ADVERTISEMENT

ಬೆಂಗಳೂರು: ರಸೆಲ್‌ ಮಾರುಕಟ್ಟೆಗೆ ಬೇಕಿದೆ ಕಾಯಕಲ್ಪ

ಮೂಲಸೌಕರ್ಯ ಕೊರತೆ l200ಕ್ಕೂ ಹೆಚ್ಚು ಅಂಗಡಿಗಳು ಬಂದ್

ಖಲೀಲಅಹ್ಮದ ಶೇಖ
Published 30 ಡಿಸೆಂಬರ್ 2022, 0:15 IST
Last Updated 30 ಡಿಸೆಂಬರ್ 2022, 0:15 IST
ರಸೆಲ್ ಮಾರುಕಟ್ಟೆಯ ಚಾವಣಿಗೆ ಹಾಕಿದ್ದ ತಗಡಿನ ಶೀಟ್‌ ಇಲ್ಲದಿರುವುದು.      ಪ್ರಜಾವಾಣಿ ಚಿತ್ರ/ರಂಜು ಪಿ.
ರಸೆಲ್ ಮಾರುಕಟ್ಟೆಯ ಚಾವಣಿಗೆ ಹಾಕಿದ್ದ ತಗಡಿನ ಶೀಟ್‌ ಇಲ್ಲದಿರುವುದು.      ಪ್ರಜಾವಾಣಿ ಚಿತ್ರ/ರಂಜು ಪಿ.   

ಬೆಂಗಳೂರು: ನಗರದ ಪ್ರಮುಖ ಮತ್ತು ಪುರಾತನ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿರುವ ಶಿವಾಜಿನಗರದ ರಸೆಲ್ ಮಾರುಕಟ್ಟೆ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದು, 200ಕ್ಕೂ ಹೆಚ್ಚು ಅಂಗಡಿಗಳು ಬಂದಾಗಿವೆ.

ಅತ್ಯಂತ ಜನನಿಬಿಡ ಪ್ರದೇಶ ಆಗಿರುವ ಶಿವಾಜಿನಗರದಲ್ಲಿ ರಸೆಲ್ ಮಾರುಕಟ್ಟೆ ತನ್ನದೇ ಆದ ವಿಶೇಷ ಆಕರ್ಷಣೆಯನ್ನು ಇಂದಿಗೂ ಉಳಿಸಿಕೊಂಡಿದೆ. ಹೂವು, ಹಣ್ಣು, ತರಕಾರಿ, ಮಾಂಸ ಮತ್ತು ಮೀನಿನ ಅಂಗಡಿಗಳನ್ನು ಒಳಗೊಂಡಿದೆ. ಪ್ರವೇಶದ್ವಾರದ ಬಳಿ ಹೂವಿನ ಅಂಗಡಿಗಳಿದ್ದರೆ, ಕೊನೆಯಲ್ಲಿ ಮೀನಿನ ಅಂಗಡಿಗಳಿವೆ. ಒಟ್ಟಾರೆ 475 ಅಂಗಡಿಗಳು ಮಾರುಕಟ್ಟೆಯೊಳಗೆ ವ್ಯಾಪಾರ–ವಹಿವಾಟು ನಡೆಸುತ್ತಿವೆ.

‘1857ರಲ್ಲಿ ನಿರ್ಮಾಣವಾದ ಶಿವಾಜಿನಗರ ಮಾರುಕಟ್ಟೆ 1927ರಲ್ಲಿ ವಿಸ್ತರಣೆಗೊಂಡಿತು. ಮೊದಲಿಗೆ ಅರ್ಧ ದಷ್ಟು ಮಾತ್ರ ಇದ್ದ ಮಾರುಕಟ್ಟೆ ಕಟ್ಟಡ 1927ರಲ್ಲಿ ಮುಂಭಾಗದ ಕಟ್ಟಡ ನಿರ್ಮಾಣವಾಯಿತು. ಮೂಲಸೌಕರ್ಯ ಕಲ್ಪಿಸುವ ಕಾಮ ಗಾರಿ ಕಾಲಕಾಲಕ್ಕೆ ನಡೆದಿದ್ದರೂ, 10 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ’ ಎಂದು ರಸೆಲ್ ಮಾರ್ಕೆಟ್ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇದ್ರೀಸ್ ಚೌಧರಿ ಬೇಸರ ವ್ಯಕ್ತಪಡಿಸಿದರು.

