ರಾಜರಾಜೇಶ್ವರಿನಗರ: ದೊಡ್ಡಬಿದರಕಲ್ಲು ವಾರ್ಡ್ ವ್ಯಾಪ್ತಿಯ ತಿಗಳರಪಾಳ್ಯ, ವಿದ್ಯಮಾನ್ಯ ನಗರ, ಚನ್ನನಾಯಕನಪಾಳ್ಯ, ಅಂಧ್ರಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.5 ದಿನಗಳಿಗೊಮ್ಮೆ ಮಾತ್ರ ನೀರು ಸರಬರಾಜು ಆಗುತ್ತಿದೆ.
ಪ್ರದೇಶದಲ್ಲಿ 150ಕ್ಕೂ ಹೆಚ್ಚು ಕೊಳವೆಬಾವಿಗಳಿದ್ದು. ಅದರಲ್ಲಿ 36 ಬತ್ತಿಹೋಗಿವೆ. ಕೆಲವು ಕೊಳವೆಬಾವಿಗಳಲ್ಲಿ 1 ಇಂಚು ನೀರು ಬರುತ್ತಿದೆ. ನೀರಿನ ಪ್ರತಿ ಟ್ಯಾಂಕರ್ ದರ ₹ 1,000 ದಾಟಿದೆ.
‘1,200 ಅಡಿ ಕೊಳವೆಬಾವಿ ಕೊರೆದರೆ ನೀರು ಸಿಗುತ್ತದೆ. ಒಂದು ವರ್ಷ ಕಳೆಯುವುದರೊಳಗೆ ಆ ನೀರು ಬತ್ತಿಹೋಗುತ್ತದೆ’ ಎಂದು ನಿವಾಸಿಗಳು ತಿಳಿಸಿದರು.
‘ಕಾವೇರಿ ನೀರು ಸರಬರಾಜಿನ ಕೊಳವೆ ಜೋಡಣಾ ಕಾರ್ಯ ಮುಗಿದಿದೆ. ಆದಷ್ಟು ಬೇಗ ಈ ಭಾಗಕ್ಕೆ ನೀರು ಹರಿಸಬೇಕು’ ಎಂದು ಶಿವಕುಮಾರಸ್ವಾಮಿ ಬಡಾವಣೆಯ ಜಯಣ್ಣ ಮನವಿ ಮಾಡಿದರು.
‘ಕಾವೇರಿನ ನೀರಿನ ಸಂಪರ್ಕ ಪಡೆಯಲು ದುಬಾರಿ ಶುಲ್ಕ ವಿಧಿಸಿದ್ದಾರೆ. ಅದನ್ನು ಜಲಮಂಡಳಿ ತಗ್ಗಿಸಬೇಕು’ ಎಂದು ಅಂಧ್ರಹಳ್ಳಿಯ ಕೃಷ್ಣೇಗೌಡ ಕೋರಿಕೊಂಡರು.
‘ಹೊಸ ಬಡಾವಣೆಗಳ ನಿರ್ಮಾಣದಿಂದಾಗಿ ಕೆರೆಗಳು ಕಣ್ಮರೆಯಾಗಿವೆ. ಆದ್ದರಿಂದ ನೀರಿನ ಸಮಸ್ಯೆ ಹೆಚ್ಚುತ್ತಿದೆ’ ಎಂದು ಸ್ಥಳೀಯರಾದ ಲಕ್ಷ್ಮೀಗೌಡ ತಿಳಿಸಿದರು.
‘ಕೊಳವೆಗಳ ಜೋಡಣಾ ಕಾಮಗಾರಿ ಶೇ 90ರಷ್ಟು ಮುಗಿದಿದೆ. ಆದಷ್ಟು ಬೇಗ ಕಾವೇರಿ ನೀರು ಹರಿದು, ಸಮಸ್ಯೆ ಬಗೆಹರಿಯಲಿದೆ’ ಎಂದು ಪಾಲಿಕೆ ಸದಸ್ಯ ಎಸ್.ವಾಸುದೇವ್ ಪ್ರತಿಕ್ರಿಯಿಸಿದರು.
