ADVERTISEMENT

ಚಿಣ್ಣರ ರಂಜಿಸಲು ಬಾಲಭವನ ಸಜ್ಜು: ಶೀಘ್ರವೇ ರೈಲಿನ ಚುಕುಬುಕು ಸದ್ದು

ಈ ವಾರದೊಳಗೆ ಮಕ್ಕಳ ಪ್ರವೇಶಕ್ಕೆ ಅವಕಾಶ l ಶೀಘ್ರವೇ ರೈಲಿನ ಚುಕುಬುಕು ಸದ್ದು

ಮನೋಹರ್ ಎಂ.
Published 28 ನವೆಂಬರ್ 2021, 21:07 IST
Last Updated 28 ನವೆಂಬರ್ 2021, 21:07 IST
ಬಾಲಭವನದ ಆವರಣದಲ್ಲಿ ಪುಟಾಣಿ ರೈಲು ಸಂಚರಿಸುವ ಹಳಿಯನ್ನು ಕಾರ್ಮಿಕರು ಸ್ವಚ್ಛಗೊಳಿಸುತ್ತಿರುವುದು (ಎಡಚಿತ್ರ), -ಬಾಲಭವನದಲ್ಲಿ ಕಳೆಗುಂದಿದ್ದ ಮಕ್ಕಳ ಮನರಂಜನಾ ಆಟಿಕೆಗಳಿಗೆ ಕಾರ್ಮಿಕರು ಬಣ್ಣ ಹಚ್ಚುತ್ತಿರುವುದು -ಪ್ರಜಾವಾಣಿ ಚಿತ್ರಗಳು /ರಂಜು ಪಿ.
ಬಾಲಭವನದ ಆವರಣದಲ್ಲಿ ಪುಟಾಣಿ ರೈಲು ಸಂಚರಿಸುವ ಹಳಿಯನ್ನು ಕಾರ್ಮಿಕರು ಸ್ವಚ್ಛಗೊಳಿಸುತ್ತಿರುವುದು (ಎಡಚಿತ್ರ), -ಬಾಲಭವನದಲ್ಲಿ ಕಳೆಗುಂದಿದ್ದ ಮಕ್ಕಳ ಮನರಂಜನಾ ಆಟಿಕೆಗಳಿಗೆ ಕಾರ್ಮಿಕರು ಬಣ್ಣ ಹಚ್ಚುತ್ತಿರುವುದು -ಪ್ರಜಾವಾಣಿ ಚಿತ್ರಗಳು /ರಂಜು ಪಿ.   

ಬೆಂಗಳೂರು: ಕೋವಿಡ್‌ನಿಂದ ಬಾಲಭವನದಲ್ಲಿನಿಶ್ಯಬ್ದವಾಗಿದ್ದ ಚಿಣ್ಣರ ಕಲರವ ಮತ್ತೆ ಶುರುವಾಗಲಿದೆ. ಒಂದೂವರೆ ವರ್ಷದ ನಂತರ ಮಕ್ಕಳನ್ನು ಬರಮಾಡಿಕೊಳ್ಳಲುಕಬ್ಬನ್ ಉದ್ಯಾನದಲ್ಲಿರುವ ಜವಾಹರ ಬಾಲಭವನ ಸಜ್ಜಾಗಿದೆ.

ನಗರದಲ್ಲಿ ಮಕ್ಕಳ ಆಕರ್ಷಣೆಯ ಕೇಂದ್ರವಾಗಿರುವ ಬಾಲಭವನದಲ್ಲಿ ಸದಾ ಮಕ್ಕಳ ಚಟುವಟಿಕೆ ನಡೆಯುತ್ತಿತ್ತು.ಪೋಷಕರು ಮಕ್ಕಳನ್ನು ಮನರಂಜಿಸಲು ಕುಟುಂಬದೊಂದಿಗೆಇಲ್ಲಿಗೆ ಬರುತ್ತಿದ್ದರು. ಆದರೆ, ಕೋವಿಡ್‌ ನಿಯಂತ್ರಣದ ಕಾರಣದಿಂದ ಬಾಲಭವನವನ್ನು ಕಳೆದ ವರ್ಷ ಮುಚ್ಚಲಾಗಿತ್ತು.

