ADVERTISEMENT

ಬೆಂಗಳೂರು ರೆಸಿಡೆನ್ಸಿ ರಸ್ತೆ | ಮಂದಗತಿಯಲ್ಲಿ ಕಾಮಗಾರಿ: ಸಂಚಾರಕ್ಕೆ ಅಡ್ಡಿ

ವ್ಯಾಪಾರ, ವಹಿವಾಟಿಗೂ ತೊಂದರೆ l ಸಾರ್ವಜನಿಕರ ಅಸಮಾಧಾನ l ಅಪಘಾತಕ್ಕೂ ದಾರಿ

ಖಲೀಲಅಹ್ಮದ ಶೇಖ
Published 29 ಜೂನ್ 2025, 23:30 IST
Last Updated 29 ಜೂನ್ 2025, 23:30 IST
ರೆಸಿಡೆನ್ಸಿ ರಸ್ತೆಯಿಂದ ಜಿ3 ಬಸ್‌ ತಂಗುದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೊಳವೆಗಳನ್ನು ಜೋಡಿಸಿ ಇಟ್ಟಿರುವುದು
ಪ್ರಜಾವಾಣಿ ಚಿತ್ರ: ರಂಜು ಪಿ.
ರೆಸಿಡೆನ್ಸಿ ರಸ್ತೆಯಿಂದ ಜಿ3 ಬಸ್‌ ತಂಗುದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೊಳವೆಗಳನ್ನು ಜೋಡಿಸಿ ಇಟ್ಟಿರುವುದು ಪ್ರಜಾವಾಣಿ ಚಿತ್ರ: ರಂಜು ಪಿ.   

ಬೆಂಗಳೂರು: ರೆಸಿಡೆನ್ಸಿ ರಸ್ತೆಯ ಆಶೀರ್ವಾದ ಜಂಕ್ಷನ್‌ನಿಂದ ಬ್ರಿಗೇಡ್‌ ರಸ್ತೆಯ ಜಂಕ್ಷನ್‌ವರೆಗೆ ವೈಟ್‌ ಟಾಪಿಂಗ್‌ ಕಾಮಗಾರಿ ಮುಗಿದು ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ. ಆದರೆ, ಒಳಚರಂಡಿಯ ಕೊಳವೆಗಳನ್ನು ಅಳವಡಿಸಲು ರಸ್ತೆಯ ಎರಡೂ ಬದಿಯನ್ನು ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಅನನಕೂಲವಾಗಿದ್ದು, ವ್ಯಾಪಾರಿಗಳು, ಗ್ರಾಹಕರು, ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ.

ಬಿಬಿಎಂಪಿಯಿಂದ ವೈಟ್‌ ಟಾಪಿಂಗ್‌ ಕಾಮಗಾರಿ, ಒಳಚರಂಡಿಯ ಕೊಳವೆ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ನಗರದ ಕೇಂದ್ರ ವಲಯದ ರೆಸಿಡೆನ್ಸಿ ರಸ್ತೆಯು ಪ್ರಮುಖ ಮಾರ್ಗವಾಗಿದೆ. ಇಲ್ಲಿಂದ ಕೆ.ಆರ್. ಪುರ, ಹೊಸಕೋಟೆ, ಇಂದಿರಾನಗರ, ಮಾರತ್‌ಹಳ್ಳಿ, ದೊಮ್ಮಲೂರು, ಹಲಸೂರು, ಐಟಿಪಿಎಲ್‌, ವೈಟ್‌ಫೀಲ್ಡ್‌, ಕಾಡುಗೋಡಿ ಸೇರಿದಂತೆ ಹಲವಾರು ಬಡಾವಣೆಗಳಿಗೆ ಬಿಎಂಟಿಸಿ ಬಸ್‌ಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ. ಕಿರಿದಾದ ರಸ್ತೆಯ ಎರಡೂ ಬದಿಯನ್ನು ಅಗೆದು ಹಾಗೆಯೇ ಬಿಟ್ಟಿರುವ ಪರಿಣಾಮ ಸಂಚಾರ ದಟ್ಟಣೆ ಆಗುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ. 

