
ನಗರದಲ್ಲಿ ಸೋಮವಾರ ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ ಕುವೆಂಪು ಜಯಂತಿ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ (ಎಡದಿಂದ) ಅಪ್ಪಗೆರೆ ತಿಮ್ಮರಾಜು, ಬಾಲಕೃಷ್ಣ, ಪಿ.ಮೂರ್ತಿ, ಸೌಮ್ಯನಾಥ ಸ್ವಾಮೀಜಿ ಮತ್ತು ಕೆ.ಸಿ ಮೂರ್ತಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
-ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಸಮಾಜಕ್ಕೆ ವಿಶ್ವ ಮಾನವ ಸಂದೇಶ ನೀಡಿದ ಸಾಹಿತಿ ಕುವೆಂಪು ಅವರಿಗೆ ಭಾರತ ರತ್ನ ಪ್ರಶಸ್ತಿ ಜತೆಗೆ ನೊಬೆಲ್ ಶಾಂತಿ ಪುರಸ್ಕಾರವನ್ನೂ ನೀಡಬೇಕು’ ಎಂದು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಲಹೆ ಮಾಡಿದರು.
ಗಾಂಧಿ ನಗರದ ಗುಬ್ಬಿವೀರಣ್ಣ ರಂಗಮಂದಿರ ರಸ್ತೆಯಲ್ಲಿ ಕನ್ನಡ ಕರ್ನಾಟಕ ವೇದಿಕೆ ಸೋಮವಾರ ಆಯೋಜಿಸಿದ್ದ ಕುವೆಂಪು ಜಯಂತಿ ಬೆಳ್ಳಿಹಬ್ಬದಲ್ಲಿ ಮಾತನಾಡಿದ ಅವರು, ‘ಕುವೆಂಪು ಅಂತಹವರಿಗೆ ಭಾರತರತ್ನ ಸೇರಿದಂತೆ ಯಾವುದೇ ಪ್ರಶಸ್ತಿಯನ್ನು ಕೊಡಬೇಕು ಎಂದು ಸಂಘಟನೆಗಳು ಕೇಳಬಾರದು. ಸರ್ಕಾರವೇ ಹುಡುಕಿ ಪ್ರಶಸ್ತಿ ನೀಡಿದಾಗ ಅಂತಹ ಪ್ರಶಸ್ತಿಯ ಮೌಲ್ಯ ಹೆಚ್ಚಲಿದೆ‘ ಎಂದು ತಿಳಿಸಿದರು.
‘ಬೆಂಗಳೂರು ನಗರ ಬೃಹತ್ ಆಗಿ ಬೆಳೆದಿದೆ. ಇಲ್ಲಿನ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡಲು ಕೌಶಲವನ್ನು ವೃದ್ದಿಸಬೇಕು. ಹಲವು ದೇಶಗಳಲ್ಲಿ ಯುವಕರ ಕೌಶಲ ಪ್ರಮಾಣ ಶೇ 90ರಷ್ಟಿದೆ. ನಮ್ಮಲ್ಲಿ ಈ ಪ್ರಮಾಣ ಶೇ 10ರಷ್ಟೂ ಇಲ್ಲ. ಉಪಮುಖ್ಯಮಂತ್ರಿಯಾಗಿದ್ದಾಗ ಕೌಶಲ ಶಿಕ್ಷಣಕ್ಕೆ ಒತ್ತು ನೀಡಿ ಕಾರ್ಯಕ್ರಮ ರೂಪಿಸಿದೆ. ಈಗಿನ ಸರ್ಕಾರ ಗ್ಯಾರಂಟಿ ಯೋಜನೆಯಲ್ಲಿ ಮುಳುಗಿದೆ. ಇದರ ಬದಲು ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ, ಉದ್ಯೋಗದ ಗ್ಯಾರಂಟಿಯನ್ನು ಸರ್ಕಾರ ಕೊಡಲಿ’ ಎಂದು ಹೇಳಿದರು.
ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ‘ಕನ್ನಡಿಗರು ಅಭಿಮಾನ ಬೆಳೆಸಿಕೊಳ್ಳಬೇಕು. ಕುವೆಂಪು ಸಹಿತ ಹಲವು ದಾರ್ಶನಿಕರು ಕನ್ನಡ ಭಾಷೆ ಉಳಿಸಿ ಬೆಳೆಸಲು ಶ್ರಮಿಸಿದ್ದಾರೆ. ಹಲವು ಸಂಘಟನೆಗಳು ನಾಡು, ನುಡಿ ವಿಚಾರದಲ್ಲಿ ತೋರುತ್ತಿರುವ ಅಭಿಮಾನ ಪ್ರತಿಯೊಬ್ಬರ ಬದುಕಿನ ಭಾಗವಾಗಬೇಕು’ ಎಂದರು.
ವೇದಿಕೆಯ ಅಧ್ಯಕ್ಷ ಕೆ.ಸಿ.ಮೂರ್ತಿ, ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬೊಮ್ಮಸಂದ್ರ ನಟರಾಜ್, ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ.ಮೂರ್ತಿ, ಮಹಿಳಾ ಘಟಕದ ಅಧ್ಯಕ್ಷ ಉಮಾದೇವಿ, ಚಾಲಕರ ಒಕ್ಕೂಟದ ಅಧ್ಯಕ್ಷ ನಾರಾಯಣಸ್ವಾಮಿ, ವಿಶ್ವ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ದೇವರಾಜ ಹಾಜರಿದ್ದರು. ಕಲಾವಿದ ಅಪ್ಪಗೆರೆ ತಿಮ್ಮರಾಜು ತಂಡದವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.