ADVERTISEMENT

Art of Living: ಅಂತರರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲಿರುವ ರಾಷ್ಟ್ರಪತಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 13:02 IST
Last Updated 13 ಫೆಬ್ರುವರಿ 2025, 13:02 IST
<div class="paragraphs"><p>Art of Living</p></div>

Art of Living

   Nikhil

ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಆಯೋಜಿಸಿರುವ 10ನೇ ಅಂತರರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಲಿದ್ದಾರೆ.

ಈ ಐತಿಹಾಸಿಕ ಸಮಾವೇಶದಲ್ಲಿ ರಾಜಕೀಯ, ವಾಣಿಜ್ಯ, ಕಲೆ ಮತ್ತು ಸಾಮಾಜಿಕ ಕ್ಷೇತ್ರಗಳ ಪ್ರಮುಖ ಮಹಿಳೆಯರು ಹಾಗೂ 60ಕ್ಕೂ ಹೆಚ್ಚು ವಕ್ತಾರರು ಹಾಗೂ 500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.

ADVERTISEMENT

 ಸುಮಾರು 115 ದೇಶಗಳಿಂದ 463 ವಕ್ತಾರರು ಹಾಗೂ 6,000ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ.

ರಾಷ್ಟ್ರಪತಿಯವರ ಜೊತೆಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋತ್, ಕೇಂದ್ರ ಸಚಿವೆ ಅನ್ನಪೂರ್ಣಾ ದೇವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ವಿದೇಶಾಂಗ ಸಚಿವೆ ಮೀನಾಕ್ಷಿ ಲೇಖಿ, ಕಾಮನ್‌ವೆಲ್ತ್‌ನ ಪ್ಯಾಟ್ರಿಸಿಯಾ ಸ್ಕಾಟ್‌ಲ್ಯಾಂಡ್, ಜಪಾನ್‌ ಮಾಜಿ ಪ್ರಧಾನಿಯವರ ಪತ್ನಿ ಅಕಿ ಅಬೆ, ಚಲನಚಿತ್ರ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ, ಹಿರಿಯ ನಟಿಯರಾದ ಹೇಮಾ ಮಾಲಿನಿ ಮತ್ತು ಶರ್ಮಿಳಾ ಟಾಗೋರ್, ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್, ಸೊನಾಕ್ಷಿ ಸಿನ್ಹಾ, ಹಾಗೂ ಉದ್ಯಮಿಗಳಾದ ರಾಧಿಕಾ ಗುಪ್ತಾ, ಕನಿಕಾ ಟೆಕ್ರೀವಾಲ್ ಭಾಗವಹಿಸುವರು.

ಭಾನುಮತಿ ನರಸಿಂಹನ್ ಅವರು ಮಹಿಳಾ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. ಇವರು ಆರ್ಟ್ ಆಫ್ ಲಿವಿಂಗ್‌ನ ಮಹಿಳಾ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿದ್ದಾರೆ. ಶಾಂತಿಯುತ, ಹಿಂಸಾಮುಕ್ತ ಜಗತ್ತನ್ನು ರೂಪಿಸುವ ಗುರುದೇವ ಶ್ರೀ ಶ್ರೀ ರವಿಶಂಕರ್‌ ಕನಸನ್ನು ಧ್ಯೇಯವಾಗಿಸಿಕೊಂಡಿರುವ ಅವರು, ಶಿಕ್ಷಣ, ಪರಿಸರ ಸುಸ್ಥಿರತೆ, ಮತ್ತು ಮಹಿಳಾ ಸಬಲೀಕರಣದ ಮೂಲಕ ಸಾಮಾಜಿಕ ಪರಿವರ್ತನೆಗೆ ಕಳೆದ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸಿದ್ದಾರೆ.

‘ಜಸ್ಟ್ ಬಿ‘ ಎಂಬ ಧ್ಯೇಯದೊಂದಿಗೆ ಈ ಸಮಾವೇಶ ನಡೆಯಲಿದ್ದು, ಇದು ಗುರುದೇವ ಶ್ರೀ ಶ್ರೀ ರವಿಶಂಕರವರ ಕವನದಿಂದ ಸ್ಫೂರ್ತಿ ಪಡೆದಿರುತ್ತದೆ. ಸಮಾವೇಶದಲ್ಲಿ ನಾಯಕತ್ವ, ಸ್ವ-ಅನ್ವೇಷಣೆ ಹಾಗೂ ಸಬಲೀಕರಣ ಕುರಿತಂತೆ ಆಳವಾದ ಚರ್ಚೆಗಳು ನಡೆಯಲಿವೆ. ಜೊತೆಗೆ, ಅಂತರರಾಷ್ಟ್ರೀಯ ಆಹಾರ ಮೇಳ ಹಾಗೂ ‘ಸೀತಾ ಚರಿತಂ‘ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಂಗೀತ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಕಲಾವಿದರು ಹಾಗೂ ತಾಂತ್ರಿಕ ತಂಡ ಪಾಲ್ಗೊಳ್ಳಲಿದ್ದಾರೆ.