–ಚಿಕ್ಕರಾಮು
*
ಟ್ಯಾಂಕರ್‌ಗಳ ಮೊರೆಹೋದ ಪಣತ್ತೂರು ಗ್ರಾಮಸ್ಥರು
ವರ್ತೂರು ವಾರ್ಡ್ ಪಣತ್ತೂರು ಗ್ರಾಮದ ಜನರಿಗೆ ರಸ್ತೆಯಲ್ಲಿ ಸಂಚರಿಸುವ ಟ್ಯಾಂಕರ್‌ಗಳೇ ನೀರಿನ ಮೂಲವಾಗಿವೆ.
ಈ ಪ್ರದೇಶದಲ್ಲಿ ವಾರಕ್ಕೆ ಮೂರು ಬಾರಿ ನೀಡು ಬಿಡುತ್ತಾರೆ. ಈ ನೀರು ಸಾಲದೆ ಜನ ಟ್ಯಾಂಕರ್ ನೀರಿಗೂ ಮೊರೆ ಹೋಗುತ್ತಿದ್ದಾರೆ. ಪ್ರತಿ ಟ್ಯಾಂಕರ್ ದರವೂ ₹ 800 ದಾಟಿದೆ.
ವರ್ತೂರು-ಪಣತ್ತೂರು ಮಾರ್ಗ ಮಧ್ಯ ರೈಲ್ವೆ ಅಂಡರ್‌ಪಾಸ್ ಇರುವುದರಿಂದ ಈ ಮಾರ್ಗದಲ್ಲಿ ಏಕಮುಖ ಸಂಚಾರವಿದೆ. ನೀರಿನ ಟ್ಯಾಂಕರ್‌ಗಳು ನಿಧಾನಗತಿಯಲ್ಲಿ ಸಂಚರಿಸುವಾಗ ಜನರು ಬಿಂದಿಗೆ, ಬಕೆಟ್‌ಗಳಲ್ಲಿ ನೀರು ತುಂಬಿಸಿಕೊಂಡು, ಶೇಖರಿಸುತ್ತಾರೆ.
ಈ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯಗಳು ಹೆಚ್ಚು ನಿರ್ಮಾಣಗೊಂಡಿವೆ. ಇಲ್ಲಿನ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗದೆ, ಟ್ಯಾಂಕರ್ ಹಾಗೂ ಸಾರ್ವಜನಿಕ ನಲ್ಲಿಗಳ ನೀರನ್ನೆ ಎಲ್ಲರೂ ಅವಲಂಬಿಸಿದ್ದಾರೆ.
–ಲತಾ ಎನ್.
*
ಕೆ.ಆರ್.ಪುರ: ನೀರಿಗಾಗಿ ಜಾಗರಣೆ
ಈ ವಿಧಾನಸಭಾ ಕ್ಷೇತ್ರದ ಹಲವು ವಾರ್ಡ್‌ಗಳಲ್ಲಿ ಟ್ಯಾಂಕರ್ ನೀರೇ ಗತಿ. ಪ್ರತಿ ಟ್ಯಾಂಕರ್ ನೀರಿನ ದರ ₹ 500ರಿಂದ ₹ 600 ಇದೆ.
ಬಿಬಿಎಂಪಿಗೆ ಹೊಸತಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಪ್ರಕಾರ ಈ ಕ್ಷೇತ್ರದ 11 ಹಳ್ಳಿಗಳಿಗೂ ಸವಲತ್ತು ಸಿಗಬೇಕಿತ್ತು. ಆದರೆ, ಈ ಯೋಜನೆ ಜನರ ಪಾಲಿಗೆ ಗಗನ ಕುಸುಮವಾಗಿದೆ.
ಅಲ್ಲಲ್ಲಿ ರಸ್ತೆ ಅಗೆದಿದ್ದು ಬಿಟ್ಟರೆ ಕೊಳವೆ ಅಳವಡಿಸುವ ಕಾರ್ಯ ಇನ್ನೂ ಮುಗಿದಿಲ್ಲ. ರಾಮಮೂರ್ತಿನಗರ ವಾರ್ಡ್‌ನ ಕಲ್ಕೆರೆ, ಕನಕನಗರ, ಚನ್ನಸಂದ್ರ, ಅಕ್ಷಯನಗರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಜಯಂತಿನಗರದಲ್ಲಿ ವಾರಕ್ಕೆ ಒಂದು ಬಾರಿ ಮಾತ್ರ ಕುಡಿಯುವ ನೀರು ಬರುತ್ತಿದೆ. ನೀರಿಗಾಗಿ ಕಾದು ರಾತ್ರಿ ವೇಳೆ ಜಾಗರಣೆ ಮಾಡುವಂತಾಗಿದೆ.
