ADVERTISEMENT

₹ 100ರ ಗಡಿ ದಾಟಿದ ಏಲಕ್ಕಿ ಬಾಳೆ!

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2023, 1:46 IST
Last Updated 16 ಆಗಸ್ಟ್ 2023, 1:46 IST
ಏಲಕ್ಕಿ ಬಾಳೆ
ಏಲಕ್ಕಿ ಬಾಳೆ    

ಬೆಂಗಳೂರು: ಮಳೆಯ ಕೊರತೆಯಿಂದ ಇಳುವರಿ ಕುಂಠಿತವಾಗಿರುವ ಪರಿಣಾಮ ಒಂದು ಕೆ.ಜಿ. ಏಲಕ್ಕಿ ಬಾಳೆ ಹಣ್ಣು ₹ 100 ರಂತೆ ಮಾರಾಟವಾಗುತ್ತಿದೆ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳವಾಗಿದೆ.

‘ಬೆಂಗಳೂರು ನಗರಕ್ಕೆ ಹೆಚ್ಚಾಗಿ ತಮಿಳುನಾಡಿನಿಂದ ಬಾಳೆ ಹಣ್ಣು ಪೂರೈಕೆಯಾಗುತ್ತದೆ. ಜತೆಗೆ ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಿಂದಲೂ ಬಾಳೆ ಹಣ್ಣು ಪೂರೈಕೆಯಾಗುತ್ತದೆ. ಆದರೆ, ಕಳೆದ ಒಂದು ವಾರದಲ್ಲಿ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಕಾರಣ ದರ ಹೆಚ್ಚಾಗಿದೆ. ನಗರದಲ್ಲಿ ಪಚ್ಚೆ ಮತ್ತು ಏಲಕ್ಕಿ ಬಾಳೆಗೆ ಹೆಚ್ಚು ಬೇಡಿಕೆ ಇದೆ’ ಎಂದು ಎಪಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದರು.

ಲಾಲ್‌ಬಾಗ್‌ ಹತ್ತಿರವಿರುವ ಹಾಪಕಾಮ್ಸ್‌ ಕೇಂದ್ರ ಕಚೇರಿಯ ಮಳಿಗೆಯಲ್ಲಿ ಒಂದು ಕೆ.ಜಿ. ಏಲಕ್ಕಿ ಬಾಳೆಗೆ ₹ 90 ಇದ್ದರೆ. ಪಚ್ಚೆ ಬಾಳೆ ₹38ರಂತೆ ಮಂಗಳವಾರ ಮಾರಾಟ ಮಾಡಲಾಯಿತು. ನಗರದ ವಿವಿಧ ಚಿಲ್ಲರೆ ಮಾರುಕಟ್ಟೆಗಳಲ್ಲಿ ₹ 100–₹110ರಂತೆ ಮಾರಾಟವಾಗುತ್ತಿದೆ.

ADVERTISEMENT

‘ಕಳೆದ ಹದಿನೈದು ದಿನಗಳಿಂದ ಏಲಕ್ಕಿ ಬಾಳೆ ಹಣ್ಣಿನ ಬೆಲೆ ಏರಿಕೆಯತ್ತ ಮುಖ ಮಾಡಿದೆ. ನಿಧಾನವಾಗಿ ದರ ಹೆಚ್ಚುತ್ತಿದ್ದು, ಹಬ್ಬದ ವೇಳೆಗೆ ಮತ್ತಷ್ಟು ದುಬಾರಿಯಾಗಬಹುದು. ಶ್ರಾವಣ ಮಾಸ ಮುಗಿಯುವವರೆಗೂ ಬಾಳೆ ಹಣ್ಣಿನ ಬೆಲೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಉತ್ತಮ ಗುಣಮಟ್ಟದ ಏಲಕ್ಕಿ ಬಾಳೆ ₹80 ರಿಂದ ₹90ರವರೆಗೂ ಇದ್ದು, ಪಚ್ಚೆ ₹40 ರಂತೆ ಮಾರಾಟವಾಗುತ್ತಿದೆ’ ಎಂದು ಕೆ.ಆರ್. ಮಾರುಕಟ್ಟೆ ಹಣ್ಣಿನ ವ್ಯಾಪಾರಿ ಇಮ್ರಾನ್‌ ಪಾಷಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.