ADVERTISEMENT

ಜಾನಪದ ಕಲೆಗೆ ಸಿಗದ ಪ್ರೋತ್ಸಾಹ: ಸಾಹಿತಿ ಅರವಿಂದ ಮಾಲಗತ್ತಿ ಬೇಸರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 21:42 IST
Last Updated 2 ಜುಲೈ 2022, 21:42 IST
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅರವಿಂದ ಮಾಲಗತ್ತಿ, ಎನ್. ಮಂಜುಳಾ ಹಾಗೂ ಬಿ. ಮಂಜಮ್ಮ ಜೋಗತಿ ಅವರು ‘ದುಡಿ’ ಬಾರಿಸುವ ಮೂಲಕ ಸಾಕ್ಷ್ಯಚಿತ್ರ ಬಿಡುಗಡೆಗೆ ಚಾಲನೆ ನೀಡಿದರು. ಕಲಾವಿದರಾದ ಚಂದ್ರಶಾ ಮತ್ತು ಹಲಗೆ ದುರ್ಗಮ್ಮ ಇದ್ದಾರೆ - ಪ್ರಜಾವಾಣಿ ಚಿತ್ರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅರವಿಂದ ಮಾಲಗತ್ತಿ, ಎನ್. ಮಂಜುಳಾ ಹಾಗೂ ಬಿ. ಮಂಜಮ್ಮ ಜೋಗತಿ ಅವರು ‘ದುಡಿ’ ಬಾರಿಸುವ ಮೂಲಕ ಸಾಕ್ಷ್ಯಚಿತ್ರ ಬಿಡುಗಡೆಗೆ ಚಾಲನೆ ನೀಡಿದರು. ಕಲಾವಿದರಾದ ಚಂದ್ರಶಾ ಮತ್ತು ಹಲಗೆ ದುರ್ಗಮ್ಮ ಇದ್ದಾರೆ - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜಾನಪದ ಕಲೆಯನ್ನು ತಂತ್ರಜ್ಞಾನದೊಂದಿಗೆ ಬೆಸೆಯುವ ಕೆಲಸ ಆಗಬೇಕು. ಇಲ್ಲವಾದರೆ ಈ ಕಲೆ ಮೂಲೆಗುಂಪಾಗುತ್ತದೆ’ ಎಂದು ಸಾಹಿತಿಅರವಿಂದ ಮಾಲಗತ್ತಿ ತಿಳಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ ನಗರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಲಾವಿದರ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ, ಮಾತನಾಡಿದರು.

‘ಜಾನಪದ ಕಲೆಗೆ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಮಾನ್ಯತೆ ದೊರೆಯಬೇಕು. ಈ ಕಲೆಗೆ ನಿರೀಕ್ಷಿತ ಮಟ್ಟದ ಪ್ರೋತ್ಸಾಹ ದೊರೆಯುತ್ತಿಲ್ಲ. ಪ್ರಪಂಚದ ಪ್ರಥಮ ಜಾನಪದ ವಿಶ್ವವಿದ್ಯಾಲಯ ರಾಜ್ಯದಲ್ಲಿದೆ. ಆದರೆ, ಅದರ ಕಾರ್ಯನಿರ್ವಹಣೆ ತೃಪ್ತಿದಾಯಕವಾಗಿಲ್ಲ. ಈ ಕಲೆಯ ಪ್ರಸಾರಕ್ಕೆಸಾಮಾಜಿಕ ಜಾಲತಾಣಗಳು ಸೇರಿ ವಿವಿಧ ಆನ್‌ಲೈನ್ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್. ಮಂಜುಳಾ, ಅಕಾಡೆಮಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ಮಾತನಾಡಿದರು.

7 ಕಲಾವಿದರ ಸಾಕ್ಷ್ಯಚಿತ್ರ ಬಿಡುಗಡೆ

ಕರ್ನಾಟಕ ಜಾನಪದ ಅಕಾಡೆಮಿಯು ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಸಿದ್ಧಪಡಿಸಿದ ಏಳು ಕಲಾವಿದರ ಸಾಕ್ಷ್ಯಚಿತ್ರಗಳನ್ನು ಬಿಡುಗಡೆ ಮಾಡಲಾಯಿತು.

ಬೀದರ್‌ನ ಜಾನಪದ ಹಾಡುಗಾರ ಚಂದ್ರಶಾ, ಚಾಮರಾಜನಗರದ ಬೇಟೆಮನೆ ಸೇವೆ ಕಲಾವಿದ ವೆಂಕಟರಮಣಸ್ವಾಮಿ, ಬಳ್ಳಾರಿಯ ಹಗಲುವೇಷ ಕಲಾವಿದ ಅಶ್ವರಾಮಣ್ಣ, ಚಿತ್ರದುರ್ಗದ ಮಹಿಳಾ ತಮಟೆ ಕಲಾವಿದೆ ಹಲಗೆ ದುರ್ಗಮ್ಮ, ರಾಮನಗರದ ತಮಟೆ ವಾದನ ಕಲಾವಿದ ತಿಮ್ಮಯ್ಯ, ಉಡುಪಿಯ ಕೊರಗರ ಡೋಲು ಕಲಾವಿದ ತೇಜು ಕೊರಗ ಹಾಗೂ ಉತ್ತರ ಕನ್ನಡದ ಗೊಂಡರ ಢಕ್ಕೆ ಕುಣಿತ ಕಲಾವಿದ ಸೋಮಯ್ಯ ಗೊಂಡ ಅವರನ್ನು ಪರಿಚಯಿಸುವ ಸಾಕ್ಷ್ಯಚಿತ್ರ ಬಿಡುಗಡೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.