ಕೆಲವು ರಾಜಕೀಯ ಮುಖಂಡರು ತಮ್ಮ ಚಾರಿಟಬಲ್ ಟ್ರಸ್ಟ್‌ಗಳ ಮೂಲಕ ಉಚಿತವಾಗಿ ಕುಡಿಯುವ ನೀರು ಪೂರೈಸುತ್ತಿದ್ದಾರೆ.
‘ಜಲ ಮಂಡಳಿಯಿಂದ ಮೂರು ದಿನಗಳಿಗೊಮ್ಮೆ ರಾತ್ರಿವೇಳೆ ನೀರು ಬಿಡುತ್ತಾರೆ. ನೀರಿಗಾಗಿ ರಾತ್ರಿಯೆಲ್ಲಾ ಕಾಯುವ ಪರಿಸ್ಥಿತಿ ಇದೆ’ ಎಂದು ಕಲ್ಕೆರೆ ಗ್ರಾಮದ ನಿವಾಸಿ ರೇಖಾ ಹೇಳಿದರು.
‘ಖಾಸಗಿಯವರು ನಿರ್ಮಿಸಿರುವ ನೀರಿನ ಘಟಕಗಳಲ್ಲಿ ₹ 10 ಕೊಟ್ಟು ಒಂದು ಕ್ಯಾನ್ ನೀರು ಕೊಂಡು ತರುತ್ತೇವೆ’ ಎಂದು ಕನಕನಗರದ ನಿವಾಸಿ ಮಂಜುಳಾ ತಿಳಿಸಿದರು.
ಈ ಕುರಿತು ಪಾಲಿಕೆಯ ಸ್ಥಳೀಯ ಸದಸ್ಯೆ ಪದ್ಮಾವತಿ ಶ್ರೀನಿವಾಸ್ ಅವರನ್ನು ಕೇಳಿದಾಗ, ‘ಹೊಸ ಕೊಳವೆಬಾವಿಗಳನ್ನು ಕೊರೆಸುವ ಪ್ರಸ್ತಾವವನ್ನು ಪಾಲಿಕೆಯ ಗಮನಕ್ಕೆ ತಂದಿದ್ದೇನೆ’ ಎಂದು ಉತ್ತರಿಸಿದರು.
–ಶಿವರಾಜ್ ಮೌರ್ಯ
***
ಜಲಮಂಡಳಿ ಫೋನ್ ಇನ್ ನಾಳೆ
ಜಲಮಂಡಳಿಯು ಪ್ರತಿ ಶನಿವಾರದಂತೆ ಈ ಬಾರಿಯೂ(ಮಾರ್ಚ್ 16) ಬೆಳಿಗ್ಗೆ 9ರಿಂದ 10.30ರ ವರೆಗೆ ಫೋನ್–ಇನ್ ಕಾರ್ಯಕ್ರಮ ಆಯೋಜಿಸಿದೆ.
ಸಾರ್ವಜನಿಕರು ತಮ್ಮ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ, ಮ್ಯಾನ್‌ಹೋಲ್ ದುರಸ್ಥಿ, ಮೀಟರ್ ರೀಡಿಂಗ್, ಬಿಲ್ಲಿಂಗ್‌ನ ಕುರಿತ ಕುಂದುಕೊರತೆಗಳನ್ನು ಮಂಡಳಿ ಗಮನಕ್ಕೆ ತರಬಹುದಾಗಿದೆ. ಸಮಸ್ಯೆಗಳನ್ನು ಮಂಡಳಿಯ ಅಧ್ಯಕ್ಷರು ಆಲಿಸಿ, ಪರಿಹಾರಕ್ಕೆ ಕ್ರಮವಹಿಸಲಿದ್ದಾರೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಪರ್ಕ: 080 22945119
***
ಎಲ್ಲೆಲ್ಲಿದೆ ನೀರಿನ ಸಮಸ್ಯೆ?
