ADVERTISEMENT

Bengaluru Lit Fest | ನಾಯಕನಿಗಿಂತ ಜನರೇ ದೊಡ್ಡವರು: ಚಂದ್ರಶೇಖರ ಕಂಬಾರ

ವರುಣ ಹೆಗಡೆ
Published 3 ಡಿಸೆಂಬರ್ 2023, 19:24 IST
Last Updated 3 ಡಿಸೆಂಬರ್ 2023, 19:24 IST
ಬೆಂಗಳೂರು ಸಾಹಿತ್ಯ ಉತ್ಸವದ ‘ಹೇಳತೇನ ಕೇಳ’ ಗೋಷ್ಠಿಯಲ್ಲಿ ಚಂದ್ರಶೇಖರ ಕಂಬಾರ ಮಾತನಾಡಿದರು. ಬಸವರಾಜ ಕಲ್ಗುಡಿ ಇದ್ದಾರೆ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಬೆಂಗಳೂರು ಸಾಹಿತ್ಯ ಉತ್ಸವದ ‘ಹೇಳತೇನ ಕೇಳ’ ಗೋಷ್ಠಿಯಲ್ಲಿ ಚಂದ್ರಶೇಖರ ಕಂಬಾರ ಮಾತನಾಡಿದರು. ಬಸವರಾಜ ಕಲ್ಗುಡಿ ಇದ್ದಾರೆ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ‘ಎಷ್ಟೇ ದೊಡ್ಡ ನಾಯಕನಾದರೂ ಆತ ಜನರಿಗಿಂತ ದೊಡ್ಡವನಾಗಲು ಸಾಧ್ಯವಿಲ್ಲ. ಯಾವಾಗಲೂ ಜನರೇ ದೊಡ್ಡವರು.’ 

ಹೀಗೆ ಹೇಳಿದ್ದು ಸಾಹಿತಿ ಚಂದ್ರಶೇಖರ ಕಂಬಾರ. ತಾವು ಬರವಣಿಗೆ ಪ್ರಾರಂಭಿಸಿದ ಬಗೆಯನ್ನು ಬೆಂಗಳೂರು ಸಾಹಿತ್ಯೋತ್ಸವದ ಎರಡನೇ ದಿನವಾದ ಭಾನುವಾರ ನಡೆದ ‘ಹೇಳತೇನ ಕೇಳ’ ಗೋಷ್ಠಿಯಲ್ಲಿ ವಿವರಿಸಿದರು. 

‘ರಸಾನುಭವ ನೀಡುವುದೇ ಕಾವ್ಯದ ಉದ್ದೇಶ. ಕವಿತೆ ಇರುವುದು ಹಾಡಲು ಹಾಗೂ ಸಂವಹನ ನಡೆಸಲು. ನಾನು ಬರವಣಿಗೆ ಪ್ರಾರಂಭಿಸಿದ ಕಾಲದಲ್ಲಿ ಚೀನಾದ ಕಮ್ಯೂನಿಸ್ಟ್‌ ಕ್ರಾಂತಿಕಾರಿ ಮಾವೊತ್ಸೆ ತುಂಗ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದ್ದರು. ಆ ವೇಳೆ ಜನರು ಯಾವುದಕ್ಕೆ ಸ್ಪಂದಿಸಬಲ್ಲರು ಎನ್ನುವುದನ್ನು ಅರಿತು, ಮಾವೊತ್ಸೆ ತುಂಗನ ಬಗ್ಗೆಯೇ ಪದ್ಯ ಬರೆದೆ’ ಎಂದು ಹೇಳಿದ ಅವರು, ‘ಮರೆತೇನೆಂದಾರ ಮರೆಯಲಿ ಹ್ಯಾಂಗ ಮಾವೊತ್ಸೆ ತುಂಗ, ಮರೆತೇನೆಂದಾರ ಮರೆಯಲಿ ಹ್ಯಾಂಗ...’ ಎಂದು ಪದ್ಯವನ್ನು ಹಾಡಿದರು. 

ADVERTISEMENT

‘ಕಾವ್ಯವನ್ನು ನಾವು ಹಾಡಿನ ರೂಪದಲ್ಲಿಯೇ ಕಂಡಿರುವುದು. ಆಧುನಿಕ ವಿಚಾರಗಳು ಹಾಡಿನ ರೂಪದಲ್ಲಿ ಧ್ವನಿಸಬೇಕು. ಈ ವಿಧಾನದಲ್ಲಿ ವಿಷಯವನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಾಧ್ಯ. ಜನರಿಗೆ ಏನು ತಿಳಿಯುತ್ತದೆ ಎಂಬುದನ್ನು ಅರಿತು ನಾನು ಸಾಹಿತ್ಯಸೃಷ್ಟಿಯಲ್ಲಿ ತೊಡಗಿದೆ’ ಎಂದು ಹೇಳಿದರು. 

ತಮ್ಮ ಕಾವ್ಯದಲ್ಲಿ ಸಾವಳಗಿ ಶಿವಲಿಂಗದ ಬಗ್ಗೆ ಸ್ಮರಿಸಿಕೊಳ್ಳುವ ಬಗ್ಗೆ ವಿವರಿಸಿದ ಅವರು, ‘ನನ್ನ ಹಾಡನ್ನು ಯಾರೂ ಕೇಳದೆ ಇರುವ ಸಂದರ್ಭದಲ್ಲಿ ಸಾವಳಗಿ ಸ್ವಾಮೀಜಿ ಪ್ರೋತ್ಸಾಹಿಸಿದರು. ಶಿಕ್ಷಣಕ್ಕೂ ನೆರವಾದರು. ಇದರಿಂದಾಗಿ ಅವರನ್ನು ಸ್ಮರಿಸಿಕೊಳ್ಳುತ್ತೇನೆ’ ಎಂದರು. 

ಗೋಷ್ಠಿ ನಡೆಸಿಕೊಟ್ಟ ವಿಮರ್ಶಕ ಬಸವರಾಜ ಕಲ್ಗುಡಿ, ‘ಕಂಬಾರರು ಕನ್ನಡ ಸಾಹಿತ್ಯವನ್ನು ಹೊಸ ದಿಕ್ಕಿನತ್ತ ಕೊಂಡೊಯ್ದರು. ಅವರ ಕಾದಂಬರಿ, ನಾಟಕ, ಕವನಗಳಲ್ಲಿ ಹೊಸ ಶೈಲಿಯನ್ನು ನೋಡಬಹುದು. ಕನ್ನಡ ಇವರ ಕೈ ಹಿಡಿದರೆ, ಇವರು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದರು’ ಎಂದು ಮೆಚ್ಚುಗೆ ವ್ಯಕ್ತ‍ಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.