12 ಎಕರೆ ವಿಸ್ತೀರ್ಣದಲ್ಲಿರುವಬಾಲಭವನದ ಆವರಣದಲ್ಲಿ ಮಕ್ಕಳನ್ನು ರಂಜಿಸುವ ಹಾಗೂ ರೈಲು ಪ್ರಯಾಣದ ಅನುಭವ ಕಟ್ಟಿಕೊಡುವ ಉದ್ದೇಶದಿಂದ ಆರಂಭಿಸಿದ್ದ ಪುಟಾಣಿ ರೈಲಿನ ಸಂಚಾರವೂ ತಾಂತ್ರಿಕ ಕಾರಣಗಳಿಂದ ನಿಂತಿತ್ತು. ಸದ್ಯ ರೈಲ್ವೆ ಇಲಾಖೆಯು ಪುಟಾಣಿಗಳ ರೈಲಿನ ದುರಸ್ತಿ ಕಾರ್ಯ ಪೂರ್ಣಗೊಳಿಸಿದೆ. ರೈಲು ಸಂಚಾರಕ್ಕಾಗಿಹಳಿಗಳನ್ನು ಅಂದಗೊಳಿಸುವ ಕಾರ್ಯದಲ್ಲಿ ಕೆಲಸಗಾರರು ತೊಡಗಿದ್ದು, ರೈಲಿನ ‘ಚುಕುಬುಕು..’ ಸದ್ದು‌ಶೀಘ್ರವೇ ಮೊಳಗಲಿದೆ.

ADVERTISEMENT

‘ಕಳೆದ ವರ್ಷ ಕೋವಿಡ್‌ ತೀವ್ರತೆ ಹೆಚ್ಚಾಗಿದ್ದರಿಂದ ಬಾಲಭವನಕ್ಕೆ ಮಕ್ಕಳ ಪ್ರವೇಶ ನಿರ್ಬಂಧಿಸಲಾಗಿತ್ತು. ವರ್ಷದಿಂದ ಆವರಣವೂ ಮಕ್ಕಳಿಲ್ಲದೆ ಮಂಕಾಗಿತ್ತು. ಸರ್ಕಾರದ ಮಾರ್ಗಸೂಚಿಗಳ ಅನ್ವಯ ಬಾಲಭವನ ಪುನರಾರಂಭಕ್ಕೆ 15 ದಿನಗಳಿಂದ ಸಿದ್ಧತೆಗಳು ನಡೆಯುತ್ತಿವೆ. ಈ ವಾರದೊಳಗೆ ಮಕ್ಕಳು ಎಂದಿನಂತೆ ಬಾಲಭವನಕ್ಕೆ ಬಂದು ಸಂಭ್ರಮಿಸಬಹುದು’ ಎಂದು ಜವಾಹರ ಬಾಲಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪುಟಾಣಿ ರೈಲಿನ ಎಂಜಿನ್‌ ಕಳೆದ ವರ್ಷವೇ ಬದಲಾಯಿಸಲಾಗಿದೆ. ತಾಂತ್ರಿಕ ದೋಷಗಳನ್ನೂ ಸರಿಪಡಿಸಲಾಗಿದೆ. ಮಕ್ಕಳ ಪ್ರಯಾಣಕ್ಕೆ ಯಾವುದೇ ಸಮಸ್ಯೆ ಆಗದಂತೆ ಹಳಿಗಳನ್ನು ಸ್ವಚ್ಛಗೊಳಿಸಿದ್ದೇವೆ. ಕೆಲವು ಕಡೆ ಹಳಿಯ ಪಕ್ಕ ಬೆಳೆದಿದ್ದ ಗಿಡ–ಗಂಟಿಗಳನ್ನೂ ತೆರವು ಮಾಡಲಾಗಿದೆ’ ಎಂದರು.

‘ಬಾಲಭವನ ಪ್ರವೇಶಿಸಲು ಕೆಲವು ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಮುಂದುವರಿಸಲಾಗುವುದು. 5 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಹಾಗೂ 65 ವರ್ಷ ಮೇಲ್ಪಟ್ಟವರಿಗೆ ಸದ್ಯಕ್ಕೆ ಬಾಲಭವನ ಪ್ರವೇಶಿಸಲು ಅವಕಾಶವಿಲ್ಲ. ಪ್ರವೇಶ ದ್ವಾರಗಳಲ್ಲಿ ಸ್ಯಾನಿಟೈಸರ್‌ ಒದಗಿಸಲಿದ್ದೇವೆ. ದೇಹದ ಉಷ್ಣಾಂಶ ತಪಾಸಣೆಗೆ ವ್ಯವಸ್ಥೆ ಇರಲಿದೆ. ಇಲ್ಲಿಗೆ ಬರುವ ಎಲ್ಲರೂ ಮಾಸ್ಕ್‌ ಧರಿಸುವುದು ಕಡ್ಡಾಯ’ ಎಂದೂ ಹೇಳಿದರು.

