋಪಿಗಳು ಬಂದಿದ್ದರು. ಅದನ್ನು ಪ್ರಶ್ನಿಸಿದ್ದ ಕೋರ್ಟ್‌ನ ಭದ್ರತಾ ಸಿಬ್ಬಂದಿಗೆ ‘ಹಿಟಾಚಿ ನಮ್ಮದೇ. ಕಾಮಗಾರಿ ಮುಕ್ತಾಯ ಆಗಿರುವುದರಿಂದ ಬೇರೆ ಕಡೆಗೆ ಕೊಂಡೊಯ್ಯುತ್ತಿದ್ದೇವೆ’ ಎಂದು ಸುಳ್ಳು ಹೇಳಿದ್ದರು. ನಂತರ, ಹಿಟಾಚಿ ಯಂತ್ರವನ್ನು ಲಾರಿಯಲ್ಲಿ ಹಾಕಿಕೊಂಡು ಪರಾರಿ ಆಗಿದ್ದರು. ಬೆಳಿಗ್ಗೆ ಬಂದು ಕಾಮಗಾರಿ ನಡೆಸಲು ಮುಂದಾದ ವೇಳೆ ಕಳವು ನಡೆದಿರುವುದು ಗೊತ್ತಾಗಿತ್ತು. ಆರೋಪಿಗಳು ಹಿಟಾಚಿ ಕಳವು ಮಾಡುತ್ತಿರುವುದು ನ್ಯಾಯಾಲಯದ ಆವರಣದಲ್ಲಿ ಅಳವಡಿಸಿದ್ದ ದೃಶ್ಯಾವಳಿ ಸಿಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು ಪೊಲೀಸರು ಹೇಳಿದರು.

ಫೈನಾನ್ಸ್ ವ್ಯವಹಾರ: ಹಿಟಾಚಿ ಯಂತ್ರದ ಮಾಲೀಕರು ಹಾಗೂ ಆರೋಪಿಗಳ ನಡುವೆ 15 ವರ್ಷಗಳ ಸ್ನೇಹವಿತ್ತು. ಹಣಕಾಸಿನ ವ್ಯವಹಾರವನ್ನೂ ನಡೆಸಿದ್ದರು. ಹಣಕಾಸು ವ್ಯವಹಾರದಲ್ಲಿ ದ್ವೇಷ ಉಂಟಾಗಿತ್ತು. ಆ ದ್ವೇಷದಿಂದ ಹಿಟಾಚಿ ಯಂತ್ರ ಕಳವು ಮಾಡಿ ಮಾರಾಟಕ್ಕೆ ನಾಲ್ವರು ಆರೋಪಿಗಳು ಮುಂದಾಗಿದ್ದರು. ಜಿಗಣಿಯ ಹೋಟೆಲ್‌ವೊಂದರಲ್ಲಿ ಕುಳಿತು ಚರ್ಚಿಸುತ್ತಿದ್ದ ಇಬ್ಬರನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.