ಈ ವರ್ಷದ ಸಮಾವೇಶದಲ್ಲಿ ಭಾರತೀಯ ಫ್ಯಾಷನ್ ವಿನ್ಯಾಸಕರಾದ ಸಬ್ಯಸಾಚಿ, ರಾಹುಲ್ ಮಿಶ್ರಾ, ಮನೀಷ್ ಮಲ್ಹೋತ್ರಾ, ಹಾಗೂ ರಾ ಮ್ಯಾಂಗೊ ಸೇರಿ ಮುಂತಾದವರ ವಿನ್ಯಾಸಗಳನ್ನು ಪ್ರದರ್ಶಿಸಲಾಗುತ್ತದೆ. ಈ ವಿನ್ಯಾಸಗಳನ್ನು ಹರಾಜು ಮಾಡಲಾಗುತ್ತಿದ್ದು, ಅದರಲ್ಲಿನ ಆದಾಯವನ್ನು ಆರ್ಟ್ ಆಫ್ ಲಿವಿಂಗ್‌ನ ಉಚಿತ ಶಾಲೆಗಳ ಮಕ್ಕಳ ಶಿಕ್ಷಣಕ್ಕಾಗಿ ಬಳಸಲಾಗುತ್ತದೆ.

ಪ್ರಸ್ತುತ, ಮಹಿಳಾ ನಾಯಕತ್ವ ಮತ್ತು ಲಿಂಗ ಸಮಾನತೆಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ರಾಷ್ಟ್ರಪತಿ ಮುರ್ಮು ಈ ಸಮಾವೇಶದ ಭಾಗವಹಿಸುವಿಕೆ ಅದರ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಈ ಸಮಾವೇಶದಿಂದ ದೊರಕುವ ಆದಾಯವನ್ನು ಬಾಲಕಿಯರ ಉಚಿತ ಶಿಕ್ಷಣಕ್ಕೆ ವಿನಿಯೋಗಿಸಲಾಗುತ್ತದೆ. ದೇಶದಾದ್ಯಂತ 1,300ಕ್ಕೂ ಹೆಚ್ಚು ಉಚಿತ ಶಾಲೆಗಳನ್ನು ನಿರ್ವಹಿಸುತ್ತಿರುವ ಆರ್ಟ್ ಆಫ್ ಲಿವಿಂಗ್, 1,00,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವನವನ್ನು ಪ್ರಭಾವಿತಗೊಳಿಸುತ್ತಿದೆ.

ಈ ಸಮಾವೇಶ ಕೇವಲ ಸಂವಾದವಷ್ಟೇ ಅಲ್ಲ, ಇದು ಮಹಿಳಾ ನಾಯಕತ್ವವನ್ನು ಉತ್ಸವಗೊಳಿಸುವ ಮತ್ತು ‘ಜಸ್ಟ್ ಬಿ’ ಎಂಬ ಆಂತರಿಕ ಯಾತ್ರೆಯ ಶುಭಾರಂಭವನ್ನು ಸೂಚಿಸುವ ಒಂದು ಸಂಚಲನವೇ ಆಗಿದೆ ಎಂದು ಆರ್ಟ್ ಆಫ್ ಲಿವಿಂಗ್‌ ಪ್ರಕಟನೆಯಲ್ಲಿ ತಿಳಿಸಿದೆ.

****

ಬೆಂಗಳೂರು–ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್‌ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ (ಫೆ. 14ರಿಂದ 16ರವರೆಗೆ) ನಡೆಯಲಿರುವ ಮೂರು ದಿನಗಳ 10ನೇ ಅಂತರರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಲಿದ್ದಾರೆ.

ಶ್ರೀ ಶ್ರೀ ರವಿಶಂಕರ ಗುರೂಜಿ ನೇತೃತ್ವದಲ್ಲಿ ನಡೆಯಲಿರುವ ಸಮ್ಮೇಳನದ ಮೊದಲನೇ ದಿನವಾದ ಶುಕ್ರವಾರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ದ್ರೌಪದಿ ಮುರ್ಮು ಅವರು ಉದ್ಘಾಟನಾ ಕಾರ್ಯಕ್ರಮ ನಡೆಯುವ ಅವಧಿ ಮಧ್ಯಾಹ್ನ 12.10ರಿಂದ 1.10ರವರೆಗೆ ಉಪಸ್ಥಿತರಿರಲಿದ್ದಾರೆ.

ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಆರ್ಟ್ ಆಫ್ ಲಿವಿಂಗ್‌ ಕೇಂದ್ರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.