ವಂಚನೆ–ಪ್ರಾತಿನಿಧಿಕ ಚಿತ್ರ
ಬೆಂಗಳೂರು: ನಗರದ 67 ವರ್ಷದ ವೃದ್ಧರೊಬ್ಬರನ್ನು ‘ಡಿಜಿಟಲ್ ಅರೆಸ್ಟ್ ’ ಹೆಸರಿನಲ್ಲಿ ಬೆದರಿಸಿದ ಸೈಬರ್ ವಂಚಕ ₹17.95 ಲಕ್ಷ ಸುಲಿಗೆ ಮಾಡಿರುವ ಘಟನೆ ನಡೆದಿದೆ
ಕಾಕ್ಸ್ ಟೌನ್ ನಿವಾಸಿ ವಿಶ್ವನಾಥನ್ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಸೆನ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಅಕ್ಟೋಬರ್ 10ರಂದು ವಿಶ್ವನಾಥನ್ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತಾನು ಮುಂಬೈನ ಕೊಲಾಬಾ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ‘ಪಿಎಫ್‌ಐ ಜತೆ ನಂಟು ಹೊಂದಿರುವ ಸಂಸ್ಥೆಯ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಿಮ್ಮ ಹೆಸರು ಹಾಗೂ ಇತರೆ ವಿವರಗಳು ಪತ್ತೆಯಾಗಿವೆ’ ಎಂದು ಬೆದರಿಸಿದ್ದಾನೆ.
ಬಳಿಕ ಅಧಿಕಾರಿಗಳ ಸೋಗಿನಲ್ಲಿ ಹಲವರು ಕರೆ ಮಾಡಿ, ‘ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾಗಿದೆ’ ಎಂದು ಹೇಳಿದ್ದಾರೆ. ಎಫ್‌ಐಆರ್ ಪ್ರತಿ, ಪಿಎಫ್‌ಐ ಸದಸ್ಯರ ಭಾವಚಿತ್ರ, ಮುಂಬೈ ಪೊಲೀಸರ ಗುರುತಿನ ಚೀಟಿ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ವಿಶ್ವನಾಥನ್ ಅವರ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದಾರೆ. ನಂತರ ‘ಡಿಜಿಟಲ್ ಅರೆಸ್ಟ್’ ಮಾಡುತ್ತಿರುವುದಾಗಿ ಹೇಳಿದ್ದಾರೆ.
‘ಆಸ್ತಿಯ ಬಗ್ಗೆ ತನಿಖೆ ನಡೆಸಬೇಕಿದೆ. ತನಿಖೆ ಮುಗಿಯುವವರೆಗೂ ಖಾತೆಯಲ್ಲಿರುವ ಹಣವನ್ನು ವರ್ಗಾಯಿಸ
ಬೇಕು. ಹಣವನ್ನು ತನಿಖೆ ಪೂರ್ಣವಾದ ಬಳಿಕ ಮರಳಿಸಲಾಗುವುದು’ ಎಂದು ಹೇಳಿದ್ದಾರೆ. ವಂಚಕರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 17.95 ಲಕ್ಷವನ್ನು ವರ್ಗಾಯಿಸಿದ್ದಾರೆ.
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚಿಸಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಹಣವನ್ನು ವಾಪಸ್ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.