
ಬೆಂಗಳೂರು: ಹಲಗೆಯ ನಾದ, ಶಹನಾಯಿಯ ಸ್ವರ, ಬಣ್ಣಗಳ ರಂಗುಗಳೊಂದಿಗೆ ಹಿರಿಯರು– ಕಿರಿಯರೆನ್ನದೇ ಎಲ್ಲರೂ ಕುಣಿದು ಸಂಭ್ರಮಿಸಿದರು.
ಚಾಲುಕ್ಯ ಸಾಂಸ್ಕೃತಿಕ ಸಂಘವು ರಾಜಾಜಿನಗರದ ಕೆಎಲ್‌ಇ ಕಾಲೇಜು ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಾಗಲಕೋಟೆ ಹೋಳಿ ಹಲಗೆ ಮೇಳವು ಈ ಸಡಗರಕ್ಕೆ ವೇದಿಕೆಯಾಯಿತು. ಉತ್ತರ ಕರ್ನಾಟಕದ ಸಂಸ್ಕೃತಿಯು ಇಲ್ಲಿ ಅನಾವರಣಗೊಂಡಿತು.
ಹಲವು ಶತಮಾನಗಳ ಹಿಂದಿನ ಸಾಂಪ್ರದಾಯಿಕ ಆಚರಣೆಯು ಇತ್ತೀಚೆಗೆ ಉತ್ತರ ಕರ್ನಾಟಕ ಮೀರಿ ಹರಡುತ್ತಿದೆ. ಬೆಂಗಳೂರು ನಗರದಲ್ಲಿಯೂ ಹೋಳಿ–ಹಲಗೆ ಸದ್ದು ಮಾಡಿದೆ. ಬಾಗಲಕೋಟೆಯ ಹೋಳಿ ಹಬ್ಬದ ಆಚರಣೆಯಲ್ಲಿ ಹಲಗೆ ಮಜಲು ಪ್ರಮುಖ ಮತ್ತು ಸಾಂಪ್ರದಾಯಿಕ ಅಂಶವಾಗಿದ್ದು, ಹೋಳಿ ಹಬ್ಬದ ಆರಂಭದ ಸಂಕೇತವಾಗಿ ಹಲಗೆ ವಾದ್ಯವನ್ನು ನುಡಿಸಲಾಗುತ್ತದೆ. ಭಾನುವಾರ ಚರ್ಮವಾದ್ಯಗಳಾದ ಹಲಗೆ, ಕಂಸಾಳೆ ಮತ್ತು ತಮಟೆಗಳ ಸಮ್ಮಿಶ್ರ ನಾದವು ಹೋಳಿಯ ಸಂಭ್ರಮವನ್ನು ಇಮ್ಮಡಿಗೊಳಿಸಿತು.
ಶಹನಾಯಿ, ಕಾನಿ, ಜುಮರ್, ನಿಶಾನ್‌ನಂಥ ವಾದ್ಯಗಳನ್ನು ನುಡಿಸುವ ಮೂಲಕ ಜನಪದ ಗೀತೆಗಳ ಗಾಯನ ನಡೆಯಿತು. ತಾಳ, ಮೃದಂಗಗಳೂ ಇದಕ್ಕೆ ಸಾಥ್ ನೀಡಿದವು. ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುವ ಮೂಲಕ ಹಬ್ಬದ ವಾತಾವರಣ ಸೃಷ್ಟಿಯಾಯಿತು. ಆ ನಂತರ ಬಣ್ಣ ಎರಚಿ ಹೋಳಿಯಾಟ ಆಡಲಾಯಿತು.
ಜಾತಿ, ಮತ ಅಥವಾ ಲಿಂಗ ಭೇದವಿಲ್ಲದೇ ಎಲ್ಲರೂ ಸೌಹಾರ್ದದಿಂದ ಆಚರಿಸುವ ಹಬ್ಬ ಇದು. ಹೋಳಿ ಹುಣ್ಣಿಮೆಯ ಸಂದರ್ಭಗಳಲ್ಲಿ ಬಾಗಲಕೋಟೆಯಲ್ಲಿ ಆಚರಿಸಲಾಗುತ್ತದೆ. ಉತ್ತರ ಕರ್ನಾಟಕಕ್ಕೆ ಸೀಮಿತವಾಗಬಾರದು ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿಯೂ ಆಯೋಜಿಸಿದ್ದೇವೆ ಎಂದು ಆಯೋಜಕರಲ್ಲಿ ಒಬ್ಬರಾದ ನಾಗರಾಜ್ ಹುಂಡೇಕರ್ ತಿಳಿಸಿದರು.
ಹೋಳಿ–ಹಲಗೆ ಮೇಳವು ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕದ ಜನರು ಒಂದೆಡೆ ಸಮಾಗಮಗೊಳ್ಳುವಂತೆ ಮಾಡಿದೆ. ಜೊತೆಗೆ ಇಲ್ಲಿನ ಜನರೂ ಭಾಗವಹಿಸಿ ನಮ್ಮ ಸಂಸ್ಕೃತಿಯ ಸೊಬಗನ್ನು ಸವಿಯುವಂತಾಯಿತು ಎಂದು ಚಾಲುಕ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸಂಗಮೇಶ ಹದ್ಲಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಜನಪದ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಅಗ್ರಹಿಸಿದರು.
ಬಿಜೆಪಿಯ ಬೆಂಗಳೂರು ಕೇಂದ್ರ ಘಟಕದ ಅಧ್ಯಕ್ಷ ಸಪ್ತಗಿರಿ ಗೌಡ, ಉತ್ತರ ಕರ್ನಾಟಕ ಸಂಘದ ಅಧ್ಯಕ್ಷ ಜಿ.ಬಿ.ಔಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.