ADVERTISEMENT

ವಕೀಲರ ಮೇಲಿನ ಹಿಂಸೆ ನಿಷೇಧ ಮಸೂದೆಗೆ ಸದನ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 15:56 IST
Last Updated 14 ಡಿಸೆಂಬರ್ 2023, 15:56 IST
   

ವಿಧಾನಸಭೆ: ವೃತ್ತಿಗೆ ಸಂಬಂಧಿಸಿದಂತೆ ವಕೀಲರ ಮೇಲೆ ಹಲ್ಲೆ ನಡೆಸುವುದು, ಬೆದರಿಕೆ ಒಡ್ಡುವುದು ಮತ್ತು ಕೆಲಸಕ್ಕೆ ಅಡ್ಡಿಪಡಿಸುವುದನ್ನು ನಿಷೇಧಿಸುವ ‘ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆ–2023’ಕ್ಕೆ ಸದನವು ಗುರುವಾರ ಒಪ್ಪಿಗೆ ನೀಡಿತು.

ಹಲ್ಲೆ ನಡೆಸುವವರು, ಬೆದರಿಕೆ ಒಡ್ಡುವವರಿಗೆ ಆರು ತಿಂಗಳಿನಿಂದ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ₹ 1 ಲಕ್ಷದವರೆಗೆ ದಂಡ ವಿಧಿಸಲು ಈ ಮಸೂದೆ ಅವಕಾಶ ಕಲ್ಪಿಸಲಿದೆ. ಈ ಕಾಯ್ದೆಯ ಅಡಿಯಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆಯನ್ನು ವಿಶೇಷ ನ್ಯಾಯಾಲಯಗಳ ಮೂಲಕ ನಡೆಸಲಾಗುತ್ತದೆ.

ಯಾವುದೇ ಅಪರಾಧ ಪ್ರಕರಣದಲ್ಲಿ ವಕೀಲರ ಬಂಧನ ಆದರೆ ಸದರಿ ವಕೀಲ ಸದಸ್ಯನಾಗಿರುವ ವಕೀಲರ ಸಂಘದ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ 24 ಗಂಟೆಗಳೊಳಗೆ ಪೊಲೀಸರು ಮಾಹಿತಿ ನೀಡಬೇಕೆಂಬ ಅಂಶವೂ ಮಸೂದೆಯಲ್ಲಿದೆ.

ADVERTISEMENT

ಬಿಜೆಪಿಯ ಎಸ್‌. ಸುರೇಶ್‌ ಕುಮಾರ್, ‘ವಕೀಲರು ಧೈರ್ಯದಿಂದ ಕೆಲಸ ಮಾಡಲು ಇದರಿಂದ ಸಾಧ್ಯವಾಗಲಿದೆ. ಹಲ್ಲೆಗೊಳಗಾಗಿ ಕೆಲಸ ಮಾಡಲಾಗದ ಸ್ಥಿತಿ ತಲುಪುವ ವಕೀಲರಿಗೆ ಪರಿಹಾರ ನೀಡುವ ಅಂಶವನ್ನೂ ಸೇರಿಸಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಎ.ಎಸ್‌. ಪೊನ್ನಣ್ಣ , ‘ವಕೀಲರ ಮೇಲೆ ಹಲ್ಲೆ ನಡೆಸುವವರಿಗೆ ರಾಜಸ್ಥಾನದಲ್ಲಿರುವಂತೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ವಕೀಲರ ಬಂಧನದ ಬಳಿಕ ಬಾರ್‌ ಕೌನ್ಸಿಲ್‌ಗೆ ಮಾಹಿತಿ ನೀಡುವುದು, ಪರಿಹಾರ ಮತ್ತಿತರ ಅಂಶಗಳನ್ನು ನಿಯಮಗಳಲ್ಲಿ ಸ್ಪಷ್ಟಪಡಿಸುವುದಾಗಿ ಕಾನೂನು ಸಚಿವ ಎಚ್‌.ಕೆ. ಪಾಟೀಲ ಭರವಸೆ ನೀಡಿದರು. ಬಳಿಕ ಮಸೂದೆಗೆ ಅಂಗೀಕಾರ ನೀಡಲಾಯಿತು.

ಬಾಂಬೆ ಸಾರ್ವಜನಿಕ ಟ್ರಸ್ಟ್‌ ಕಾಯ್ದೆ–1950 ರ ಅಡಿಯಲ್ಲಿ ನೋಂದಣಿಯಾಗಿದ್ದ ಸಾರ್ವಜನಿಕ ಮತ್ತು ಕೌಟುಂಬಿಕ ಟ್ರಸ್ಟ್‌ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಪುನಃ ಅದೇ ಕಾಯ್ದೆ ವ್ಯಾಪ್ತಿಗೆ ತರುವ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಮಸೂದೆ– 2023’ಕ್ಕೂ ವಿಧಾನಸಭೆ ಅಂಗೀಕಾರ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.