ADVERTISEMENT

ಲೈಂಗಿಕ ಸಮಸ್ಯೆ ಪರಿಹಾರಕ್ಕೆ ಔಷಧ ನೀಡುವುದಾಗಿ ಮೋಸ: ಟೆಕಿಯಿಂದ ₹48 ಲಕ್ಷ ಸುಲಿಗೆ

ನಕಲಿ ‘ಗುರೂಜಿ’ಗೆ ಆಯುರ್ವೇದಿಕ್‌ ಶಾಪ್‌ ಮಾಲೀಕ ನೆರವು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 14:41 IST
Last Updated 10 ಡಿಸೆಂಬರ್ 2025, 14:41 IST
   

ಬೆಂಗಳೂರು: ಲೈಂಗಿಕ ಸಮಸ್ಯೆಗಳೂ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆಯುರ್ವೇದ ಔಷಧ ನೀಡುವುದಾಗಿ ನಂಬಿಸಿ, ಸಾರ್ವಜನಿಕರಿಗೆ ವಂಚಿಸುತ್ತಿದ್ದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಜ್ಞಾನಭಾರತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಗುಜರಾತ್‌ನ ಮನೋಜ್ ಸಿಂಗ್ ಬಂಧಿತ. ಕಳೆದ ವಾರ ‘ನಕಲಿ’ ಗುರೂಜಿ ವಿಜಯ್ ಚಿತ್ತೋಡಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಆರೋಪಿಗಳಿಂದ ವಿವಿಧ ಬಗೆಯ 17 ಆಯುರ್ವೇದ ಔಷಧಗಳು, ಟೆಂಪೊ ಟ್ರಾವೆಲರ್ ಹಾಗೂ ₹19.50 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಸೀಮಾಂತ್‌ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.

ADVERTISEMENT

ಲೈಂಗಿಕ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವುದಾಗಿ ನಂಬಿಸಿ, ಸಾಫ್ಟ್‌ವೇರ್ ಎಂಜಿನಿಯರ್‌ ತೇಜಸ್‌ ಅವರಿಂದ ₹48 ಲಕ್ಷ ಪಡೆದು ವಂಚಿಸಿದ್ದ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ‘ನಕಲಿ’ ಗುರೂಜಿ ವಿಜಯ್ ಚಿತ್ತೋಡಿಯಾ ಹಾಗೂ ಮನೋಜ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು. ‌

ಪ್ರಕರಣ ದಾಖಲಾಗುತ್ತಿದ್ದಂತೆಯೇ ಇಬ್ಬರೂ ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು ಎಂದು ಅವರು ಹೇಳಿದರು.

ಈ ಕೃತ್ಯಕ್ಕೆ ಯಶವಂತಪುರದಲ್ಲಿ ಇರುವ ಆಯುರ್ವೇದಿಕ್‌ ಶಾಪ್‌ವೊಂದರ ಮಾಲೀಕನ ನೆರವು ನೀಡುತ್ತಿರುವುದು ಪೊಲೀಸ್‌ ತನಿಖೆಯಿಂದ ಪತ್ತೆಯಾಗಿದೆ.

‘ಇಬ್ಬರನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ತೆಲಂಗಾಣದ ಮೆಹಬೂಬ್ ನಗರದಲ್ಲಿ ವಿಜಯ್ ಗುರೂಜಿ ಅವರನ್ನು ಬಂಧಿಸಲಾಗಿತ್ತು. ಆತನ ಸಹಚರ ಮನೋಜ್ ಸಿಂಗ್‌ ಚಿತ್ತೋಡಿಯಾನನ್ನು ತೆಲಂಗಾಣದ ಸೈಬರಾಬಾದ್​ನಲ್ಲಿ ಬಂಧಿಸಲಾಯಿತು’ ಎಂದು ಮಾಹಿತಿ ನೀಡಿದರು.

‘ವಂಚನೆಯಿಂದ ಬಂದ ಹಣದಲ್ಲಿ ಇಬ್ಬರೂ ಐಷಾರಾಮಿ ಜೀವನ ನಡೆಸುತ್ತಿದ್ದರು. ಬೆಂಗಳೂರು, ತುಮಕೂರು ಸೇರಿ ರಾಜ್ಯದ ವಿವಿಧೆಡೆ ಒಟ್ಟು ಎಂಟು ಟೆಂಟ್ ಹಾಕಿಕೊಂಡು ಆಯುರ್ವೇದ ಔಷಧ ನೀಡುವುದಾಗಿ ನಂಬಿಸಿ, ಸಾರ್ವಜನಿಕರಿಗೆ ವಂಚಿಸುತ್ತಿದ್ದರು’ ಎಂದು ಮಾಹಿತಿ ನೀಡಿದರು.

ಮನೋಜ್ ಸಿಂಗ್
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ನಗದು

ಪ್ರಕರಣ ಏನು?

ಲೈಂಗಿಕ ಸಮಸ್ಯೆಗೆ ‌ಕೆಂಗೇರಿಯ ಆಸ್ಪತ್ರೆಯಲ್ಲಿ ತೇಜಸ್ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ಹೋಗಿ ಬರುವಾಗ ರಸ್ತೆಯ ಪಕ್ಕದ ಟೆಂಟ್ ಬಳಿ ಹಾಕಿದ್ದ ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಎಂಬ ಫಲಕ ನೋಡಿ ಮೇ ತಿಂಗಳಲ್ಲಿ ಅಲ್ಲಿಗೆ ಭೇಟಿ ಕೊಟ್ಟಿದ್ದರು. ಟೆಂಟ್‍ನಲ್ಲಿದ್ದ ವ್ಯಕ್ತಿಯೊಬ್ಬ ವಿಜಯ್ ‘ಗುರೂಜಿ’ಯನ್ನು ಪರಿಚಯ ಮಾಡಿಕೊಟ್ಟಿದ್ದ ಎಂದು ಮೂಲಗಳು ಹೇಳಿವೆ.

