ADVERTISEMENT

ಹಿನ್ನೋಟ– ಮುನ್ನೋಟ ಇಲ್ಲದ ಸರ್ಕಾರ: ಬರಗೂರು ರಾಮಚಂದ್ರಪ್ಪ,

ಉಚಿತ ವೈದ್ಯಕೀಯ ಸೇವೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಮೇ 2021, 21:39 IST
Last Updated 10 ಮೇ 2021, 21:39 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

ಬೆಂಗಳೂರು: ಕೇರಳದಲ್ಲಿ ಎಡರಂಗ ಸರ್ಕಾರ ಕೈಗೊಂಡ ಕ್ರಮಗಳ ಫಲವಾಗಿ ಕೋವಿಡ್‌ನಿಂದ ಸಾವು–ನೋವುಗಳ ಸಂಖ್ಯೆ ನಿಯಂತ್ರಣದಲ್ಲಿ ಇದೆ ಎಂದು ಕೇರಳದ ಆರೋಗ್ಯ ಸಚಿವೆ ಶೈಲಜಾ ಟೀಚರ್ ಅಭಿಪ್ರಾಯಪಟ್ಟರು.

ಸಿಪಿಐ(ಎಂ) ಆಯೋಜಿಸಿರುವ ಉಚಿತ ಆನ್‌ಲೈನ್ ವೈದ್ಯಕೀಯ ಸೇವೆ, ಔಷಧ ‌ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಆನ್‌ಲೈನ್‌ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ‘ಕೋವಿಡ್‌ ಇಡೀ ಜಗತ್ತನ್ನು ಆವರಿಸಿಕೊಂಡಿದೆ. ವಿಜ್ಞಾನದಲ್ಲಿ ಮುಂದುವರಿದ ದೇಶಗಳೂ ಸೋಂಕಿನಿಂದ ಹೊರತಾಗಿಲ್ಲ. ಮೊದಲನೇ ಅಲೆಯಲ್ಲೂ ಕೇರಳದಲ್ಲಿ ಕೋವಿಡ್‌ನಿಂದ ಸಾವು ಸಂಭವಿಸುವ ಸಂಖ್ಯೆ ಶೇ 0.4 ದಾಟಲಿಲ್ಲ. ಎರಡನೇ ಅಲೆಯಲ್ಲೂ ಈ ಗಡಿ ದಾಟಲು ಬಿಡಲಿಲ್ಲ’ ಎಂದರು.

‘ಕೋವಿಡ್‌ ಎದುರಿಸಲು ಬೇಕಾದ ತಯಾರಿಯನ್ನು ಮೊದಲೇ ಮಾಡಿಕೊಂಡಿದ್ದೆವು. ಬಡವ–ಶ್ರೀಮಂತ ಎನ್ನದೆ ಎಲ್ಲರಿಗೂ ಸಮಾನವಾದ ಚಿಕಿತ್ಸೆ ದೊರಕುವಂತೆ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

ಸಿಪಿಐ(ಎಂ) ಪಾಲಿಟ್ ಬ್ಯೂರೊ ಸದಸ್ಯ ಎಂ.ಎ.ಬೇಬಿ ಮಾತನಾಡಿ, ‘ಕೋವಿಡ್ ವಿಷಯದಲ್ಲಿ ಅತ್ಯಂತ ಬೇಜವಾಬ್ದಾರಿಯಿಂದ ಕೇಂದ್ರ ಸರ್ಕಾರ ವರ್ತಿಸಿದೆ. ಹೆಚ್ಚುತ್ತಿರುವ ಸಾವು–ನೋವುಗಳಿಗೆ ಸರ್ಕಾರದ ನೀತಿಗಳೇ ಕಾರಣ. ಎರಡನೇ ಅಲೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ’ ಎಂದರು.

ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಸಾಮೂಹಿಕ ಸಾವುಗಳು ಸಂಭವಿಸುತ್ತಿರುವ ಸಂದರ್ಭದಲ್ಲಿ ಮಾತನಾಡುವುದಕ್ಕಿಂತ ಮೌನ ವಹಿಸುವುದು ಸೂಕ್ತ ಎನ್ನಿಸುತ್ತಿದೆ. ಆಡಳಿತಗಾರರ ಅಲಕ್ಷತೆಯನ್ನು ಇದು ತೋರಿಸುತ್ತಿದೆ. ಅಧಿಕಾರದ ಅಹಂಕಾರ, ಅಂತಕರಣ ಇಲ್ಲದ ಆಡಳಿತ ಇದಕ್ಕೆ ಕಾರಣವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರಕ್ಕೆ ಹಿನ್ನೋಟ ಮತ್ತು ಮುನ್ನೋಟ ಎರಡೂ ಇಲ್ಲ ಎಂಬುದಕ್ಕೆ ಈ ಎರಡನೇ ಅಲೆಯ ಸಾವು– ನೋವುಗಳು ಸಾಕ್ಷಿ. ಸರ್ಕಾರದ ನಿರ್ಲಕ್ಷತೆಯಿಂದಾಗಿ ಅಮಾಯಕ ಮತ್ತು ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ’ ಎಂದು ಹೇಳಿದರು.

ಸಿಪಿಐ(ಎಂ) ಮುಖಂಡರಾದ ಡಾ.ಕೆ.ಪ್ರಕಾಶ್, ಯು.ಬಸವರಾಜ್. ಕೆ.ಎನ್.ಉಮೇಶ್, ಪ್ರತಾಪ್ ಸಿಂಹ, ಗೌರಮ್ಮ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.