ADVERTISEMENT

ಬೆಂಗಳೂರು | ‘ಕನ್ನಡ ಸಾಹಿತ್ಯಕ್ಕೆ ಧ್ವನಿ ತಂತ್ರಾಂಶಗಳ ಸೌಲಭ್ಯ ಕಲ್ಪಿಸಿ’

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 19:12 IST
Last Updated 27 ಡಿಸೆಂಬರ್ 2025, 19:12 IST
<div class="paragraphs"><p>ಅಂಧರ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ಅಂಧರ ಮಹಿಳಾ ತಂಡದ ನಾಯಕಿ ದೀಪಿಕಾ ಟಿ.ಸಿ., ಕಾವ್ಯಾ ಎನ್.ಆರ್., ಕಾವ್ಯಾ ವಿ. ಅವರನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. </p><p>&nbsp;ಪ್ರಜಾವಾಣಿ ಚಿತ್ರ</p></div>

ಅಂಧರ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ಅಂಧರ ಮಹಿಳಾ ತಂಡದ ನಾಯಕಿ ದೀಪಿಕಾ ಟಿ.ಸಿ., ಕಾವ್ಯಾ ಎನ್.ಆರ್., ಕಾವ್ಯಾ ವಿ. ಅವರನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.

 ಪ್ರಜಾವಾಣಿ ಚಿತ್ರ

   

ಬೆಂಗಳೂರು: ಕನ್ನಡದ ಪ್ರಮುಖ ಸಾಹಿತಿಗಳು, ಲೇಖಕರ ಕೃತಿಗಳನ್ನು ಧ್ವನಿ ತಂತ್ರಾಂಶಗಳ ಸಹಾಯದಿಂದ ಅವಲೋಕಿಸುವ ಸೌಲಭ್ಯವನ್ನು ಕಲ್ಪಿಸಬೇಕು. ಈ ಮೂಲಕ ಅಂಧ ಸಮುದಾಯದವರಿಗೂ ಕನ್ನಡ ಸಾಹಿತ್ಯ ಪರಿಚಯಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಅಖಿಲ ಕರ್ನಾಟಕ ಅಂಧರ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಒಕ್ಕೊರಲಿನಿಂದ ಆಗ್ರಹಿಸಿತು.

ADVERTISEMENT

ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು, ಸಮರ್ಥನಂ ಟ್ರಸ್ಟ್‌ ಫಾರ್‌ ದಿ ಡಿಸೇಬಲ್ಡ್‌, ದೀಪಾ ಅಕಾಡೆಮಿ ಫಾರ್‌ ದಿ ಡಿಫರೆಂಟ್ಲಿ ಏಬಲ್ಡ್‌, ಸಹಸ್ಪಂದನೆ ಕರ್ನಾಟಕ ಅಂಧರ ವಿಮೋಚನ ವೇದಿಕೆ, ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನ ಸಹಯೋಗದಲ್ಲಿ ಶನಿವಾರ ಸಮ್ಮೇಳನ ನಡೆಯಿತು.  

ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಮಾತನಾಡಿ, ‘ಇತ್ತೀಚೆಗೆ ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆ, ವಾಣಿಜ್ಯ, ಉದ್ಯಮ, ಕಾನೂನು, ಆಡಳಿತ ಹೀಗೆ ಹಲವು ಕ್ಷೇತ್ರಗಳಲ್ಲಿ ಪ್ರತಿಭಾನ್ವಿತ ಅಂಧರು ಯಶಸ್ವಿಯಾಗು ತ್ತಿದ್ದಾರೆ. ಇದು ಈ ಸಮುದಾಯದ ಭವಿಷ್ಯದ ಭರವಸೆಯ ಬೆಳಕಾಗಿದೆ. ತಂತ್ರಜ್ಞಾನ, ಶಿಕ್ಷಣದ ಆಧುನಿಕ ಸೌಲಭ್ಯ ಸಾಧನಗಳಿಂದ ಅಂಧರು ಹೆಚ್ಚು–ಹೆಚ್ಚು ಜಾಗೃತವಾಗುವುದರ
ಜೊತೆಗೆ ಆತ್ಮವಿಶ್ವಾಸವನ್ನು
ಬೆಳೆಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು. 

