ADVERTISEMENT

ನಸುಕಿನಲ್ಲಿ ಪೊಲೀಸರ ಪಿಸ್ತೂಲ್ ಸದ್ದು: ರೌಡಿ ಕಾಲಿಗೆ ಗುಂಡೇಟು

ಬೆಂಗಳೂರು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 2:53 IST
Last Updated 7 ಮಾರ್ಚ್ 2021, 2:53 IST
ರೌಡಿ‌ ಚಡ್ಡಿ‌ ಕಿರಣ್
ರೌಡಿ‌ ಚಡ್ಡಿ‌ ಕಿರಣ್   

ಬೆಂಗಳೂರು:ಕೊಲೆಗೆ ಯತ್ನಿಸಿದ್ದ ಪ್ರಕರಣ ಆರೋಪಿ ರೌಡಿ ಕಿರಣ್ ಅಲಿಯಾಸ್ ಚಡ್ಡಿಯನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.

'ಬಂಧಿಸಲು ಹೋದ ಪೊಲೀಸರ ಮೇಲೆಯೇ ರೌಡಿ‌ ಕಿರಣ್ ಹಲ್ಲೆ ಮಾಡಿದ್ದ. ಆತ್ಮರಕ್ಷಣೆಗಾಗಿ ರಾಜಗೋಪಾಲ್ ನಗರ ಠಾಣೆ ಪಿಎಸ್ಐ ನವೀದ್, ರೌಡಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ' ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ 'ಪ್ರಜಾವಾಣಿ'ಗೆ ತಿಳಿಸಿದರು.

'ಲಗ್ಗೆರೆ ನಿವಾಸಿ ಕಿರಣ್ ಹಾಗೂ ಆತನ ಸಹಚರರ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆತ ಜೈಲಿಗೂ ಹೋಗಿ, ಜಾಮೀನು ಮೇಲೆ ಹೊರಬಂದಿದ್ದ.'

ADVERTISEMENT

'ಮಾ. 2ರಂದು ವಿನೋದ್ ಹಾಗೂ ಅವರ ಕುಟುಂಬದವರ ಮೇಲೆ ದಾಳಿ‌ ಮಾಡಿದ್ದ ರೌಡಿ ಕಿರಣ್ ಹಾಗೂ ಸಹಚರರು, ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಪಿಎಸ್ಐ ‌ನವೀದ್ ಹಾಗೂ ಸಿಬ್ಬಂದಿ, ಆರೋಪಿಗಾಗಿ ಶೋಧ ನಡೆಸುತ್ತಿದ್ದರು' ಎಂದೂ ಅವರು ಹೇಳಿದರು.

'ಭಾನುವಾರ ನಸುಕಿನಲ್ಲಿ ಲಗ್ಗೆರೆ ಸೇತುವೆ ಬಳಿ ರೌಡಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಮಾಹಿತಿ‌ ಸಿಕ್ಕಿತ್ತು. ಸ್ಥಳಕ್ಕೆ‌ ಹೋಗಿದ್ದ ಪೊಲೀಸರು, ಶರಣಾಗುವಂತೆ ಹೇಳಿದ್ದರು. ಆದರೆ, ರೌಡಿ ಹಾಗೂ ಆತನ ಸಹಚರ, ದ್ವಿಚಕ್ರ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಹೊರಟಿದ್ದರು. ಪೊಲೀಸರು ಬೆನ್ನಟ್ಟಿದ್ದರು. ಮಾರ್ಗಮಧ್ಯೆಯೇ ಕಾನ್‌ಸ್ಟೆಬಲ್ ಬಸವಣ್ಣ ರೌಡಿಯನ್ನು ಹಿಡಿದುಕೊಳ್ಳಲು ಮುಂದಾಗಿದ್ದರು. ಅದೇ ಸಂದರ್ಭದಲ್ಲೇ ರೌಡಿಯ ಸಹಚರ ದಾಸ್, ಕಾನ್‌ಸ್ಟೆಬಲ್ ಅವರ ಕೈಗೆ ಚಾಕುವಿನಿಂದ ಇರಿದಿದ್ದ. ರೌಡಿ ಸಹ ದಾಳಿ‌ ಮಾಡಲು ಮುಂದಾಗಿದ್ದ. ಅವಾಗಲೇ ಪಿಎಸ್ಐ , ರೌಡಿಯ ಬಲಗಾಲಿಗೆ ಗುಂಡು ಹಾರಿಸಿದ್ದರು. ಸ್ಥಳದಲ್ಲೇ ಕುಸಿದು ಬಿದ್ದಿದ್ದ ರೌಡಿಯನ್ನು ಪೊಲೀಸರೇ ಆಸ್ಪತ್ರೆಗೆ ಸೇರಿಸಿದ್ದಾರೆ. ಕಾನ್‌ಸ್ಟೆಬಲ್ ‌ಸಹ ಚಿಕಿತ್ಸೆ‌ ಪಡೆಯುತ್ತಿದ್ದಾರೆ' ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.