ಸಭಾಂಗಣದ ದುರಸ್ತಿ ಪೂರ್ಣ: ಬಾಲಭವನದ ಹಳೆಯ ಕಟ್ಟಡದಲ್ಲಿರುವ ಸಭಾಂಗಣವನ್ನೂ ದುರಸ್ತಿ ಮಾಡಲಾಗಿದೆ. ಸಭಾಂಗಣದಲ್ಲಿ ಮಳೆ ನೀರು ಸೋರಿಕೆಯನ್ನು ಸರಿಪಡಿಸಲಾಗಿದ್ದು, ಬಣ್ಣ ಹಚ್ಚಿ ಮೆರುಗು ಹೆಚ್ಚಿಸಲಾಗಿದೆ ಎಂದು ಬಾಲಭವನದ ಅಧಿಕಾರಿಗಳು ತಿಳಿಸಿದರು.

ಬೋಟಿಂಗ್‌ಗೆ ಮರುಜೀವ

ಬಾಲಭವನ ಆವರಣದಲ್ಲಿರುವ ಸಣ್ಣ ಕೆರೆಯಲ್ಲಿ ಈ ಹಿಂದೆ ಮಕ್ಕಳಿಗಾಗಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಕಾರಣಾಂತರಗಳಿಂದ2008ರಲ್ಲಿ ಬೋಟಿಂಗ್‌ ನಿಲ್ಲಿಸಲಾಗಿತ್ತು. ಸ್ಮಾರ್ಟ್‌ಸಿಟಿ ಯೋಜನೆಯಡಿ ಬಾಲಭವನದಲ್ಲೂ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದ್ದು, ಕೆರೆಯನ್ನು ಅಭಿವೃದ್ಧಿಪಡಿಸಿ, ಹೊಸ ಬೋಟ್‌ಗಳ ಸೇರ್ಪಡೆಯೊಂದಿಗೆ ಬೋಟಿಂಗ್‌ಗೆ ಮರುಜೀವ ನೀಡುವುದಾಗಿ ಮೂಲಗಳು ತಿಳಿಸಿವೆ.

ಮತ್ತೆ ಬರಲಿದೆ ‘ಮಕ್ಕಳ ಹಬ್ಬ’

ಮಕ್ಕಳ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬಾಲಭವನದಲ್ಲಿ ಮಕ್ಕಳ ಹಬ್ಬ ಆಯೋಜಿಸಲಾಗುತ್ತಿತ್ತು. ಕಾರಣಾಂತರಗಳಿಂದ ಮಕ್ಕಳ ಹಬ್ಬ ಇತ್ತೀಚಿನ ವರ್ಷಗಳಲ್ಲಿ ನಡೆದಿರಲಿಲ್ಲ. ಮುಂದಿನ ವರ್ಷ ಮಕ್ಕಳ ಹಬ್ಬವನ್ನು ಎಂದಿನಂತೆ ಆಯೋಜಿಸುವ ಉದ್ದೇಶವಿದೆ ಎನ್ನಲಾಗಿದೆ.

‘ಬಾಲಭವನದಲ್ಲಿ ಈ ಬಾರಿ ಮಕ್ಕಳ ದಿನಾಚರಣೆ ಆಚರಿಸಲು ಸಾಧ್ಯವಾಗಲಿಲ್ಲ. ಈ ಕಾರ್ಯಕ್ರಮವನ್ನು ಜನವರಿಯಲ್ಲಿ ಆಯೋಜಿಸುವ ಚಿಂತನೆ ಇದೆ. ಮಕ್ಕಳ ಹಬ್ಬವೂ ಮುಂದಿನ ವರ್ಷದಿಂದ ನಡೆಯುವ ಸಾಧ್ಯತೆ ಇದೆ’ ಎಂದು ಚಿಕ್ಕಮ್ಮ ಬಸವರಾಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.