ADVERTISEMENT

ಅಧಿಕ ದರ ವಸೂಲಿ ಮಾಡುವ ಅಗ್ರಿಗೇಟರ್‌ ಕಂಪನಿಗಳು: ಕ್ರಮಕ್ಕೆ ಆಟೊ ಚಾಲಕರ ಆಗ್ರಹ

ಬಾಲಕೃಷ್ಣ ಪಿ.ಎಚ್‌
Published 30 ಜೂನ್ 2025, 0:24 IST
Last Updated 30 ಜೂನ್ 2025, 0:24 IST
<div class="paragraphs"><p>ಆಟೊ</p></div>

ಆಟೊ

   

ಬೆಂಗಳೂರು: ‘ಪ್ರಯಾಣಿಕರಿಂದ ಕಿತ್ತುಕೊಳ್ಳುವುದು ಅಗ್ರಿಗೇಟರ್‌ ಕಂಪನಿಗಳು. ಆರೋಪ ಸುತ್ತಿಕೊಳ್ಳುವುದು ಮಾತ್ರ ಆಟೊ ಚಾಲಕರ ಮೇಲೆ. ಕೋತಿ ತಾನು ತಿಂದು ಮೇಕೆ ಮೂತಿಗೆ ಒರಸಿದಂತಾಗಿದೆ ನಮ್ಮ ಸ್ಥಿತಿ...’

‘ಅಗ್ರಿಗೇಟರ್‌ ಕಂಪನಿಗಳ ಅಡಿಯಲ್ಲಿ ಕೆಲಸ ಮಾಡುವ ಆಟೊ ಚಾಲಕರ ಅಳಲು ಇದು. ಅಧಿಕ ದರ ಯಾವ ಆ್ಯಪ್‌ನಲ್ಲಿ ತೋರಿಸುತ್ತದೆಯೋ ಅದನ್ನು ನಡೆಸುತ್ತಿರುವ ಅಗ್ರಿಗೇಟರ್‌ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಿ’ ಎಂಬುದು ಅವರ ಒತ್ತಾಯ. 

ADVERTISEMENT

‘ಅಧಿಕ ದರ ವಸೂಲಿ ಮಾಡುತ್ತಿರುವುದು ಕಂಡು ಬಂದರೆ ಅಂಥ ಆಟೊಗಳ ಪರ್ಮಿಟ್‌ ರದ್ದು ಮಾಡಲು ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಆಟೊ ಚಾಲಕ, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆ್ಯಪ್‌ಗಳಲ್ಲಿ ಅಧಿಕ ದರ ತೋರಿಸಿದರೆ ಅದಕ್ಕೆ ಕಾರಣರಲ್ಲದ ನಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬೇಕು? ನಮ್ಮ ಆಟೊಗಳ ಪರ್ಮಿಟ್‌ ಯಾಕೆ ರದ್ದು ಮಾಡಬೇಕು’ ಎಂಬುದು ಆಟೊ ಚಾಲಕರ ಪ್ರಶ್ನೆ.

‘ನಮಗೆ ಇಂಥಲ್ಲಿಂದ ಇಂಥಲ್ಲಿಗೆ ಪ್ರಯಾಣಿಕರನ್ನು ಕರೆದೊಯ್ಯುವಂತೆ ಸೂಚನೆ ಬರುತ್ತದೆ. ನಾವು ಹೋಗುತ್ತೇವೆ. ಪ್ರಯಾಣಿಕರು ಒಟಿಪಿ ನಂಬರ್‌ ಹೇಳಿದ ಮೇಲೆ ಸಂಚಾರ ಆರಂಭಿಸಿ ಅವರು ತಲುಪಬೇಕಾದ ಸ್ಥಳಕ್ಕೆ ಮುಟ್ಟಿಸುತ್ತೇವೆ. ಎಷ್ಟು ದರ ಎಂಬುದು ಆ್ಯಪ್‌ನಲ್ಲಿ ಪ್ರಯಾಣಿಕರಿಗೆ ಮೊದಲೇ ತೋರಿಸಿರುತ್ತದೆ. ಸ್ಕ್ಯಾನ್‌ ಮಾಡಿ ಪಾವತಿ ಮಾಡುತ್ತಾರೆ. ನಮ್ಮ ಮತ್ತು ಪ್ರಯಾಣಿಕರ ನಡುವೆ ಪಾವತಿಗೆ ಸಂಬಂಧಿಸಿದಂತೆ ಯಾವುದೇ ಚರ್ಚೆಗಳು ನಡೆಯುವುದಿಲ್ಲ. ನಾವು ಹೆಚ್ಚುವರಿಯಾಗಿ ಹಣ ಕೇಳುವುದೂ ಇಲ್ಲ’ ಎಂದು ಆಟೊ ಚಾಲಕರೊಬ್ಬರು ತಿಳಿಸಿದರು.

