ADVERTISEMENT

ಹೊಸ ಹೊಳಪಿನಲ್ಲಿ ಉದ್ಯಾನ ನಗರಿಯ ಬಾಲಭವನ!

ಗಮನ ಸೆಳೆಯುವ ಪುಟಾಣಿ ರೈಲು, ರಾಕ್‌ ಕ್ಲೈಂಬಿಂಗ್, ಟ್ರಾಫಿಕ್‌ ಉದ್ಯಾನ

ಖಲೀಲಅಹ್ಮದ ಶೇಖ
Published 10 ಡಿಸೆಂಬರ್ 2024, 1:06 IST
Last Updated 10 ಡಿಸೆಂಬರ್ 2024, 1:06 IST
ಬಾಲಭವನದಲ್ಲಿ ನವೀಕರಿಸಲಾದ ಟ್ರಾಫಿಕ್ ಉದ್ಯಾನದಲ್ಲಿ ನಿಂತಿರುವ ಎಲೆಕ್ಟ್ರಿಕ್‌ ವಾಹನಗಳು
ಪ್ರಜಾವಾಣಿ ಚಿತ್ರ: ಪ್ರಶಾಂತ್‌ ಎಚ್‌.ಜಿ.
ಬಾಲಭವನದಲ್ಲಿ ನವೀಕರಿಸಲಾದ ಟ್ರಾಫಿಕ್ ಉದ್ಯಾನದಲ್ಲಿ ನಿಂತಿರುವ ಎಲೆಕ್ಟ್ರಿಕ್‌ ವಾಹನಗಳು ಪ್ರಜಾವಾಣಿ ಚಿತ್ರ: ಪ್ರಶಾಂತ್‌ ಎಚ್‌.ಜಿ.   

ಬೆಂಗಳೂರು: ಹೊಸ ಪುಟಾಣಿ ರೈಲಿನ ಚುಕು ಬುಕು ಸದ್ದು, ಚಂದದ ದೋಣಿಗಳಲ್ಲಿ ವಿಹಾರ, ಕೃತಕ ಬಂಡೆಗಳಿರುವ ಗೋಡೆ (ರಾಕ್‌ ಕ್ಲೈಂಬಿಂಗ್‌ ಮಾದರಿ) ಏರುವ ಸಾಹಸ, ಪುಟ್ಟ ವಾಹನದಲ್ಲಿ ಕುಳಿತು ಸಂಚಾರ ಮಾಹಿತಿ ತಿಳಿಯವ ಉಮೇದು, ವಿಜ್ಞಾನ ತಿಳಿಸುವ ಉದ್ಯಾನ, ಅಂಗವಿಕಲ ಮಕ್ಕಳಿಗಾಗಿ ರೂಪಿಸಿರುವ ಕ್ರೀಡೋದ್ಯಾನ…

ಇದು ಉದ್ಯಾನ ನಗರಿಯ ಚಿಣ್ಣರ ಸಂಭ್ರಮದ ತಾಣ ಬಾಲಭವನದಲ್ಲಿ ಕಾಣುವ ಸಂಭ್ರಮದ ದೃಶ್ಯಗಳು.

12 ಎಕರೆ ವಿಸ್ತೀರ್ಣದಲ್ಲಿರುವ ಬಾಲಭವನ ಈಗ ನವೀಕರಣಗೊಂಡಿದೆ. ಸಾಹಸ ಕ್ರೀಡೆಗೊಂದು, ಸಂಚಾರ ಮಾಹಿತಿ ಅರಿಯಲು ಮತ್ತೊಂದು, ವಿಜ್ಞಾನ ವಿಷಯಕ್ಕೊಂದು.. ಹೀಗೆ ವೈವಿಧ್ಯ ‘ಉದ್ಯಾನಗಳು’ ಮೈದೆಳೆದಿವೆ. ಇದೆಲ್ಲದರ ಜೊತೆಗೆ ರೈಲು ಪ್ರಯಾಣದ ಅನುಭವ ಕಟ್ಟಿಕೊಡುವ ಪುಟಾಣಿ ರೈಲು ಮಕ್ಕಳ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಈಗ ವಾರಾಂತ್ಯದಲ್ಲಿ ಚಿಣ್ಣರ ಕಲರವ ಮತ್ತು ಅವರನ್ನು ಕರೆತರುವ ಕುಟುಂಬದವರ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ.

