
ಬೆಂಗಳೂರು: ಉದ್ಯಮಗಳು ಇಲ್ಲಿವರೆಗೆ ತಂತ್ರಾಂಶವನ್ನು (ಸಾಫ್ಟ್‌ವೇರ್) ಅವಲಂಬಿಸಿದ್ದವು. ಇನ್ನು ಮುಂದೆ ಕೃತಕ ಬುದ್ಧಿಮತ್ತೆಯನ್ನು (ಎಐ) ಅವಲಂಬಿಸಿರಲಿವೆ. ಅದಕ್ಕೆ ಪೂರಕವಾಗಿ ನ್ಯಾನೊ ಚಿಪ್ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಕ್ವಾಲ್ಕಾಮ್ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿದ 2ಎನ್‌ಎಂ ಸೆಮಿಕಂಡಕ್ಟರ್ ವಿನ್ಯಾಸದ ನ್ಯಾನೊ ಚಿಪ್ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.
ಈ ಅತಿ ಸಣ್ಣ ಚಿಪ್‌ನೊಳಗೆ ಇಡೀ ಮಹಾಭಾರತ, ರಾಮಾಯಣ ಎಲ್ಲ ಪುರಾಣಗಳನ್ನು ತೋರಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಸೆಮಿಕಂಡಕ್ಟರ್ ತಂತ್ರಜ್ಞಾನಗಳನ್ನು ಭವಿಷ್ಯಕ್ಕಾಗಿ ಹೇಗೆ ವಿನ್ಯಾಸಗೊಳಿಸಲಾಗುತ್ತಿದೆ ಎನ್ನುವುದನ್ನು ಕೇಂದ್ರ ಸರ್ಕಾರ ನೋಡುತ್ತಿದೆ. 28 ನ್ಯಾನೊ ಚಿಪ್‌ಗಳನ್ನು ಸಿದ್ಧಪಡಿಸಿದೆ. ಏಳು ನ್ಯಾನೊಚಿಪ್‌ಗಳು ತಯಾರಾಗುತ್ತಿವೆ ಎಂದು ವಿವರಿಸಿದರು.
ಕ್ವಾಲ್ಕಾಂನ ಎಂಜಿನಿಯರಿಂಗ್ ಸಾಮರ್ಥ್ಯ, ಆಳವಾದ ವಿನ್ಯಾಸದ ಸಾಮರ್ಥ್ಯಗಳು ಮತ್ತು ಭಾರತಕ್ಕೆ ದೀರ್ಘಾವಧಿ ಬದ್ಧತೆ ಪರಿಣಾಮಕಾರಿಯಾಗಿರುವುದು ಅದರ ಕಾರ್ಯಗಳಿಂದ ಗೊತ್ತಾಗಿದೆ. ಭಾರತದ ಡಿಸೈನ್ ಇಕೊಸಿಸ್ಟಂಗಳು ಜಾಗತಿಕವಾಗಿ ಸ್ಪರ್ಧಾತ್ಮಕ ಸೆಮಿಕಂಡಕ್ಟರ್ ಉದ್ಯಮ ನಿರ್ಮಿಸುವ ನಮ್ಮ ಧ್ಯೇಯಕ್ಕೆ ಪೂರಕವಾಗಿದೆ ಎಂದರು.
ಎಲೆಕ್ಟ್ರಾನಿಕ್ಸ್ ಆ್ಯಂಡ್ ಐಟಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಸಿಇಒ ಅಮಿತೇಶ್ ಕುಮಾರ್ ಸಿನ್ಹಾ ಮಾತನಾಡಿ, ‘ಭಾರತದ ಸೆಮಿಕಂಡಕ್ಟರ್ ಬೆಳವಣಿಗೆಯ ಧ್ಯೇಯವು ಸದೃಢವಾಗಿ ಮುನ್ನಡೆಯುತ್ತಿದೆ. ಅದಕ್ಕೆ ಡಿಸೈನ್ ಇಕೊಸಿಸ್ಟಂ ಮತ್ತು ಸುಸ್ಥಿರವಾದ ಉದ್ಯಮದ ಭಾಗವಹಿಸುವಿಕೆಯ ಬೆಂಬಲ ದೊರೆತಿದೆ’ ಎಂದು ವಿವರಿಸಿದರು.
ಕ್ವಾಲ್ಕಾಂ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಿರಿಯ ಉಪಾಧ್ಯಕ್ಷ ಶ್ರೀನಿ ಮದ್ದಾಲಿ ಮಾತನಾಡಿ, ‘ಜಾಗತಿಕ ಪ್ರೋಗ್ರಾಮ್ ಮತ್ತು ಆರ್ಕಿಟೆಕ್ಚರ್ ತಂಡಗಳೊಂದಿಗೆ ಕೆಲಸ ಮಾಡಲು ಅತ್ಯುತ್ತಮ ಪ್ರತಿಭೆ ಬೇಕು. ಭಾರತದ ಎಂಜಿನಿಯರ್‌ಗಳು ಸತತವಾಗಿ ಜಾಗತಿಕ ಗುಣಮಟ್ಟವನ್ನು ಪೂರೈಸುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಕ್ವಾಲ್ಕಾಂ ಎಂಜಿನಿಯರಿಂಗ್ ಹಿರಿಯ ಉಪಾಧ್ಯಕ್ಷ ಶಶಿ ರೆಡ್ಡಿ, ಉಪಾಧ್ಯಕ್ಷ ಮಹೇಶ್ ಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.