ಬನ್ನಪ್ಪ ಉದ್ಯಾನ
ಜಲಮಂಡಳಿಯ ಕೇಂದ್ರ ಕಚೇರಿಯಿಂದ ಕೂಗಳತೆ ದೂರದಲ್ಲಿ ಇರುವ ಬನ್ನಪ್ಪ ಉದ್ಯಾನ ಬದಿಯ ಪ್ರದೇಶಗಳಲ್ಲಿನ ವಾಲ್ವ್‌ಮ್ಯಾನ್‌ಗಳು ದುಡ್ಡು ಕೊಟ್ಟರೇನೆ ನೀರು ಬಿಡುತ್ತಾರೆ.
–ಶಿವಣ್ಣ
*
ಭುವನೇಶ್ವರಿನಗರ
ವಿಷ್ಣುವರ್ಧನ್ ವೃತ್ತ ಸಮೀಪದ ಭುವನೇಶ್ವರಿನಗರದ 10ನೇ ಮುಖ್ಯರಸ್ತೆಯ ಮನೆಗಳಿಗೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ನೀರು ಸರಬರಾಜು ಮಾಡುವವರು ಟ್ಯಾಂಕರ್ ನೀರು ಮಾರಾಟಗಾರರೊಂದಿಗೆ ಶಾಮೀಲಾಗಿದ್ದಾರೆ ಎಂಬ ಅನುಮಾನ ಬರುತ್ತಿದೆ.
–ಮಂಜುಳಾ
*
ಶೆಟ್ಟಿಹಳ್ಳಿ
ಜನತಾ ಕಾಲೊನಿಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಮೂರು ದಿನಗಳಿಗೆ ಒಮ್ಮೆ ಮೋಟಾರು ಕೆಟ್ಟಿದೆ ಅಂತಾರೆ. ಎರಡು ವಾರಕ್ಕೆ ಒಮ್ಮೆ ನೀರು ಬಿಡುತ್ತಾರೆ. ಈ ಮೊದಲು ಇಲ್ಲದ ಸಮಸ್ಯೆ, ಇತ್ತೀಚೆಗೆ ಹೆಚ್ಚಿದೆ. ಜನರು ನೀರಿಗಾಗಿ ಅಲೆಯುತ್ತಿದ್ದಾರೆ.
–ಎನ್.ಅಶ್ವಿನಿ ರಾಮಕೃಷ್ಣಯ್ಯ
*
ತುಂಗಾನಗರ
ಹೇರೋಹಳ್ಳಿ ನ್ಯೂ ಎಕ್ಸ್‌ಟೆನ್ಷನ್(ವಾರ್ಡ್ 72), ತುಂಗಾನಗರದಲ್ಲಿ ಕೊಳವೆಬಾವಿ ಕೆಟ್ಟುಹೋಗಿದೆ ಎಂದು ನೀರು ಪೂರೈಕೆ ಮಾಡುತ್ತಿಲ್ಲ. ಟ್ಯಾಂಕರ್ ನೀರಿನ ದರ ಪ್ರತಿದಿನವೂ ಹೆಚ್ಚುತ್ತಿದೆ. ನೀರಿನ ಮಾಫಿಯಾ ಶುರುವಾಗಿದೆ ಎಂದು ಅನುಮಾನ ಬರುತ್ತಿದೆ.
ಗೋಪಾಲಯ್ಯ
*
ಶ್ರೀನಗರ
ರಾಘವೇಂದ್ರ ಬ್ಲಾಕ್‌ನಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ₹ 1,000 ಖರ್ಚು ಮಾಡಿ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದೇವೆ.
–ಎಂ.ರೇಣುಕಾ ರಂಗನಾಥ್
*
ಹುಳಿಮಾವು
ಮುತ್ತುರಾಯಸ್ವಾಮಿ ಬಡಾವಣೆಯಲ್ಲಿ ಮೂರು ವಾರದಿಂದ ಕಾವೇರಿ ನೀರು ಬರುತ್ತಿಲ್ಲ. ಇಲ್ಲಿ ಟ್ಯಾಂಕರ್ ನೀರಿಗೂ ಅಭಾವವಿದೆ. ನೀರಿಗಾಗಿ ಪರಿತಪಿಸುವಂತಾಗಿದೆ.
–ವೆಂಕಟೇಶ್ ಹೊಸಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.