ADVERTISEMENT

ಬಾಲಕನ ಅಪಹರಿಸಿ ಕೊಲೆ: ಪೆಟ್ರೋಲ್‌ ಸುರಿದು ಬೆಂಕಿಯಿಟ್ಟ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 19:58 IST
Last Updated 31 ಜುಲೈ 2025, 19:58 IST
ನಿಶ್ಚಿತ್‌ 
ನಿಶ್ಚಿತ್‌    

ಬೆಂಗಳೂರು: ಅರಕೆರೆಯ ಶಾಂತಿನಿಕೇತನ ಬಡಾವಣೆಯಲ್ಲಿ ಟ್ಯೂಷನ್‌ ಮುಗಿಸಿಕೊಂಡು ಬುಧವಾರ ರಾತ್ರಿ ಮನೆಗೆ ತೆರಳುತ್ತಿದ್ದ  ಬಾಲಕನನ್ನು ಅಪಹರಿಸಿ ಕೊಲೆ ಮಾಡಲಾಗಿದ್ದು, ಆರೋಪಿಗಳಿಗಾಗಿ ಹುಳಿಮಾವು ಠಾಣೆಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ನಿಶ್ಚಿತ್‌ (13) ಕೊಲೆಯಾದ ಬಾಲಕ. 

ನಿಶ್ಚಿತ್‌ ಅವರ ತಂದೆ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ನಿಶ್ಚಿತ್‌ ಮನೆಪಾಠಕ್ಕೆ ಹೋಗಿ ಮನೆಗೆ ವಾಪಸ್ ಬರುತ್ತಿದ್ದ. ಆಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಬಾಲಕನನ್ನು ಅಪಹರಣ ಮಾಡಿದ್ದರು. ನಂತರ, ನಿಶ್ಚಿತ್‌ ತಂದೆಗೆ ಕರೆ ಮಾಡಿದ್ದ ಆರೋಪಿಗಳು, ₹5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.‌

ADVERTISEMENT

ಅಪಹರಣದ ಸುದ್ದಿ ಕೇಳಿ ನಿಶ್ಚಿತ್‌ ಅವರ ಪೋಷಕರು ಹಾಗೂ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದರು. ತಕ್ಷಣವೇ ಹುಳಿಮಾವು ಠಾಣೆಗೆ ಮಾಹಿತಿ ನೀಡಿದ್ದರು. ಆರೋಪಿಗಳ ಪತ್ತೆ ಹಾಗೂ ಬಾಲಕನ ರಕ್ಷಣಾ ಕಾರ್ಯಾಚರಣೆಯನ್ನು ಪೊಲೀಸರು ಆರಂಭಿಸಿದ್ದರು. ಮತ್ತೊಂದೆಡೆ ಬಾಲಕನ ಪೋಷಕರು, ಅಪಹರಣಕಾರರಿಗೆ ನೀಡಲು ₹5 ಲಕ್ಷವನ್ನು ಸಿದ್ಧ ಮಾಡಿಕೊಂಡಿದ್ದರು. ಹಣ ನೀಡಿ ಮಗನನ್ನು ರಕ್ಷಿಸಲು ಮುಂದಾಗಿದ್ದರು. ಅಷ್ಟರಲ್ಲಿ ಬಾಲಕನ ಮೃತದೇಹವು ಕಗ್ಗಲಿಪುರ ರಸ್ತೆಯ ನಿರ್ಜನ‌ ಪ್ರದೇಶದಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಹುಳಿಮಾವು ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪ್ರತ್ಯೇಕ ತಂಡ ರಚಿಸಲಾಗಿದೆ. ಬಾಲಕನನ್ನು ಅಪಹರಣ ಮಾಡಿದ ಸ್ಥಳದ ಆಸುಪಾಸಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಬಾಲಕನ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ಬಳಿಕ ಮೃತದೇಹದ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಬಂಡೆಯ ಮೇಲೆ ಎಸೆದು ಆರೋಪಿಗಳು ಪರಾರಿ ಆಗಿದ್ದಾರೆ. ಮೃತದೇಹವು ಬಹುತೇಕ ಸುಟ್ಟು ಹೋಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು ಪೋಷಕರಿಗೆ ಕರೆ ಮಾಡಿದ್ದ ಸಂಪರ್ಕ ಸಂಖ್ಯೆಯನ್ನು ಪಡೆದುಕೊಳ್ಳಲಾಗಿದೆ. ಕೆಲವು ಸುಳಿವು ಸಿಕ್ಕಿದ್ದು ಶೀಘ್ರದಲೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಪೊಲೀಸರು ಹೇಳಿದರು. 

ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ಎಂ. ನಾರಾಯಣ್ ಹಾಗೂ ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ.ಬಾಬಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೋಷಕರ ಆಕ್ರಂದನ: ಕೊಲೆಯಾದ ಮಾಹಿತಿ ತಿಳಿಯುತ್ತಿದ್ದಂತೆಯೇ ನಿಶ್ಚಿತ್‌ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.