ಯಲಹಂಕ: ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಅಟ್ಟೂರು ಗ್ರಾಮದಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನ ಜಲಾವೃತಗೊಂಡಿತು.
ದೇವಸ್ಥಾನದ ಸಮೀಪದಲ್ಲೇ ಅಟ್ಟೂರು ಕೆರೆಯಿದ್ದು, ರಸ್ತೆಯಿಂದ ತುಸು ಕೆಳಗೆ ದೇವಸ್ಥಾನವಿದೆ. ಮಳೆ ನೀರು ಹರಿದು ಹೋಗಲು ಅವಕಾಶವಿಲ್ಲದೆ ಅರ್ಧಭಾಗ ದೇವಸ್ಥಾನ ಜಲಾವೃತಗೊಂಡಿತು.
ದೇವಸ್ಥಾನದಲ್ಲಿ ಸೋಮವಾರ ನಡೆಯುವ ವಿಶೇಷ ಪೂಜೆಗಾಗಿ ಮಳೆಯ ನಡುವೆಯೂ ದೇವರ ದರ್ಶನಕ್ಕಾಗಿ ಬಂದಿದ್ದ ನೂರಾರು ಭಕ್ತರು, ದೇವಸ್ಥಾನ ಜಲಾವೃತಗೊಂಡಿರುವುದನ್ನು ಕಂಡು ಮನೆಗೆ ವಾಪಸಾದರು. ಮೋಟಾರ್ ಪಂಪ್ ಮೂಲಕ, ಸಂಗ್ರಹವಾಗಿದ್ದ ನೀರನ್ನು ಹೊರಹಾಕಲಾಯಿತು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವರದರಾಜು ಆರ್ ತಿಳಿಸಿದರು.
ಮಳೆ ಬಂದಾಗ ಉದ್ಭವಿಸುವ ಈ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಅಟ್ಟೂರು ಗ್ರಾಮದಿಂದ ಉಪನಗರ ನಾಲ್ಕನೇ ಹಂತಕ್ಕೆ ಸಂಪರ್ಕ ಕಲ್ಪಿಸಲು ಹೊಸ ರಸ್ತೆಯನ್ನು 3 ಅಡಿಗಳಷ್ಟು ಎತ್ತರಿಸಿ ಅಭಿವೃದ್ಧಿಪಡಿಸಲಾಗಿದೆ. ದೇವಸ್ಥಾನ ರಸ್ತೆಗಿಂತ ಕೆಳಗಿರುವುದರಿಂದ ಮಳೆ ನೀರು ಹರಿದುಹೋಗಲು ಅವಕಾಶವಿಲ್ಲದೆ ದೇವಸ್ಥಾನ ಮತ್ತು ಕಲ್ಯಾಣಿ ಜಲಾವೃತಗೊಂಡಿದೆ. ಸಮಸ್ಯೆ ನಿವಾರಣೆಗೆ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಸುಧಾಕರರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.