ADVERTISEMENT

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ರಸ್ತೆಗಳ ಸ್ಥಿತಿ ದಾಖಲು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 22:30 IST
Last Updated 23 ಡಿಸೆಂಬರ್ 2022, 22:30 IST
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ರಸ್ತೆಗಳ ಸ್ಥಿತಿ ದಾಖಲು
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ರಸ್ತೆಗಳ ಸ್ಥಿತಿ ದಾಖಲು   

ಬೆಂಗಳೂರು: ನಗರದ ಪ್ರಮುಖ ರಸ್ತೆಗಳ ಸ್ಥಿತಿ ಹಾಗೂ ಅವ್ಯವಸ್ಥೆಗಳನ್ನು ಕೃತಕ ಬುದ್ಧಿಮತ್ತೆಯ (ಎಐ) ತಂತ್ರಜ್ಞಾನದೊಂದಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ದಾಖಲು ಮಾಡುವ ಯೋಜನೆಯನ್ನು ಬಿಬಿಎಂಪಿ ನಗರದಲ್ಲಿ ಜಾರಿಗೆ ತರುತ್ತಿದೆ.‌

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಸ್ಥಿತಿಯನ್ನು ‘ಆಟೊಮೇಡೆಟ್‌ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಸಿಸ್ಟಮ್‌’ ಮೂಲಕ ಸಮೀಕ್ಷೆ ಮಾಡಲಾಗುತ್ತದೆ. 1,434 ಕಿ.ಮೀ. ರಸ್ತೆಯ ಸರ್ವೆ ನಡೆಸಲು ಉದ್ದೇಶಿಸಲಾಗಿದೆ.

ರಸ್ತೆಯ ಸ್ಥಿತಿ, ಬಿರುಕು, ಗುಂಡಿ, ಹಾಳಾಗಿರುವುದು, ಉಬ್ಬು–ತಗ್ಗುಗಳನ್ನು ಕಂಪ್ಯೂಟರ್‌ ನೋಟದಲ್ಲಿ ದಾಖಲಿಸಲಾಗುತ್ತದೆ. ಈ ಸರ್ವೆಯಲ್ಲಿ ರಸ್ತೆ ದೀಪ, ಸೂಚನಾ ಫಲಕ, ಮೈಲಿಗಲ್ಲು ಸ್ಥಿತಿಯನ್ನು ಚಿತ್ರ ಹಾಗೂ ವಿಡಿಯೊ ರೂಪದಲ್ಲಿ ದಾಖಲಾಗುತ್ತವೆ.

ADVERTISEMENT

ಈ ಸರ್ವೆ ಎರಡು ಮಾದರಿಯಲ್ಲಿ ನಡೆಯಲಿದ್ದು, ಮೊದಲನೆಯದ್ದು ‘ಕಂಪ್ಯಾರಿಸನ್‌’. ಅಂದರೆ, ರಸ್ತೆಯಮಾಸ್ಟರ್‌ ವಿಡಿಯೊವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಅದನ್ನು ನಿತ್ಯದ ವಿಡಿಯೊಗಳೊಂದಿಗೆ ಹೋಲಿಕೆ ಮಾಡಿ ಯಾವುದಾದರೂ ಲೋಪವಾಗಿದ್ದರೆ ಅದನ್ನು ಸರಿಪಡಿಸಲಾಗುತ್ತದೆ. ಎರಡನೆಯದ್ದು, ‘ಐಡೆಂಟಿಫಿಕೇಷನ್‌’; ಇದಕ್ಕೆವಿಡಿಯೊದ ಅಗತ್ಯವಿಲ್ಲ. ರಸ್ತೆ ಗುಂಡಿಗಳು ಸೇರಿ ರಸ್ತೆ ತಡೆಗೋಡೆಗಳು, ರಸ್ತೆ ದೀಪಗಳು, ಸೋಲಾರ್‌ ದೀಪಗಳು ಹಾಳಾಗಿದ್ದರೆ ಅವುಗಳನ್ನುಗುರುತಿಸುವುದು.

ಪ್ರಾಯೋಗಿಕವಾಗಿ 145 ಕಿ.ಮೀ. ರಸ್ತೆಯಲ್ಲಿ ಈ ವ್ಯವಸ್ಥೆಯಡಿ ಸರ್ವೆ ನಡೆಸಲಾಗಿತ್ತು. ಅದು ಉತ್ತಮ ಫಲಿತಾಂಶ ನೀಡಿದ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನಂತರ ಎಲ್ಲ ರಸ್ತೆಗಳಿಗೂ ಈ ಯೋಜನೆ ವಿಸ್ತರಿಸುವ ಉದ್ದೇಶವಿದೆ ಎಂದು ಬಿಬಿಎಂಪಿ ಟ್ರಾಫಿಕ್‌ ಎಂಜಿನಿಯರ್‌ ಕೋಶದ (ಟಿಇಸಿ) ಎಂಜಿನಿಯರ್‌ಗಳು ತಿಳಿಸಿದರು.

₹88 ಲಕ್ಷ ವೆಚ್ಚದ ‘ಆಟೊಮೇಡೆಟ್‌ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಸಿಸ್ಟಮ್‌’ಮೂಲಕ ಸಮೀಕ್ಷೆ ನಡೆಸಲು ಡಿ.23 ರಂದು ಟೆಂಡರ್‌ ಆಹ್ವಾನಿಸಲಾಗಿದೆ.

ಬಸ್‌ ಬೇ: ನಗರದಲ್ಲಿ ಬಸ್‌ ಬೇ ನಿರ್ಮಾಣ ಹಾಗೂ ಅದರ ಸುತ್ತಮುತ್ತಲಿನ ಸೌಲಭ್ಯಗಳನ್ನೂ ಒದಗಿಸಲೂ ಬಿಬಿಎಂಪಿ ಮುಂದಾಗಿದೆ. ನಗರ ಹಲವು ಕಡೆ ಬಸ್‌ ಬೇಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಆರು ತಿಂಗಳಲ್ಲಿ ಈ ಯೋಜನೆಯನ್ನು ಮುಗಿಸುವ ಗಡುವು ನೀಡಲಾಗಿದೆ. ಸುಮಾರು ₹9.5 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.