‘ಬಿಬಿಎಂಪಿ ಸಿಬ್ಬಂದಿ ನಾನಾ ಕಾರಣಗಳಿಂದ ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ. ಈ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಬರುವ ಗ್ರಾಹಕರು ಮತ್ತು ವ್ಯಾಪಾರಿಗಳು ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಈ ಎಲ್ಲ ಅವ್ಯವಸ್ಥೆಗಳಿಂದಾಗಿ ಇಲ್ಲಿಗೆ ಖರೀದಿಗೆ ಬರುವ ಗ್ರಾಹಕರ ಸಂಖ್ಯೆ ವಿರಳವಾಗಿದೆ’ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಈ ಭಾಗದಲ್ಲಿ ಹಲವಾರು ಶಾಲಾ–ಕಾಲೇಜುಗಳಿವೆ. ವಿದ್ಯಾರ್ಥಿಗಳು ನಿತ್ಯ ಈ ಹಾದಿಯ ಮೂಲಕವೇ ಶಾಲೆ–ಕಾಲೇಜುಗಳಿಗೆ ತಲುಪಬೇಕಿದೆ. ಆದರೆ, ಈ ರಸ್ತೆಯ ಎರಡೂ ಬದಿಯಲ್ಲಿ ಬೃಹತ್‌ ಗಾತ್ರದ ಕೊಳವೆಗಳನ್ನು ಜೋಡಿಸಿ ಇಡಲಾಗಿದೆ. ಇವು ಯಾವಾಗ ಬೇಕಾದರೂ ಬೀಳುವ ಆತಂಕವಿದೆ. ಏನಾದರೂ ಅನಾಹುತಗಳು ಸಂಭವಿಸುವ ಮುನ್ನ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. 

‘ಕಾಮಗಾರಿ ನಡೆಯುತ್ತಿರುವದರಿಂದ ವಾಹನಗಳು ನನ್ನ ಅಂಗಡಿಯ ಬಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಈ ಮೊದಲು ಗ್ರಾಹಕರ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಆದರೆ, ಇದೀಗ ಒಬ್ಬ ವ್ಯಕ್ತಿ ನಿಂತರೆ ಅದೇ ಅಪರೂಪ ಎನ್ನುವಂತಾಗಿದೆ. ಕಾಮಗಾರಿಯಿಂದಾಗಿ, ಗ್ರಾಹಕರಿಲ್ಲದೇ, ವ್ಯಾಪಾರವೂ ಕುಂಟುತ್ತಾ ಸಾಗುತ್ತಿದೆ’ ಎಂದು ಪಾನ್‌ಶಾಪ್‌ ಅಂಗಡಿಯ ಸುಹೇಲ್ ಹೇಳಿದರು.  

‘ಎರಡು ವಾರಗಳ ಹಿಂದೆಯೇ ನನ್ನ ಅಂಗಡಿಯ ಮುಂದೆ ಇರುವ ಪ್ರದೇಶವನ್ನು ಅಗೆದು, ಕೆಲಸ ಪ್ರಾರಂಭಿಸಲಾಗಿದೆ. 10 ರಿಂದ 15 ದಿನಗಳವರೆಗೆ ಯಾವುದೇ ಕೆಲಸ ಮಾಡಲಿಲ್ಲ. ದೂಳುಮಯ ವಾತಾವರಣ ನಿರ್ಮಾಣವಾಗಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ’ ಎಂದು ಬಾರ್‌ ಅಂಗಡಿಯ ಅನಂತ್‌ ಹೇಳಿದರು. 

