ADVERTISEMENT

ಬೆಂಗಳೂರು | ಕ್ರಿಸ್‌ಮಸ್‌ ಸಂಭ್ರಮಕ್ಕೆ ಸಜ್ಜುಗೊಂಡ ನಗರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 16:24 IST
Last Updated 24 ಡಿಸೆಂಬರ್ 2023, 16:24 IST
ನಗರದ ಚಾಮರಾಜಪೇಟೆಯಲ್ಲಿರುವ ಸಂತ ಜೋಸೆಫ್ ಚರ್ಚನಲ್ಲಿ ಕ್ರಿಸ್‌ಮಸ್‌ ಮುನ್ನಾ ದಿನವಾದ ಭಾನುವಾರ ಗೋದಲಿ ವೀಕ್ಷಿಸಿದ ಜನರು -ಪ್ರಜಾವಾಣಿ ಚಿತ್ರ/ ರಂಜು ಪಿ
ನಗರದ ಚಾಮರಾಜಪೇಟೆಯಲ್ಲಿರುವ ಸಂತ ಜೋಸೆಫ್ ಚರ್ಚನಲ್ಲಿ ಕ್ರಿಸ್‌ಮಸ್‌ ಮುನ್ನಾ ದಿನವಾದ ಭಾನುವಾರ ಗೋದಲಿ ವೀಕ್ಷಿಸಿದ ಜನರು -ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ವಿಶ್ವಕ್ಕೆ ಶಾಂತಿ ಸಂದೇಶ ಸಾರುವ ಕ್ರಿಸ್‌ಮಸ್‌ ಆಚರಣೆಗೆ ನಗರದ ಚರ್ಚ್‌ಗಳು ವಿದ್ಯುತ್ ದೀಪಾಲಂಕಾರಗಳೊಂದಿಗೆ ಸಜ್ಜುಗೊಂಡಿವೆ. ಭಾನುವಾರದ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಮಕ್ಕಳ ಕ್ರಿಸ್‌ಮಸ್‌ ಆಚರಿಸಲಾಯಿತು.

ಶಿವಾಜಿನಗರದ ಸೇಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್‌ನಲ್ಲಿ ಭಾನವಾರವೇ ಜನ ಜಾತ್ರೆ ನೆರೆದಿತ್ತು. ಯೇಸುವಿನ ಜೀವನ ಬಿಂಬಿಸುವ ಗೋದಲಿ ಪ್ರದರ್ಶನವನ್ನು ಲಕ್ಷಾಂತರ ಮಂದಿ ವೀಕ್ಷಿಸಿದರು. 

ಫ್ರೇಜರ್‌ ಟೌನ್‌ನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್, ಬ್ರಿಗೇಡ್ ರಸ್ತೆ ಬಳಿಯ ಸೇಂಟ್‌ ಪ್ಯಾಟ್ರಿಕ್ಸ್ ಚರ್ಚ್, ಸೇಂಟ್ ಮಾರ್ಕ್ಸ್ ಕೆಥೆಡ್ರಲ್, ಚಾಮರಾಜಪೇಟೆಯ ಸೇಂಟ್ ಜೋಸೆಫ್ಸ್‌ ಚರ್ಚ್, ಸೇಂಟ್ ಜಾನ್ಸ್ ಚರ್ಚ್ ಸೇರಿದಂತೆ ಅನೇಕ ಚರ್ಚ್‌ಗಳಲ್ಲಿ ‘ದೇವಪುತ್ರ’ ಯೇಸು ಕ್ರಿಸ್ತರ ಜನ್ಮ ದಿನಾಚರಣೆಗೆ ಸಂಭ್ರಮದಿಂದ ಸಿದ್ಧಗೊಂಡಿವೆ.

ADVERTISEMENT

ಎಲ್ಲ ಚರ್ಚ್‌ಗಳಲ್ಲಿ ಬೃಹದಾಕಾರದ ನಕ್ಷತ್ರಗಳು, ಕ್ರಿಸ್‌ಮಸ್‌ ವೃಕ್ಷಗಳು, ಬಣ್ಣ ಬಣ್ಣದ ಬಲೂನುಗಳು, ಘಂಟೆಗಳು ಹಾಗೂ ಸೆಂಟಾ ಕ್ಲಾಸ್‌ ಪ್ರತಿರೂಪಗಳು ಗಮನಸೆಳೆಯುತ್ತಿವೆ. ತಂಗಾಳಿಯಂತೆ ತೇಲಿ ಬರುವ ‘ಕ್ಯಾರೆಲ್ಸ್’ (ಹರ್ಷ ಗೀತೆಗಳು) ಕಿವಿಗೆ ಇಂಪು ನೀಡುತ್ತಿವೆ.

ಕ್ರೈಸ್ತ ಸಮುದಾಯದ ಮನೆಗಳಲ್ಲಿಯೂ ಸಂಭ್ರಮ ಮನೆ ಮಾಡಿದೆ. ಮನೆಗಳ ಮೇಲೆ ನಕ್ಷತ್ರಗಳು ವಿದ್ಯುತ್‌ ದೀಪಗಳೊಂದಿಗೆ ಕಂಗೊಳಿಸುತ್ತಿವೆ.

ಬಗೆಬಗೆಯ ತಿನಿಸು

ಹಬ್ಬಕ್ಕಾಗಿ ಕೇಕ್, ಕುಕ್ಕೀಸ್ ಸೇರಿದಂತೆ ವೈವಿಧ್ಯಮಯ ತಿಂಡಿಗಳನ್ನು ಸಿದ್ಧಪಡಿಸಲಾಗಿದೆ. ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಬಂಧು, ಮಿತ್ರರನ್ನು ಆಹ್ವಾನಿಸುವುದು ವಾಡಿಕೆ. ಧರ್ಮಾತೀತವಾಗಿ ತಮ್ಮ ಬಳಗವನ್ನು ಮನೆಗೆ ಕರೆದು ಭರ್ಜರಿ ಭೋಜನ ನೀಡಲು ತಯಾರಿಯೂ ನಡೆದಿದೆೆ ಎಂದು ಕಾಕ್ಸ್‌ಟೌನ್‌ನ ಕ್ಸೇವಿಯರ್‌ ತಿಳಿಸಿದರು.

ವಿದ್ಯುತ್‌ ದೀಪಗಳಿಂದ ಅಲಂಕೃತವಾಗಿರುವ ಶಿವಾಜಿನಗರದ ಸೇಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ನೆರೆದಿರುವ ಯೇಸು ಅನುಯಾಯಿಗಳು. –ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್‌
ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಮಣಿಪಾಲ್ ಆಸ್ಪತ್ರೆ ವತಿಯಿಂದ ಸೆಂಟಾ ಕ್ಲಾಸ್‌ ವೇಷಧಾರಿಗಳು ನಗರದಲ್ಲಿ ಹಿರಿಯ ನಾಗರಿಕರಿಗೆ ಉಡುಗೊರೆಗಳನ್ನು ನೀಡಿದರು.
ಶಿವಾಜಿನಗರದ ಸೇಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್‌ನಲ್ಲಿ ಧರ್ಮಗುರು ಮಾರ್ಟಿಕ್‌ ಕುಮಾರ್‌ ಅವರು ಬಾಲ ಯೇಸು ಮೂರ್ತಿಯನ್ನು ತೊಟ್ಟಿಲಲ್ಲಿ ಇರಿಸಿದರು  –ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್ ಕುಮಾರ್‌
ಶಿವಾಜಿನಗರದ ಸೇಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್‌ನಲ್ಲಿ ಭಾನುವಾರ ನಡೆದ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಭಕ್ತರು   – ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.