‘ಬೈಕ್‌ ಟ್ಯಾಕ್ಸಿಗಳನ್ನು ಇದೇ ಅಗ್ರಿಗೇಟರ್‌ ಕಂಪನಿಗಳು ನಡೆಸುತ್ತಿದ್ದವು. ಅವುಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಬಿಂಬಿಸಲು, ಬೈಕ್‌ ಟ್ಯಾಕ್ಸಿಗಳು ಬೇಕು ಎಂದು ಜನರೇ ಆಗ್ರಹಿಸುವಂತೆ ಮಾಡಲು ಆಗ್ರಿಗೇಟರ್‌ ಸಂಸ್ಥೆಗಳೇ ಆಟೊ, ಕ್ಯಾಬ್‌ಗಳ ದರವನ್ನು ಆ್ಯಪ್‌ಗಳಲ್ಲಿ ಅಧಿಕ ಮಾಡಿದಂತಿದೆ. ಆಟೊ, ಕ್ಯಾಬ್‌ಗಳ ಚಾಲಕರು ಮಾತ್ರವಲ್ಲ, ಸ್ವಂತ ವಾಹನಗಳನ್ನು ಅಗ್ರಿಗೇಟರ್‌ಗಳೊಂದಿಗೆ ಸಂಯೋಜನೆ ಮಾಡಿರುವ ಮಾಲೀಕರು ಈ ಷಡ್ಯಂತ್ರದ ಬಲಿಪಶುಗಳಾಗುತ್ತಿದ್ದಾರೆ’ ಎಂದು ಸ್ನೇಹಜೀವಿ ಆಟೊ ಚಾಲಕರ ಟ್ರೇಡ್ ಯೂನಿಯನ್‌ ಅಧ್ಯಕ್ಷ ಸಂತೋಷ್‌ ಕುಮಾರ್ ತಿಳಿಸಿದರು.

‘ಈಗ ಬಹುತೇಕ ಆಟೊಗಳು ಅಗ್ರಿಗೇಟರ್‌ಗಳೊಂದಿಗೆ ಸಂಯೋಜನೆಯಾಗಿವೆ. ಅಗ್ರಿಗೇಟರ್‌ ಕಂಪನಿಗಳಷ್ಟೇ ದರ ಹೆಚ್ಚಳ ಮಾಡಿರುವುದು. ಎಲ್ಲರೂ ತಾವಿದ್ದಲ್ಲಿಂದಲೇ ಆ್ಯಪ್‌ಗಳ ಮೂಲಕ ಬುಕ್ಕಿಂಗ್‌ ಮಾಡುತ್ತಿರುವುದರಿಂದ ಉಳಿದ ಆಟೊಗಳಿಗೆ ಬಾಡಿಗೆ ಸಿಗುವುದೂ ಕಡಿಮೆ. ದರ ಹೆಚ್ಚಳ ಮಾಡಿದರೆ ಯಾರು ಬರುತ್ತಾರೆ’ ಎಂದು ಸಾರಥಿ ಆಟೊ ಚಾಲಕರ ಸಂಘದ ಅಧ್ಯಕ್ಷ ರಾಮೇಗೌಡ ಪ್ರಶ್ನಿಸಿದರು.