ADVERTISEMENT

‘1984ರ ನಂತರ ಇದುವರೆಗೂ ಬಿಬಿಎಂಪಿ ರಸೆಲ್ ಮಾರುಕಟ್ಟೆಯನ್ನು ಕಡೆಗಣನೆ ಮಾಡುತ್ತಿದೆ. ಸದ್ಯ ಮಾರುಕಟ್ಟೆಯ ಚಾವಣಿ ಶಿಥಿಲಗೊಂಡಿದ್ದು, ಕೆಲವು ಕಡೆ ತಗಡಿನ ಶೀಟ್‌ಗಳಿಲ್ಲದ ಕಾರಣ ಮಳೆ ಬಂದರೆ ಸೋರುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಬ್ಬು ನಾರುವ ಕೊಳಚೆ ನೀರು, ಕೊಳೆತ ತರಕಾರಿ, ಹಣ್ಣುಗಳ ತ್ಯಾಜ್ಯ, ಎಲ್ಲೆಂದರಲ್ಲಿ ಬಿದ್ದಿರುವ ಕಸದಿಂದಾಗಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ಮಾರುಕಟ್ಟೆಗೆ ಪ್ರವೇಶ ಕಲ್ಪಿಸುವ ಗೇಟ್‌ಗಳು ಮುರಿದ ಬಿದ್ದಿವೆ. ಇದರಿಂದ ಕಳ್ಳರ ಉಪಟಳ ಹೆಚ್ಚಾಗಿದೆ’ ಎಂದು ತಿಳಿಸಿದರು.

‘ಮೂಲ ಸೌಕರ್ಯ ಮತ್ತು ಸುರಕ್ಷತೆ ಕೊರತೆಯಿಂದ ಇಲ್ಲಿನ 200ಕ್ಕೂ ಹೆಚ್ಚು ಅಂಗಡಿಗಳು ಬಂದಾಗಿದ್ದು, ಇಲ್ಲಿನ ವ್ಯಾಪಾರಿಗಳು ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಮಾರುಕಟ್ಟೆಯ ಒಳಾಂಗಣಕ್ಕೆ ಬಣ್ಣ ಹಚ್ಚುವುದರ ಜೊತೆಗೆ ಸಮರ್ಪಕ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ಪಾರ್ಕಿಂಗ್‌ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಯಲ್ಲಿರುವ ಗಡಿಯಾರ ಗೋಪರವನ್ನು ದುರಸ್ತಿಗೊಳಿಸಬೇಕು’ ಎಂದು ಬೇಡಿಕೆ ಮುಂದಿಟ್ಟರು.

‘ಮಾರುಕಟ್ಟೆ ಬಂದ್‌ ಮಾಡುವ ಎಚ್ಚರಿಕೆ’

‘ಸರ್ಕಾರ ಮತ್ತು ಬಿಬಿಎಂಪಿ ಕೂಡಲೇ ಐತಿಹಾಸಿಕ ರಸೆಲ್ ಮಾರುಕಟ್ಟೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ ರಸ್ತೆಯ ಮೇಲೆ ವ್ಯಾಪಾರ ಮಾಡಲಾಗುವುದು’ ಎಂದು ಮಹಮ್ಮದ್ ಇದ್ರೀಸ್ ಚೌಧರಿ ಎಚ್ಚರಿಕೆ ನೀಡಿದರು.

‘ಜನಪ್ರತಿನಿಧಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳು ಆಗಾಗ ಇಲ್ಲಿಯ ವರ್ತಕರೊಂದಿಗೆ ಸಭೆ ನಡೆಸುವುದು ಮಾಮೂಲು. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ' ಎಂದು ತಿಳಿಸಿದರು.

ಮಾರುಕಟ್ಟೆಗೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಭರವಸೆ ನೀಡಿ ಮರೆಯುತ್ತಾರೆ. ಈ ಮಾರುಕಟ್ಟೆಯನ್ನು ಅನಾಥವಾಗಿ ಬಿಟ್ಟಿರುವುದು ಖಂಡನೀಯ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.