
ಶಿವಲಿಂಗ
ಕೆಂಗೇರಿ: ‘ಇಡ್ಲಿ ಹಬ್ಬ’ ಎಂದೇ ಪ್ರಸಿದ್ಧವಾಗಿರುವ ಭಂಡೇಶ್ವರ ಸ್ವಾಮಿ ಆರಿದ್ರೋತ್ಸವ ಶನಿವಾರ ಕೆಂಗೇರಿ ಉಪನಗರದ ಏಕ ಬಿಲ್ವ ಬಂಡೆಮಠದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಋಷಿ ಮುನಿಗಳಿಗೆ, ದೇವತೆಗಳಿಗೆ ಕಂಟಕವಾಗಿ ಪರಿಣಮಿಸಿದ್ದ ಅಂಧಕಾಸುರನ ಸಂಹರಿಸಿದ ಶಿವನ ಕೋಪವನ್ನು ತಣಿಸಲು ಆರಿದ್ರ ದರ್ಶನ ಮಾಡಿಸಿದ ಪೌರಾಣಿಕ ಐತಿಹ್ಯದ ಭಾಗವಾಗಿ ಶತಮಾನಗಳಿಂದ ಆರಿದ್ರೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಬಹುತೇಕ ಎಲ್ಲಾ ಶಿವಾಲಯಗಳಲ್ಲಿ ಅಂದು ವಿಶೇಷ ಕಾರ್ಯಕ್ರಮಗಳು ನಡೆಯಲ್ಲಿದ್ದು, ಬಂಡೆಮಠದ ಭಂಡೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ನಡೆಯಲಿದೆ.
ಉತ್ಸವದ ಪ್ರಯುಕ್ತ ದೇವಾಲಯವನ್ನು ಹೂ ಮತ್ತು ದೀಪಗಳಿಂದ ಅಲಂಕರಿಸಲಾಗಿದೆ. ಬೆಂಗಳೂರಿನ ವಿವಿಧ ಭಾಗಗಳಿಂದ ಬರುವ ಭಕ್ತರಿಗೆ ಇಡ್ಲಿಯನ್ನು ಪ್ರಸಾದವಾಗಿ ನೀಡಲಾಗುತ್ತದೆ.
ಕೆಂಗೇರಿ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಆರಿದ್ರೋತ್ಸವವನ್ನು ಲಿಂಗಾಯತರೊಡಗೂಡಿ ಎಲ್ಲಾ ಸಮುದಾಯದವರು ಊರ ಹಬ್ಬವಾಗಿ ಆಚರಿಸುವುದು ಮತ್ತೊಂದು ವಿಶೇಷ. ಸಂಜೆ ಮೂಲ ದೇವರು ಭಂಡೇಶ್ವರ ಸ್ವಾಮಿಗೆ ಪೂಜೆ ನಡೆಯಲಿದೆ. ಬಳಿಕ ಕೆಂಗೇರಿವರೆಗೆ ರಥೋತ್ಸವ ಜರುಗಲಿದೆ. ರಥ ಸಾಗುವ ಬೀದಿಯನ್ನು ಅಲ್ಲಿನ ನಿವಾಸಿಗಳು ಶುಚಿಗೊಳಿಸಿರುತ್ತಾರೆ.
ಶತ ಶತಮಾನದಿಂದ ಆಚರಿಸಿಕೊಂಡು ಬರಲಾಗುತ್ತಿರುವ ಈ ಆರಿದ್ರೋತ್ಸವ, ಬಾಂಧವ್ಯ ವೃದ್ಧಿಗೆ ವೇದಿಕೆಯಾಗಿದೆ. ಜಾತಿ, ಮತವನ್ನು ಮೀರಿದ ಧಾರ್ಮಿಕ ಆಚರಣೆಯಾಗಿ, ಸಾಮರಸ್ಯದ ವೇದಿಕೆಯಾಗಿ ಎಲ್ಲರನ್ನೂ ಬೆಸೆದುಕೊಂಡು ಬರುತ್ತಿದೆ ಎಂದು ಬಂಡೆಮಠದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.