ಬಳಿಕ ತೇಜಸ್‍ ಅವರನ್ನು ಪರೀಕ್ಷಿಸಿದ್ದ ವಿಜಯ್ ‘ಗುರೂಜಿ’ ಯಶವಂತಪುರದ ವಿಜಯಲಕ್ಷ್ಮಿ ಆಯುರ್ವೇದ ಔಷಧ ಅಂಗಡಿಯಲ್ಲಿ ‘ದೇವರಾಜ್ ಬೂಟಿ’ ಹೆಸರಿನ ಔಷಧ ಖರೀದಿಸಿ ಸೇವಿಸಬೇಕು. ಅದರ ಬೆಲೆ ಗ್ರಾಂಗೆ ₹1.60 ಲಕ್ಷ ಇದ್ದು ಆ ಔಷಧ ಬೇರೆ ಕಡೆ ಸಿಗುವುದಿಲ್ಲ. ಅದನ್ನು ಹರಿದ್ವಾರದಿಂದ ತರಿಸಲಾಗಿದೆ. ನಗದು ಪಾವತಿಸಿ ಆ ಔಷಧ ಖರೀದಿಸಬೇಕು. ಅದರ ಖರೀದಿಗೆ ಯಾರನ್ನೂ ಜತೆಯಲ್ಲಿ ಕರೆದುಕೊಂಡು ಹೋಗಬಾರದು. ಬೇರೆ ವ್ಯಕ್ತಿಯನ್ನು ಜತೆಯಲ್ಲಿ ಕರೆದೊಯ್ದರೆ ಆ ಔಷಧಿಗೆ ಶಕ್ತಿ ಫಲಿಸುವುದಿಲ್ಲ ಎಂಬುದಾಗಿ ನಕಲಿ ಗುರೂಜಿ ಷರತ್ತು ಹಾಕಿದ್ದ ಎಂದು ಪೊಲೀಸರು ತಿಳಿಸಿದರು.

ವಿಜಯ್ ‘ಗುರೂಜಿ’ ಸಲಹೆಯಂತೆ ತೇಜಸ್ ಹಲವು ಬಾರಿ ‘ದೇವರಾಜ್ ಬೂಟಿ’ ಮತ್ತು ‘ಭವನ ಬೂಟಿ’ ತೈಲ ಖರೀದಿಸಿದ್ದರು. ಬೇರೆ ಬೇರೆ ಔಷಧಗಳು ಹಾಗೂ ತೈಲಗಳ ಹೆಸರಿನಲ್ಲಿ ತೇಜಸ್‍ ಅವರಿಂದ ಹಂತ ಹಂತವಾಗಿ ₹48 ಲಕ್ಷ ವಸೂಲು ಮಾಡಲಾಗಿದೆ. ಬ್ಯಾಂಕ್ ಹಾಗೂ ಸ್ನೇಹಿತರಿಂದ ಸಾಲ ಪಡೆದು ಔಷಧಗಳನ್ನು ಖರೀದಿಸಿದ್ದರು. ಆದರೂ ಸಮಸ್ಯೆ ಪರಿಹಾರವಾಗದಿದ್ದಾಗ ವಿಜಯ್ ‘ಗುರೂಜಿ’ ‘ಇನ್ನೂ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದೆ. ಚಿಕಿತ್ಸೆ ಮುಂದುವರಿಸದಿದ್ದರೆ ಹೆಚ್ಚಿನ ಸಮಸ್ಯೆಯಾಗಿ ಜೀವಕ್ಕೆ ತೊಂದರೆ ಆಗುತ್ತದೆ’ ಎಂಬುದಾಗಿ ಹೆದರಿಸಿ ತೇಜಸ್‍ರಿಂದ ಮತ್ತೆ ಹಣ ಪೀಕಲು ಯತ್ನಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.  

‘ಅಧಿಕೃತ ಆಸ್ಪತ್ರೆಗೆ ಭೇಟಿ ನೀಡಿ’

ಆರೋಗ್ಯ ಸಮಸ್ಯೆ ಇರುವವರು ಅಧಿಕೃತ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ರೀತಿ ಟೆಂಟ್‌ ಹಾಕಿಕೊಂಡವರ ಬಳಿಗೆ ಹೋಗಬಾರದು. ನಕಲಿ ವೈದ್ಯರ ಬಳಿಗೆ ಹೋದರೆ ಜೀವಕ್ಕೆ ಅಪಾಯ ಆಗುವ ಸಾಧ್ಯತೆಯಿದೆ. ಈ ರೀತಿ ಕೆಲಸ ಮಾಡುತ್ತಿದ್ದವರ ವಿರುದ್ಧ ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ. ಟೆಂಟ್​ನಲ್ಲಿ ಚಿಕಿತ್ಸೆ ನೀಡುವವರ ದಾಖಲಾತಿ ಪರಿಶೀಲಿಸಲಾಗುತ್ತದೆ. ಈ ಪ್ರಕರಣದಲ್ಲಿ ಚಿಕಿತ್ಸೆ ಪಡೆದಿದ್ದ ದೂರುದಾರನಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ’ ಎಂದು ಪೊಲೀಸ್ ಕಮಿಷನರ್‌ ಸೀಮಾಂತ್‌ಕಕುಮಾರ್ ಸಿಂಗ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.