ಬೆಂಗಳೂರು: ಬೈಕ್ ವ್ಹೀಲಿಂಗ್ ಮಾಡುತ್ತಿದ್ದುದ್ದನ್ನು ಪ್ರಶ್ನಿಸಿದ್ದಕ್ಕಾಗಿ ಸಿಂಗಾರವೇಲ್ ಎಂಬುವರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದ್ದು, ಈ ಸಂಬಂಧ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಹಲ್ಲೆ ಸಂಬಂಧ ಕೊತ್ತನೂರು ಸುಬ್ಬಣ್ಣ ಲೇಔಟ್ ನಿವಾಸಿ ಸಿಂಗಾರವೇಲ್ ದೂರು ನೀಡಿದ್ದಾರೆ. ನಾಲ್ವರು ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸ ಮಾಡಿಕೊಂಡಿರುವ ಸಿಂಗಾರವೇಲ್, ಇದೇ 5ರಂದು ತಡರಾತ್ರಿ 1 ಗಂಟೆಯಲ್ಲಿ ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಹೊರಟಿದ್ದರು. ಅದೇ ವೇಳೆ ಮೂವರು ಯುವಕರು, ಎರಡು ಸ್ಕೂಟರ್‌ನಲ್ಲಿ ಅಪಾಯಕಾರಿ ರೀತಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದರು.’
‘ಯುವಕರ ಸ್ಕೂಟರ್, ಸಿಂಗಾರವೇಲ್ ಅವರ ವಾಹನ ಬಳಿಯೇ ವೇಗವಾಗಿ ಹೋಗಿತ್ತು. ಗಾಬರಿಗೊಂಡು ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿದ್ದ ಸಿಂಗಾರವೇಲ್, ‘ನಿಧಾನವಾಗಿ ವಾಹನ ಓಡಿಸಿ’ ಎಂದು ಯುವಕರಿಗೆ ಬುದ್ದಿವಾದ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿಗಳು, ಹೆಲ್ಮೆಟ್ ಕಿತ್ತುಕೊಂಡು ಮುಖಕ್ಕೆ ಹೊಡೆದಿದ್ದರು. ಚಾಕುವಿನಿಂದ ಕೈಗೆ ಇರಿದು ಬೆರಳಿಗೆ ಗಾಯವನ್ನುಂಟು ಮಾಡಿದ್ದರು.’
‘ಸ್ಥಳೀಯರು ರಕ್ಷಣೆಗೆ ಬರುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಗಾಯಗೊಂಡ ಸಿಂಗಾರವೇಲ್ ಅವರನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ’ ಎಂದೂ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.