‘ಮೀಟರ್‌ ಹಾಕುವುದೇ ಇಲ್ಲ’

‘ನಗರದಲ್ಲಿ ಬಹುತೇಕ ಆಟೊಗಳಲ್ಲಿ ಮೀಟರ್‌ ಪ್ರಕಾರ ಬಾಡಿಗೆ ತೆಗೆದುಕೊಳ್ಳುತ್ತಿಲ್ಲ. ಮೀಟರ್‌ ಹಾಕುವುದೇ ಇಲ್ಲ. ಬಾಯಿಗೆ ಬಂದಷ್ಟು ಹೇಳುತ್ತಿದ್ದಾರೆ. ಇದು ಬೈಕ್‌ ಟ್ಯಾಕ್ಸಿ ನಿಷೇಧವಾದ ಮೇಲೆ ಮಾಡಿದ್ದಲ್ಲ. ಹಲವು ವರ್ಷಗಳಿಂದ ಈ ರೀತಿ ಮಾಡುತ್ತಿದ್ದಾರೆ. ಯಶವಂತಪುರ ರೈಲ್ವೆ ನಿಲ್ದಾಣದಿಂದ 2 ಕಿ.ಮೀ. ಒಳಗೆ ಹೋಗಬೇಕಿದ್ದರೂ ₹ 200–₹ 300 ಹೇಳುತ್ತಾರೆ. ಮೀಟರ್ ಹಾಕಿದರೆ ₹ 30–₹ 40 ಅಷ್ಟೇ ಆಗುವುದು’ ಎಂದು ರಾಜಾಜಿನಗರದ ಕೆ. ರಮೇಶ್‌ ದೂರಿದ್ದಾರೆ. ‘ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಸಹಿತ ಹಲವು ಕಡೆಗಳಲ್ಲಿ ಇದೇ ರೀತಿ ಆಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ. ‘ಕೆಲವು ಪ್ರಮುಖ ಸ್ಪಾಟ್‌ಗಳಲ್ಲಿ ಈ ರೀತಿ ಸುಲಿಗೆ ಮಾಡುತ್ತಿರುವುದು ನಿಜ. ಇದರಿಂದ ನಗರದ ಎಲ್ಲ ಆಟೊದವರಿಗೆ ಕೆಟ್ಟ ಹೆಸರು ಬರುತ್ತಿದೆ. ಯಾರು ಸುಲಿಗೆ ಮಾಡುತ್ತಿದ್ದಾರೋ ಅಂಥವರ ಮೇಲೆ ಕ್ರಮ ಕೈಗೊಳ್ಳಿ ಎಂದು ನಾವೇ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ಆಟೊ ಸಂಘಟನೆಗಳ ಪದಾಧಿಕಾರಿಗಳು ಹೇಳಿದ್ದಾರೆ. ‘ಪ್ರಾಮಾಣಿಕವಾಗಿ ಮೀಟರ್‌ ಹಾಕಿಕೊಂಡು ಪ್ರಯಾಣಿಕರನ್ನು ಒಯ್ಯುವ ಆಟೊಗಳು ಅಂಥ ‘ಸ್ಪಾಟ್‌’ಗಳಿಗೆ ಬಂದರೆ ಸುಲಿಗೆಕೋರರು ಬೈದು ಓಡಿಸುತ್ತಾರೆ. ಇದನ್ನೆಲ್ಲ ಅಧಿಕಾರಿಗಳು ನಿಯಂತ್ರಿಸಬೇಕು’ ಎಂದು ಒತ್ತಾಯಿಸಿದರು.

ಇಂದಿನಿಂದಲೇ ಕ್ರಮ

‘ಪ್ರಯಾಣಿಕರಿಂದ ಯಾರು ಅಧಿಕ ದರ ವಸೂಲಿ ಮಾಡುತ್ತಿದ್ದಾರೆ ಎಂಬುದನ್ನು ನಮ್ಮದೇ ರೀತಿಯಲ್ಲಿ ಪತ್ತೆ ಹಚ್ಚುತ್ತೇವೆ. ಅದು ಆ್ಯಪ್‌ ಆಧಾರಿತ ಇರಲಿ ಆ್ಯಪ್‌ ಅಲ್ಲದ ಆಟೊಗಳಿರಲಿ. ಎಲ್ಲರ ಮೇಲೆ ಕಣ್ಣಿಡುತ್ತೇವೆ. ಸೋಮವಾರ ಬೆಳಿಗ್ಗೆಯೇ ಈ ಕಾರ್ಯಾಚರಣೆ ಆರಂಭವಾಗಲಿದೆ. ನಗರದ ಎಲ್ಲ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಸಾರಿಗೆ ಇಲಾಖೆ (ಪ್ರವರ್ತನ) ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.