ರೆಸಿಡೆನ್ಸಿ ರಸ್ತೆಯಲ್ಲಿ ಕೊಳವೆ ಜೋಡಿಸಲು ಬಿಟ್ಟಿರುವ ಜಾಗ  ಪ್ರಜಾವಾಣಿ ಚಿತ್ರ: ರಂಜು ಪಿ.
ರೆಸಿಡೆನ್ಸಿ ರಸ್ತೆಯಲ್ಲಿ ಕೊಳವೆ ಜೋಡಿಸಲು ಬಿಟ್ಟಿರುವ ಜಾಗದಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬರು ಸಾಗಿದರು ಪ್ರಜಾವಾಣಿ ಚಿತ್ರ: ರಂಜು ಪಿ.
ರೆಸಿಡೆನ್ಸಿ ಮುಖ್ಯರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿ ಮುಕ್ತಾಯಗೊಂಡಿದೆ. ಒಳಚರಂಡಿ ಕಾಮಗಾರಿ ಬಾಕಿ ಉಳಿದಿದೆ. ಒಂದು ವಾರದೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು
ಲೋಕೇಶ್ ಬಿಬಿಎಂಪಿ ಮುಖ್ಯ ಎಂಜಿನಿಯರ್

ವ್ಯಾಪಾರಿಗಳು ಏನಂತಾರೆ? 

ಜಿ3 ಬಸ್‌ ತಂಗುದಾಣದ ಮುಂಭಾಗದಲ್ಲಿ ಮದ್ಯದ ಮಳಿಗೆ ಇದೆ. ಈ ಬಸ್ ತಂಗುದಾಣದ ರಸ್ತೆಯನ್ನು ಅಗೆದು ಹಾಕಿದ್ದಾರೆ. ನಮ್ಮ ಮಳಿಗೆಯ ಮುಂಭಾಗದಲ್ಲಿ ಬೃಹತ್‌ ಗಾತ್ರದ ಕೊಳವೆಗಳನ್ನು ಜೋಡಿಸಿ ಇಡಲಾಗಿದ್ದು ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. 

–ಅನಂತ್‌ ಮದ್ಯದ ಮಳಿಗೆಯ ವ್ಯಾಪಾರಿ

ರೆಸಿಡೆನ್ಸಿ ರಸ್ತೆ ಚೆನ್ನಾಗಿಯೇ ಇತ್ತು. ಸರಿ ಇಲ್ಲದ ರಸ್ತೆಗಳನ್ನು ಅಭಿವೃದ್ಧಿ ಮಾಡುವ ಬದಲು ಸರಿ ಇರುವ ರಸ್ತೆಯನ್ನು ಕಿತ್ತುಹಾಕಲಾಗಿದೆ. ಮಳೆ ಬಂದರೆ ರಸ್ತೆ ಯಾವುದು ಮತ್ತು ಅಗೆದಿರುವ ಮಾರ್ಗ ಯಾವುದು ಎಂಬುದು ಗೊತ್ತಾಗುವುದಿಲ್ಲ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಸ್ಥಳೀಯ ಶಾಸಕರಾದ ಎನ್‌.ಎ. ಹ್ಯಾರಿಸ್‌ ಅವರು ಕಾಮಗಾರಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. 

–ಮಹಮ್ಮದ್ ಹುಸೇನ್ ವ್ಯಾಪಾರಿ 

ರೆಸಿಡೆನ್ಸಿ ರಸ್ತೆಯಲ್ಲಿರುವ ಜಿ3 ಬಸ್‌ ತಂಗುದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸಂಪೂರ್ಣವಾಗಿ ಅಗೆದು ಹಾಕಲಾಗಿದೆ. ಇದರಿಂದ ಬಿಎಂಟಿಸಿ ಬಸ್‌ಗಳು ಒಂದು ಕಿ.ಮೀ ದೂರಕ್ಕೆ ಹೋಗಿ ನಿಲ್ಲುತ್ತಿವೆ. ಅಲ್ಲಿಂದ ನಮ್ಮ ಕಚೇರಿಗೆ ತೆರಳಬೇಕಾದರೆ ತಡವಾಗುತ್ತಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು.

–ಶಶಾಂಕ್‌ ಖಾಸಗಿ ಕಂಪನಿಯ ಉದ್ಯೋಗಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.