
ಬೆಂಗಳೂರು: ‘ಜಿಬಿಎ ವತಿಯಿಂದ 8-10 ಪೌರ ಕಾರ್ಮಿಕರ ತಂಡ ಮಾಡಲಾಗುತ್ತದೆ. ಈ ತಂಡವು ನಗರ ಪ್ರದಕ್ಷಿಣೆ ಮಾಡಿ ಎಲ್ಲೆಲ್ಲಿ ಕಸ ಇದೆ ಎಂಬುದನ್ನು ಗುರುತಿಸಿ, ಅದನ್ನು ವಿಲೇವಾರಿ ಮಾಡಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಮಾಗಡಿ ಮುಖ್ಯ ರಸ್ತೆಯ ಕನ್ನಹಳ್ಳಿಯಲ್ಲಿ ಹಸಿರು ದಳದ ಸಮಗ್ರ ಘನ ತ್ಯಾಜ್ಯ ವಿಂಗಡಣಾ ಘಟಕದ 1ನೇ ಹಂತಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
‘ಕಸದ ಲಾರಿಗಳು ನಿಗದಿತ ಸ್ಥಳಕ್ಕೆ ತಲುಪಲು ದೂರ ಹೋಗಬೇಕಾಗುತ್ತದೆ ಎಂದು ಎಲ್ಲೆಂದರಲ್ಲಿ ಕಸ ಸುರಿಯುತ್ತಾರೆ. ರಸ್ತೆ ಬದಿ ಕಸ ಎಸೆಯುವವರ ಮೇಲೆ ನಿಗಾ ವಹಿಸಲು ಕ್ಯಾಮೆರಾ ಅಳವಡಿಸಿ ದಂಡ ಹಾಕುತ್ತಿದ್ದೇವೆ. ಕಸ ಎಸೆಯುವ ವಾಹನಗಳಿಗೆ ದಂಡ ಹಾಕಲಾಗುತ್ತಿದೆ. ಬೆಂಗಳೂರು ನಗರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಜನರ ಸಹಕಾರವೂ ಅಗತ್ಯ. ಜನರು ಎಲ್ಲೆಂದರಲ್ಲಿ ಕಸ ಎಸೆಯಬಾರದು’ ಎಂದು ಮನವಿ ಮಾಡಿದರು.
‘ಕಸದ ಮಾಫಿಯಾದವರು ನನ್ನ ಮೇಲೆ ಏನೇ ಗೂಬೆ ಕೂರಿಸಿದರೂ ಅದಕ್ಕೆ ಬಗ್ಗುವುದಿಲ್ಲ, ಹೆದರುವುದಿಲ್ಲ. ನ್ಯಾಯಾಲಯ ಸಮ್ಮತಿ ನೀಡಿರುವ 33 ಪ್ಯಾಕೇಜ್ ಟೆಂಡರ್ ಪ್ರಕ್ರಿಯೆ ಮೂಲಕ ಕಸ ವಿಲೇವಾರಿಗೆ ತೀರ್ಮಾನಿಸಲಾಗಿದೆ. ಕಸದಿಂದ ರಸ ತೆಗೆಯಲು ಹೊರಟಿದ್ದೇನೆ’ ಎಂದರು.
‘ಕಸದಿಂದ ಅನಿಲ ತಯಾರಿಕೆಗೆ ನಾಲ್ಕು ಸ್ಥಳಗಳಲ್ಲಿ ಘಟಕ ಸ್ಥಾಪಿಸಲು ಉದ್ಧೇಶಿಸಲಾಗಿತ್ತು. ಜಾಗದ ಸಮಸ್ಯೆಯಿಂದ ಈಗ ಎರಡು ಸ್ಥಳಗಳಲ್ಲಿ ಅವಕಾಶ ನೀಡಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಈ ಹಿಂದೆ 10-12ಕ್ಕೂ ಹೆಚ್ಚು ಸಂಸ್ಥೆಗಳು ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವುದಾಗಿ ಬಂದು ವಿಫಲರಾಗಿದ್ದಾರೆ. 24 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ತಂತ್ರಜ್ಞಾನದಿಂದ ಯಶಸ್ವಿಯಾಗಬಹುದು. ಜೊತೆಗೆ ದೆಹಲಿ, ಚೆನ್ನೈ, ಹೈದರಾಬಾದ್ ನಗರಗಳಲ್ಲಿ ಇದನ್ನು ನಾನು ನೋಡಿದ್ದೇನೆ’ ಎಂದು ಹೇಳಿದರು.
‘ಕಸದಿಂದ ಅನಿಲ ಉತ್ಪಾದನೆಯಲ್ಲಿ ತೊಡಗಿರುವ ಅಭಿಷೇಕ್ ಅವರ ಸಂಸ್ಥೆ ಪ್ರಾಥಮಿಕವಾಗಿ ₹100 ಕೋಟಿ ಬಂಡವಾಳ ಹೂಡಲಿದೆ. ಒಟ್ಟು ₹300 ಕೋಟಿ ಹೂಡಿಕೆ ಮಾಡಲಿದ್ದಾರೆ. ಈ ಪ್ರಯೋಗ ಯಶಸ್ವಿಯಾದರೆ ರಾಜ್ಯದಲ್ಲಿ ಇನ್ನೂ ಒಂದಷ್ಟು ಕಡೆ ಘಟಕ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಇದು ಸ್ವಲ್ಪ ಸ್ಪರ್ಧಾತ್ಮಕ ಕೆಲಸ. ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.