ADVERTISEMENT

ಸಹಾಯಕ ಎಂಜಿನಿಯರ್‌: ಕೆಎಟಿ ತೀರ್ಪು ಪಾಲಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 16:27 IST
Last Updated 21 ಫೆಬ್ರುವರಿ 2022, 16:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕಿರಿಯ ಎಂಜಿನಿಯರ್‌ (ಬ್ಯಾಕ್‌ಲಾಗ್) ಹುದ್ದೆಯಿಂದ ಸಹಾಯಕ ಎಂಜಿನಿಯರ್‌ ಹುದ್ದೆಗೆ ವೃಂದ ಬಲಾವಣೆ ಮಾಡಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್‌ಸಿ, ಎಸ್‌ಟಿ ಎಂಜಿನಿಯರ್‌ಗಳನ್ನು ವೃಂದ ಬದಲಾವಣೆ ಹೊಂದಿದ ದಿನದಿಂದ ಪೂರ್ವಾನ್ವಯಗೊಳಿಸಿ ಪರಿಗಣಿಸಬೇಕು’ ಎಂದು ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘ ಆಗ್ರಹಿಸಿದೆ.

ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಮನವಿ ಸಲ್ಲಿಸಿರುವ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ, ‘ವೃಂದ ಬದಲಾವಣೆಯ ದಿನದಿಂದ ಸಹಾಯಕ ಎಂಜಿನಿಯರ್‌ ಎಂದು ಪರಿಗಣಿಸುವಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ತೀರ್ಪು ನೀಡಿದರೂ, ಸಾಧ್ಯ ಇಲ್ಲವೆಂದು ಇಲಾಖೆ ಹಿಂಬರಹ ನೀಡಿದೆ’ ಎಂದಿದ್ದಾರೆ.

‘ವೃಂದ ಬದಲಾವಣೆಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಯಾವುದೇ ಆಕ್ಷೇಪ ಎತ್ತಿಲ್ಲ. ಹೀಗಾಗಿ, ಸಾಮಾನ್ಯ ವರ್ಗದವರು ಉದ್ಯೋಗಕ್ಕೆ ಸೇರಿದ ನಂತರ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಪದವಿ ಗಳಿಸಿ ವೃಂದ ಬದಲಾವಣೆ ಮಾಡಿಕೊಂಡ ರೀತಿಯಲ್ಲಿಯೇ ಎಸ್‌ಸಿ, ಎಸ್‌ಟಿ ನೌಕರರಿಗೂ ಪೂರ್ವಾನ್ವಯವಾಗಿ ಜ್ಯೇಷ್ಠತೆ ನೀಡಬೇಕು. ಒಂದೇ ಕಾನೂನಿನಡಿ ತಾರತಮ್ಯ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಆಗ್ರಹಿಸಿದ್ದಾರೆ.

ADVERTISEMENT

ಮತ್ತೊಂದು ಪ್ರತ್ಯೇಕ ಮನವಿಯಲ್ಲಿ, ‘ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ವಿಭಾಗ–1) ವೃಂದದ ಬಡ್ತಿ ಪಟ್ಟಿಯಲ್ಲಿ ಬ್ಯಾಕ್‌ಲಾಗ್‌ ಎಂಜಿನಿಯರ್‌ಗಳಿಗೆ 1978 ರ ಬಡ್ತಿ ಆದೇಶದಂತೆ ಮತ್ತು ಬಿ.ಕೆ. ಪವಿತ್ರ–2 ಪ್ರಕರಣದ ತೀರ್ಪಿನಂತೆ ಮೀಸಲಾತಿ ನೀಡಿ, ಜ್ಯೇಷ್ಠತೆಯಲ್ಲಿ ಅರ್ಹತೆಯ ದಿನ ನಿಗದಿಪಡಿಸಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.