ADVERTISEMENT

ಸಾರ್ವಜನಿಕರನ್ನೇ ಪ್ರಶ್ನಿಸಿ ಕ್ಷಮೆ ಕೇಳಿದ ಪೊಲೀಸರು

ವಾಹನಗಳ ವಿರುದ್ಧ ಪ್ರಕರಣ ದಾಖಲಿಸುವ ವಿಚಾರವಾಗಿ ಟ್ವೀಟ್ ವಾರ್‌

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 19:45 IST
Last Updated 10 ಡಿಸೆಂಬರ್ 2018, 19:45 IST
ಕೆ.ಆರ್‌.ಪುರ ಸಂಚಾರ ಪೊಲೀಸರು ಮಾಡಿದ್ದ ಟ್ವೀಟ್‌ 
ಕೆ.ಆರ್‌.ಪುರ ಸಂಚಾರ ಪೊಲೀಸರು ಮಾಡಿದ್ದ ಟ್ವೀಟ್‌    

ಬೆಂಗಳೂರು: ಕೆ.ಆರ್‌.ಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ವಾಹನಗಳ ವಿರುದ್ಧ ಪ್ರಕರಣ ದಾಖಲಿಸುವ ವಿಚಾರವಾಗಿ ಪೊಲೀಸರು ಹಾಗೂ ಪಬ್ಲಿಕ್ ನಡುವೆ ಟ್ವೀಟ್ ವಾರ್ ಶುರುವಾಗಿದೆ.

ವಾಹನಗಳ ವಿರುದ್ಧ ದಾಖಲಿಸಿದ್ದ ಪ್ರಕರಣಗಳ ಮಾಹಿತಿಯನ್ನು ಪೊಲೀಸರು, ‘ಕೆ.ಆರ್‌.ಪುರ ಟ್ರಾಫಿಕ್ ಬಿಟಿಪಿ’ ಟ್ವಿಟರ್‌ ಖಾತೆಯಲ್ಲಿ ಡಿ. 8ರಂದು ಪ್ರಕಟಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಶಶಿ ಎಂಬುವರು, ‘ಟ್ರಕ್‌, ಲಾರಿ, ಬಸ್‌ನವರು ನಿಯಮವನ್ನೇ ಉಲ್ಲಂಘಿಸಿವಲ್ಲವೇ’ ಎಂದು ಪ್ರಶ್ನಿಸಿದ್ದರು.‌

ಪೊಲೀಸರು, ‘ಸಾಗರದಷ್ಟು ವಾಹನಗಳಿವೆ. ಎಲ್ಲವನ್ನೂ ನೋಡಲಾಗದು’ ಎಂದು ಹಾರಿಕೆ ಉತ್ತರ ನೀಡಿದ್ದರು. ಆಗ ಶಶಿ, ‘ಪರಿಸ್ಥಿತಿ ನಿಯಂತ್ರಿಸಲು ಆಗದಿದ್ದರೆ, ರಾಜೀನಾಮೆ ಕೊಟ್ಟು ಹೋಗಿ. ತೆರಿಗೆದಾರರ ಹಣ ಹಾಳು ಮಾಡಬೇಡಿ’ ಎಂದಿದ್ದರು.

ADVERTISEMENT

ಆ ಟ್ವೀಟ್‌ಗೆ ಸೋಮವಾರ ಬೆಳಿಗ್ಗೆ ಉತ್ತರಿಸಿದ್ದ ಪೊಲೀಸರು, ‘ಮಿ. ಶಶಿ. ನನ್ನ ರಾಜೀನಾಮೆ ಕೇಳಲು ನೀನ್ಯಾವನೊ? ನಾವು ನಿನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿಲ್ಲ. ನೀನು ನಮ್ಮ ಬಾಸ್‌ ಅಲ್ಲ’ ಎಂದು ಸಿಡಿಮಿಡಿಗೊಂಡಿದ್ದರು.

ಆ ಟ್ವೀಟ್‌ನಿಂದ ಆಕ್ರೋಶಗೊಂಡು ಶಶಿ ಪರ ಮಾತನಾಡಿದ ಹಲವರು, ‘ಪೊಲೀಸರೇ, ‘ಪಬ್ಲಿಕ್’ ಬಗ್ಗೆ ನೀವು ಬಳಸಿದ ಭಾಷೆ ಸರಿಯೇ?. ಇಂಥ ಟ್ವೀಟ್‌ ಮಾಡಿದವರ ವಿರುದ್ಧ ಕೂಡಲೇ ಕ್ಷಮೆ ಕೇಳಬೇಕು’ ಎಂದು ಹಿರಿಯ ಅಧಿಕಾರಿಗಳನ್ನು ಟ್ವೀಟ್‌ ಮೂಲಕವೇ ಒತ್ತಾಯಿಸಿದ್ದರು.

ಸಂಜೆ ವೇಳೆಗೆ ಏಕಾಏಕಿ ಟ್ವೀಟ್‌ ಅಳಿಸಿ ಹಾಕಿದ ಪೊಲೀಸರು, ‘ನನ್ನ ಶಬ್ದಗಳಿಂದ ಯಾರಿಗಾದರೂ ಅವಮಾನವಾಗಿದ್ದರೆ, ನಾನು ಕೂಡ ಅದಕ್ಕೆ ಕ್ಷಮೆಯಾಚಿಸುತ್ತೇನೆ. ನಾವೆಲ್ಲರೂ ಒಂದೇ ಸಮಾಜದಲ್ಲಿದ್ದೇವೆ. ಆದರೆ, ನಮ್ಮ ಕೆಲಸಗಳು ಬೇರೆ ಬೇರೆ. ಸಂಚಾರ ಸುಧಾರಣೆ ಸಂಬಂಧ ಬರುವ ಸಲಹೆಗಳನ್ನು ಸ್ವೀಕರಿಸುತ್ತೇವೆ. ಅವುಗಳ ಜಾರಿಗೂ ಪ್ರಯತ್ನಿಸುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.