ADVERTISEMENT

ಸ್ಪರ್ಧೆ–ಸಾಂಸ್ಕೃತಿಕ ಕಾರ್ಯಕ್ರಮ

ವಾರಾಂತ್ಯದಲ್ಲಿ ಇಲ್ಲಿ ಮಕ್ಕಳಿಗಾಗಿ ಸಾಹಿತ್ಯ, ಚಿತ್ರಕಲೆ, ಕರಕುಶಲ, ಜೇಡಿಮಣ್ಣಿನ ಕಲೆ, ಸಮೂಹ ನೃತ್ಯ, ಸಮೂಹ ಗೀತೆ, ಯೋಗ, ರಂಗ ತರಬೇತಿ, ಮೆಹಂದಿ, ಮಡಿಕೆ ಮೇಲೆ ಚಿತ್ರ ರಚನೆ ಮತ್ತು ದೇಶಿ ಆಟಗಳ ಸ್ಪರ್ಧೆಗಳು ನಡೆಯುತ್ತಿದ್ದು, ಎಲ್ಲರಿಗೂ ಉಚಿತ ಪ್ರವೇಶವಿದೆ. ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ನೀಡಲಾಗುತ್ತದೆ.

ಮೈಂಡ್‌ಟ್ರೀ ಮತ್ತು ಬಾಲಭವನ ಸೊಸೈಟಿ ಸಹಯೋಗದಲ್ಲಿ ರಾಜ್ಯದ ಮೊದಲ ಅಂಗವಿಕಲ ಸ್ನೇಹಿ ಉದ್ಯಾನವೂ ಇಲ್ಲಿದೆ. ಈ ಉದ್ಯಾನದಲ್ಲಿ ಅಂಗವಿಕಲ ಮಕ್ಕಳು ವ್ಹೀಲ್‌ ಚೇರ್‌ ಮೂಲಕ ಆಟಿಕೆಗಳಲ್ಲಿ ಕುಳಿತು ಆಟ ಆಡುವ ವ್ಯವಸ್ಥೆ ಇದೆ. ಪುಟ್ಟ ಸುರಂಗ ಮಾರ್ಗ, ಜಾರುಬಂಡೆ ಮತ್ತು ಆ್ಯಂಪಿ ಥಿಯೇಟರ್‌ ನಿರ್ಮಿಸಲಾಗಿದೆ. ಬಾಸ್ಕೆಟ್‌ ಬಾಲ್‌ ಮೈದಾನಕ್ಕೆ ಇಪಿಡಿಎಂ ನೆಲಹಾಸು ಹೊದಿಸಲಾಗಿದೆ. ಆಟವಾಡುವಾಗ ಮಕ್ಕಳು ಬಿದ್ದರೂ ನೋವಾಗುವುದಿಲ್ಲ. ಸಣ್ಣ ಕೆರೆಯಲ್ಲಿ ದೋಣಿ ವಿಹಾರ ಮಾಡುವ ಅವಕಾಶವೂ ಇದೆ.

ಟ್ರಾಫಿಕ್‌ ಉದ್ಯಾನ ನವೀಕರಣ: ಮನೋರಂಜನೆಯ ಮೂಲಕ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆರಂಭಿಸಿದ್ದ ‘ಸಂಚಾರ ಉದ್ಯಾನ’ ಸ್ಥಗಿತಗೊಂಡಿತ್ತು. ಒಂದೂವರೆ ಎಕರೆ ಪ್ರದೇಶದಲ್ಲಿರುವ ಈ ಉದ್ಯಾನವನ್ನು ₹5 ಲಕ್ಷ ವೆಚ್ಚದಲ್ಲಿ ನವೀಕರಿಸಿ, ಪುನರಾರಂಭಿಸಲಾಗಿದೆ. ಇಲ್ಲಿ ಎರಡು ಕಡೆ ಟ್ರಾಫಿಕ್‌ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ರಸ್ತೆ ತಿರುವಿನ ಚಿಹ್ನೆಗಳು, ಝೀಬ್ರಾ ಕ್ರಾಸ್ ಕೂಡ ಇದೆ. ಮಕ್ಕಳು ತಾವೇ ವಾಹನಗಳನ್ನು ಚಲಾಯಿಸುವ ಮೂಲಕ ಸಂಚಾರದ ಅನುಭವ ಪಡೆದುಕೊಳ್ಳಬಹುದು. ಇದಕ್ಕಾಗಿಯೇ 10 ಎಲೆಕ್ಟ್ರಿಕ್‌ ಕಾರುಗಳು, 5 ಬೈಕ್‌ಗಳು, 5 ಸೈಕಲ್‌ಗಳನ್ನು ಖರೀದಿಸಲಾಗಿದೆ. ಮಕ್ಕಳಿಗೆ ₹30 ಪ್ರವೇಶ ದರವಿದೆ.

