ಬೆಳಗಾವಿ: ‘ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವ ದೂರುಗಳ ಬಗ್ಗೆ ಖುದ್ದು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಬಿ.ಪಾಟೀಲ ಭರವಸೆ ನೀಡಿದರು.
ವಿಧಾನಪರಿಷತ್ತಿನಲ್ಲಿ ಬುಧವಾರ ಅರುಣ್ ಶಹಾಪುರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಸೂಕ್ಷ್ಮ ವಲಯದಲ್ಲಿ ಒಟ್ಟು 75 ಕಲ್ಲು ಗಣಿಗಳು ಇದ್ದವು. ಈ ಗಣಿಗಳ ಮಾಲೀಕರು ಪರಿಸರ ಅನುಮತಿ ಪತ್ರದ ಹಾಗೂ ಗುತ್ತಿಗೆ ಕರಾರಿನ ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಅವುಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ತಿಳಿಸಿದರು.
‘ಗಣಿಗಾರಿಕೆ ಸ್ಥಗಿತಗೊಳಿಸಲು ನೀಡಿದ ಆದೇಶವನ್ನು ಕೆಲವು ಗಣಿಗಳ ಮಾಲೀಕರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ ಆದೇಶ ನೀಡಿದ್ದರಿಂದ ಎಸ್.ಎಲ್.ವಿ. ಎಂಟರ್‌ಪ್ರೈಸಸ್ ಸಂಸ್ಥೆಗೆ ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್ ಘಟಕಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಇನ್ನು 12 ರಿಟ್ ಅರ್ಜಿಗಳು ವಿಚಾರಣಾ ಹಂತದಲ್ಲಿದ್ದು, ಹೈಕೋರ್ಟ್ ಆದೇಶದನ್ವಯ ಕ್ರಮ ಕೈಗೊಳ್ಳುತ್ತೇವೆ’ ಎಂದರು.
‘ಇಲ್ಲಿ ಅಕ್ರಮವಾಗಿ ಗಣಿ ನಡೆಯುತ್ತಿರುವ ಬಗ್ಗೆ ಪರಿಶೀಲಿಸಲು ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದರು. ಅವರ ವರದಿ ಪ್ರಕಾರ ಇಲ್ಲಿ ಎಲ್ಲೂ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆದಿಲ್ಲ. ಆದರೆ, ಕ್ರಷರ್‌ಗಳು ನಡೆದಿದ್ದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ’ ಎಂದರು.
‘ಈ ವರದಿಯನ್ನು ಒಪ್ಪಲು ಸಾಧ್ಯವಿಲ್ಲ. ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ವರದಿಗಾರಿಕೆಗೆ ತೆರಳಿದ ಮಾಧ್ಯಮದವರ ಮೇಲೂ ಹಲ್ಲೆ ನಡೆದಿದೆ. ಈಗಲೂ ಗಣಿಗಾರಿಕೆ ನಡೆಯುತ್ತಿರುವುದಕ್ಕೆ ಸಾಕ್ಷ್ಯ ಇದೆ’ ಎಂದು ಅರುಣ್ ಶಹಾಪುರ ಆಕ್ಷೇಪ ವ್ಯಕ್ತಪಡಿಸಿದರು.
‘ಲೋಕಾಯುಕ್ತರ ಸೂಚನೆ ಮೇರೆಗೆ ಅರಣ್ಯ, ಕಂದಾಯ, ಭೂದಾಖಲೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ. ಇದರ ವರದಿ ಬಂದ ಬಳಿಕ ಅಕ್ರಮ ಗಣಿಗಾರಿಕೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ... ಅಕ್ರಮ ಗಣಿಗಾರಿಕೆ ತಡೆಗೆ ಜಂಟಿ ಪ್ರಯತ್ನ
ಅಂಕಿ–ಅಂಶ
27-ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಸ್ಥಗಿತಗೊಂಡ ಕಲ್ಲು ಗಣಿಗಳು
48 -ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಸ್ಥಗಿತಗೊಂಡ ಕಲ್ಲು ಗಣಿಗಳು
*
ಬನ್ನೇರುಘಟ್ಟ ಉದ್ಯಾನದಲ್ಲಿ ಕಲ್ಲು ಗಣಿಗಾರಿಕೆ ನಡೆಯು ತ್ತಿಲ್ಲ, ಆದರೆ, ಕ್ರಷರ್ ನಡೆಯು ತ್ತಿದೆ ಎನ್ನುವುದು ಅಡುಗೆಯೇ ಮಾಡಿ ಲ್ಲ, ಊಟ ಮಾಡಿದ್ದು ಹೌದು ಎಂದಂತೆ.
–ಅರುಣ ಶಹಾಪುರ, ವಿಧಾನಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.