
ಬೆಂಗಳೂರು: ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್‌ಮಸ್ ಅನ್ನು ನಗರದ ವಿವಿಧೆಡೆ ಗುರುವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಕ್ರೈಸ್ತ ಧರ್ಮೀಯರು ಚರ್ಚ್‌ಗಳಿಗೆ ತೆರಳಿ ಯೇಸುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹೊಸ ಉಡುಗೆಗಳನ್ನು ತೊಟ್ಟಿದ್ದ ಕ್ರೈಸ್ತರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು, ಸಿಹಿ ಹಂಚಿದರು. ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ, ಕಬ್ಬನ್ ರಸ್ತೆಯ ಸೇಂಟ್ ಆಂಡ್ರ್ಯೂಸ್ ಚರ್ಚ್, ಫ್ರೇಜರ್‌ಟೌನ್‌ನ ಸೇಂಟ್ ಜಾನ್ಸ್ ಚರ್ಚ್, ಹಡ್ಸನ್ ವೃತ್ತದ ಹಡ್ಸನ್ ಚರ್ಚ್, ಇನ್ಫ್ಯಾಂಟ್ ಜೀಸಸ್ ಚರ್ಚ್, ಎಂ.ಜಿ.ರಸ್ತೆಯ ಸೇಂಟ್ ಮಾರ್ಕ್ಸ್ ಚರ್ಚ್ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಚರ್ಚ್‌ಗಳು ವಿದ್ಯುತ್ ದೀಪ ಹಾಗೂ ಆಲಂಕಾರಿಕ ವಸ್ತುಗಳಿಂದ ಕಂಗೊಳಿಸಿದವು. ಸೆಂಟಾಕ್ಲಾಸ್ ವೇಷಧಾರಿಗಳು ಚರ್ಚ್‌ನ ಆವರಣದಲ್ಲಿದ್ದ ಭಕ್ತಾದಿಗಳಿಗೆ ಬಗೆಬಗೆಯ ಉಡುಗೊರೆಗಳನ್ನು ನೀಡಿದರು. ಉಡುಗೊರೆ ಪಡೆಯಲು ಮಕ್ಕಳು ಮುಗಿ ಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕ್ರಿಸ್‌ಮಸ್ ಕೇಕ್ ಹಾಗೂ ಸಿಹಿ ತಿನಿಸುಗಳನ್ನು ಹಂಚಲಾಯಿತು.
ಚರ್ಚ್ ಆವರಣದಲ್ಲಿ ಯೇಸು ಹುಟ್ಟಿದ ಸಂದರ್ಭದ ಪ್ರತಿಕೃತಿಗಳು ಹಾಗೂ ಮೇರಿ ಮಾತೆ ಬಾಲ ಯೇಸುವನ್ನು ಎತ್ತಿಕೊಂಡಿರುವ ಮೂರ್ತಿಗಳನ್ನು ಪ್ರದರ್ಶಿಸಲಾಗಿತ್ತು. ಕ್ರಿಸ್‌ಮಸ್ ಮರಕ್ಕೆ ಉಡುಗೊರೆಗಳನ್ನು ಕಟ್ಟಲಾಗಿತ್ತು. ಚರ್ಚ್‌ಗಳಲ್ಲಿ ಬೈಬಲ್ ಪಠಣದ ಜತೆಗೆ ಯೇಸುವಿನ ಮಹಿಮೆಯ ಗೀತೆಗಳನ್ನು ಹಾಡಲಾಯಿತು. ತಂಗಾಳಿಯಂತೆ ತೇಲಿ ಬರುವ ‘ಕ್ಯಾರೆಲ್ಸ್’ (ಹರ್ಷ ಗೀತೆಗಳು) ಕಿವಿಗೆ ಇಂಪು ನೀಡುತ್ತಿದ್ದವು. ಚರ್ಚ್‌ಗಳಲ್ಲಿ ನೃತ್ಯರೂಪಕಗಳು, ಕೆಲವೆಡೆ ಮೇರಿ ಮಾತೆ, ಬಾಲ ಯೇಸುವಿನ ಮೆರವಣಿಗೆ, ರಥೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.
ಜನಜಂಗುಳಿ: ಕ್ರಿಸ್‌ಮಸ್ ರಜೆಯ ಹಿನ್ನೆಲೆಯಲ್ಲಿ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಮಹಾತ್ಮ ಗಾಂಧಿ ರಸ್ತೆಯಲ್ಲಿ ಜನಜಂಗುಳಿ ಹೆಚ್ಚಿತ್ತು. ಕ್ರಿಸ್‌ಮಸ್ ಕ್ರೌನ್, ಸೆಂಟಾಕ್ಲಾಸ್ ಟೋಪಿ ಹಾಕಿಕೊಂಡು ಜನ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.