‘ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯಮಿಕ, ಆರ್ಥಿಕ, ಸಾಂಸ್ಕೃತಿಕ ಹೀಗೆ ಎಲ್ಲ
ಕ್ಷೇತ್ರಗಳಲ್ಲೂ ಜಾತಿ–ಮತ ಪಂಥ, ದ್ವಂದ್ವ, ಅಂಗ–ಲಿಂಗ ತಾರತಮ್ಯ ಇರುವುದು ಕಳವಳಕಾರಿ. ಅಂಧ ಸಮುದಾಯಕ್ಕೆ ಸಂಬಂಧಿಸಿದಂತೆ ಶಿಕ್ಷಣ, ತರಬೇತಿ, ಉದ್ಯೋಗ, ಮೀಸಲಾತಿ ಮತ್ತಿತರ ಸೌಲಭ್ಯಗಳಲ್ಲಿ ಸಮಾನ ಅವಕಾಶ ದೊರೆಯಬೇಕು. ಅಂಧರು ತಮ್ಮ ಅರಿವನ್ನು ವಿಸ್ತರಿಸಿಕೊಳ್ಳಲು
ಅನುಕೂಲವಾಗುವಂತೆ ಬ್ರೈಲ್ ಪುಸ್ತಕಗಳು, ಸ್ಪರ್ಶತಂತ್ರದ ನಕ್ಷೆಗಳು, ಗ್ರಾಮಾಂತರ ಪ್ರದೇಶದಲ್ಲೂ ಗಣಕ ಸಾಧನ ಪ್ರಯೋಗಾಲಯಗಳು, ದೂರ ಶಿಕ್ಷಣ ಸೌಲಭ್ಯವನ್ನು ಒದಗಿಸಬೇಕು’ ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಅಂಧ ಲೇಖಕರು ರಚಿಸಿದ ಏಳು ಪುಸ್ತಕಗಳು, ಬರಗೂರು ರಾಮಚಂದ್ರಪ್ಪ ಅವರು ಸಂಪಾದಿಸಿದ ಕುವೆಂಪು ವಿಚಾರ ಕ್ರಾಂತಿ ಪುಸ್ತಕದ ಬ್ರೈಲ್‌ ಲಿಪಿಯ ಕೃತಿ
ಜನಾರ್ಪಣೆಗೊಳಿಸಲಾಯಿತು.

ಕನ್ನಡ ಸಾಹಿತ್ಯದ ಪ್ರಮುಖ ಕವಿಗಳು, ಸಾಹಿತಿಗಳ ಪ್ರಮುಖ ಕವಿತೆಗಳು ಮತ್ತು ಬರಹಗಳನ್ನು ಬ್ರೈಲ್‌ ಲಿಪಿಯಲ್ಲಿ ತರಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಜನೆ ರೂಪಿಸಬೇಕು. ಇದರಿಂದ ಅಂಧರಿಗೆ ಕನ್ನಡ ಸಾಹಿತ್ಯ ಪರಂಪರೆಯ ಪಕ್ಷಿ ನೋಟ ಪರಿಚಯವಾಗಲಿದೆ
ಬರಗೂರು ರಾಮಚಂದ್ರಪ್ಪ, ಸಾಹಿತಿ
ಸರ್ಕಾರವು ಅಂಧರ ದಂಡೇ ಆಗಿದೆ. ಆ ಅಂಧತ್ವಕ್ಕೆ ಶಸ್ತ್ರಚಿಕಿತ್ಸೆ ಮಾಡಿ, ಅಂಧ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕು
 ಎಲ್. ಹನುಮಂತಯ್ಯ, ಕವಿ
ಅಂಧರು ಸ್ವಾಭಿಮಾನದಿಂದ ಬದುಕುವ ತಂತ್ರಗಳನ್ನುರೂಪಿಸಿಕೊಂಡಿದ್ದಾರೆ. ಇದರಲ್ಲಿ ಬರೆವಣಿಗೆಯು ಒಂದಾಗಿದ್ದು, ಇತರರಿಗೆ ಸಮಾನವಾಗಿ ಕಾವ್ಯ, ಸಾಹಿತ್ಯವನ್ನು ರಚಿಸಿರುವುದು ವಿಶೇಷ ಸಂಗತಿಯಾಗಿದೆ   
ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಕನ್ನಡದ ಎಲ್ಲ ಪುಸ್ತಕಗಳನ್ನು ಬ್ರೈಲ್‌ ಲಿಪಿಗೆ ಪರಿವರ್ತಿಸಲು ಆಗುವುದಿಲ್ಲ. ಅದಕ್ಕಾಗಿ ಕನ್ನಡ ಓದುವ ಎಂಜಿನ್‌ ಅನ್ನು ಅಭಿವೃದ್ಧಿಪಡಿಸಬೇಕು 
 ಬಂಜಗೆರೆ ಜಯಪ್ರಕಾಶ್, ಸಾಹಿತಿ 

ನಿರ್ಣಯಗಳು

l ಅಂಗವಿಕಲರ ಸಮಗ್ರ ಅಧ್ಯಯನಕ್ಕಾಗಿ ಪ್ರತ್ಯೇಕ ಆಯೋಗ ರಚಿಸಬೇಕು 

l ಗಾನಯೋಗಿ ಪುಟ್ಟರಾಜ ಗವಾಯಿಗಳ ಸಮಗ್ರ ಸಾಹಿತ್ಯದ ಪ್ರಕಟಿಸಬೇಕು 

l ಕಬ್ಬನ್ ಉದ್ಯಾನದಲ್ಲಿರುವ ಬ್ರೈಲ್‌ ವಿಭಾಗವನ್ನು
ಪ್ರತ್ಯೇಕ ಗ್ರಂಥಾಲಯವಾಗಿ ಉನ್ನತೀಕರಿಸಬೇಕು 

l ರಾಜ್ಯ ಸರ್ಕಾರದ ವಿವಿಧ ಅಕಾಡೆಮಿ ಹಾಗೂ
ಪ್ರಾಧಿಕಾರಗಳಲ್ಲಿ ಅಂಧ ಸದಸ್ಯರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.