‘ರಸ್ತೆ ಸುರಕ್ಷತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮಕ್ಕಳಿಗೆ ರಸ್ತೆ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಲು ಈ ಉದ್ಯಾನ ಪ್ರಾರಂಭಿಸಲಾಗಿದೆ. ಮಕ್ಕಳು ಇಲ್ಲಿ ಪಠ್ಯದ ಜೊತೆಗೆ ಪ್ರಾಯೋಗಿಕವಾಗಿ ವಾಹನ ಚಲಾಯಿಸುವ ಮೂಲಕ ರಸ್ತೆ ಸಂಚಾರದ ನಿಯಮಗಳ ಕುರಿತು ಮಾಹಿತಿ ಪಡೆದುಕೊಳ್ಳಬಹುದು. ಹೆಲ್ಮೆಟ್‌, ಸೀಟ್‌ ಬೆಲ್ಟ್‌ ಧರಿಸುವಂತಹ ಸುರಕ್ಷತಾ ಕ್ರಮಗಳ ಬಗ್ಗೆಯೂ ಸಲಹೆ ನೀಡಲಾಗುತ್ತದೆ’ ಎಂದು ಜವಾಹರ್ ಬಾಲಭವನ ಸೊಸೈಟಿ ಅಧ್ಯಕ್ಷ ಬಿ.ಆರ್. ನಾಯ್ಡು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬಾಲಭವನದಲ್ಲಿನ ಈ ಹೊಸ ಪ್ರಯತ್ನವು ಮಕ್ಕಳಿಗೆ ಶಿಕ್ಷಣ ಮತ್ತು ನೈತಿಕ ಜೀವನ ಶೈಲಿಯನ್ನು ಒಟ್ಟುಗೂಡಿಸುವ ಒಂದು ಹೆಜ್ಜೆ ಆಗಿದೆ. ಶಿಕ್ಷಣ ಸಂಸ್ಥೆ, ಪಾಲಕರು ತಮ್ಮ ಮಕ್ಕಳನ್ನು‌ ಇಲ್ಲಿಗೆ ಕರೆತಂದು ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಕುರಿತು ಪ್ರಾಯೋಗಿಕ ಅನುಭವ ನೀಡಬಹುದು’ ಎಂದು ಆಹ್ವಾನ ನೀಡಿದರು.

ಎಲೆಕ್ಟ್ರಿಕ್‌ ವಾಹನ ಚಲಾಯಿಸಿದ ಬಾಲಕಿ ಪ್ರಜಾವಾಣಿ ಚಿತ್ರ
ಬಾಲಭವನದಲ್ಲಿರುವ ರಾಕ್ ಕ್ಲೈಂಬಿಂಗ್‌ನ ಮಾದರಿಯನ್ನು ಏರಿದ ಬಾಲಕಿ ಪ್ರಜಾವಾಣಿ ಚಿತ್ರ
ಅಂಗವಿಕಲ ಮಕ್ಕಳಿಗಾಗಿ ಉದ್ಯಾನ  ಪ್ರಜಾವಾಣಿ ಚಿತ್ರ: ಪ್ರಶಾಂತ್‌ ಎಚ್.ಜಿ.
ಬಿ.ಆರ್. ನಾಯ್ಡು ಜವಾಹರ್ ಬಾಲಭವನ ಸೊಸೈಟಿಯ ಅಧ್ಯಕ್ಷ
ಆಟಿಕೆ ರೈಲಿನಲ್ಲಿ ಮಕ್ಕಳು ಸಂಭ್ರಮಿಸಿದ ಪರಿ ಸಾಂದರ್ಭಿಕ ಚಿತ್ರ ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ರಾಕ್‌ ಕ್ಲೈಂಬಿಂಗ್‌ ಸಾಹಸ ಕ್ರೀಡೆ ಬಾಲಭವನದ ಆವರಣದಲ್ಲಿರುವ ₹40 ಲಕ್ಷ ವೆಚ್ಚದಲ್ಲಿ 30 ಅಡಿ ಎತ್ತರದ ಹಾಗೂ 12 ಅಡಿ ಅಗಲದ ಕೃತಕ ಗೋಡೆಯನ್ನು (ಹಗ್ಗದ ಮೂಲಕ ಬಂಡೆ ಏರುವುದು) ನಿರ್ಮಿಸಲಾಗಿದೆ. ಇಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ. ಮಕ್ಕಳ ತಾಳ್ಮೆ ಏಕಾಗ್ರತೆ ಧೈರ್ಯ ಆತ್ಮವಿಶ್ವಾಸ ಸಮತೋಲನ ಹೆಚ್ಚಿಸುವಲ್ಲಿ ಈ ಕ್ರೀಡೆ ಸಹಕಾರಿ ಆಗಲಿದೆ’ ಎಂದು ಬಿ.ಆರ್. ನಾಯ್ಡು ಹೇಳಿದರು. ‘ಮಕ್ಕಳ ಹಾಗೂ ಬಾಲಭವನದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಮಕ್ಕಳನ್ನು ಮೊಬೈಲ್‌ ಗೀಳಿನಿಂದ ಹೊರತರಲು ಸೃಜನಶೀಲ ಸಾಮರ್ಥ್ಯ ಹೆಚ್ಚಿಸುವ ಭೌತಿಕ ಮತ್ತು ಮಾನಸಿಕ ಕ್ರೀಡಾ ಚಟುವಟಿಕೆಗಳನ್ನು ಬಾಲಭವನದಲ್ಲಿ ಆಯೋಜಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.