ADVERTISEMENT

ಎಡಪಕ್ಷಗಳು ಶ್ರೇಷ್ಠತೆಯ ಸೊಕ್ಕು ಬಿಡಬೇಕು: ಬರಗೂರು

ಬರಗೂರು ರಾಮಚಂದ್ರಪ್ಪ ಸಲಹೆ; ‘ಬಂಡವಾಳ’ ಸಂಪುಟ–1 ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 20:07 IST
Last Updated 2 ಆಗಸ್ಟ್ 2019, 20:07 IST
ಬಂಡವಾಳ’ ಸಂಪುಟ-1 ಕನ್ನಡ ಅನುವಾದ ಕೃತಿಯನ್ನು ಬರಗೂರು ರಾಮಚಂದ್ರಪ್ಪ ಬಿಡುಗಡೆ ಮಾಡಿದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮೀನಾಕ್ಷಿ ಸುಂದರಂ,ಡಾ. ಸಿದ್ದನಗೌಡ ಪಾಟೀಲ, ಚಿಂತಕಿ ಕೆ.ನೀಲಾಇದ್ದರು –ಪ್ರಜಾವಾಣಿ ಚಿತ್ರ
ಬಂಡವಾಳ’ ಸಂಪುಟ-1 ಕನ್ನಡ ಅನುವಾದ ಕೃತಿಯನ್ನು ಬರಗೂರು ರಾಮಚಂದ್ರಪ್ಪ ಬಿಡುಗಡೆ ಮಾಡಿದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮೀನಾಕ್ಷಿ ಸುಂದರಂ,ಡಾ. ಸಿದ್ದನಗೌಡ ಪಾಟೀಲ, ಚಿಂತಕಿ ಕೆ.ನೀಲಾಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸೈದ್ಧಾಂತಿಕ ಶ್ರೇಷ್ಠತೆಯ ಸೊಕ್ಕಿನಿಂದ ಎಡಪಕ್ಷಗಳು ಹೊರ ಬರಬೇಕಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.

ಕಾರ್ಲ್‌ಮಾರ್ಕ್ಸ್‌200ನೇ ವರ್ಷಾಚರಣೆ ಅಂಗವಾಗಿನವ ಕರ್ನಾಟಕ ಹಾಗೂ ಕ್ರಿಯಾ ಪ್ರಕಾಶನ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಬಂಡವಾಳ’ ಸಂಪುಟ-1 ಕನ್ನಡ ಅನುವಾದ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

‘ತಾಂತ್ರಿಕ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರುವ ಈ ದೇಶದಲ್ಲಿ ಚುನಾಯಿತರ ಸಂಖ್ಯೆ ಕಡಿಮೆಯಾಗುತ್ತಿರುವುದು ಅಪಾಯಕಾರಿ. ನಾನು ನಂಬಿರುವ ಸಿದ್ಧಾಂತವೇ ಶ್ರೇಷ್ಠ ಎಂಬ ಸೊಕ್ಕು ತಲೆಗೆ ಹೊಕ್ಕಿದರೆ ಸೋಲನ್ನು ಅನುಭವಿಸಬೇಕಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಮಾರ್ಕ್ಸ್‌ವಾದ ಭಾರತಕ್ಕೆ ಮದ್ದಾಗ ಬಲ್ಲದು ಎಂಬುದನ್ನು ಡಾ. ಬಿ.ಆರ್‌. ಅಂಬೇಡ್ಕರ್ ಅವರು 1949ರಲ್ಲೇ ಹೇಳಿದ್ದರು. ಲೆನಿನ್‌ ಕೂಡಾ ಇದೇ ರೀತಿ ಮಾತುಗಳನ್ನು 1900ಕ್ಕೂ ಮುನ್ನ ಹೇಳಿದ್ದರು. ಹೀಗಾಗಿ,ವಿವಿಧ ವಾದಗಳು, ಸಿದ್ಧಾಂತಗಳ ಒರೆಗಲ್ಲಿನಲ್ಲಿ ಮಾರ್ಕ್ಸ್ ಸಿದ್ಧಾಂತ ಬೆಳಗಬೇಕಾದ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ರಾಜಕೀಯ ಬೆಳವಣಿಗೆಗಳು ಹೀಗೆ ಮುಂದುವರಿದರೆ ಪ್ರಜಾಪ್ರಭುತ್ವದ ಬಗ್ಗೆ ಜನರಿಗೆ ನಂಬಿಕೆ ಹೋಗುತ್ತದೆ. ಅದಕ್ಕೆ ಅವಕಾಶ ಆಗದೇ ಸೈದ್ಧಾಂತಿಕ ಅನುಸಂಧಾನಕ್ಕೆ ಎಲ್ಲರ ಮನಸು ತೆರೆದುಕೊಳ್ಳಬೇಕು’ ಎಂದು ಹೇಳಿದರು.

ಮೂಲಭೂತವಾದ, ಬಂಡವಾಳಶಾಹಿ ಮಹಾಮಾರಿಗಳು: ಪ್ರೊ.ಪ್ರಭಾತ್‌
‌‘ಮೂಲಭೂತವಾದ ಮತ್ತು ಬಂಡವಾಳಶಾಹಿ ವ್ಯವಸ್ಥೆ ಜಗತ್ತಿನ ಮಹಾಮಾರಿಗಳು’ ಎಂದುಅರ್ಥಶಾಸ್ತ್ರಜ್ಞ ಪ್ರೊ. ಪ್ರಭಾತ್ ಪಟ್ನಾಯಕ್ ಹೇಳಿದರು.

ಪುಸ್ತಕ ಬಿಡುಗಡೆಗೂ ಮುನ್ನ ನಡೆದ ‘ಎಡಪಂಥದ ಮರು-ಶೋಧನೆ’ ವಿಷಯದ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಬಂಡವಾಳಶಾಹಿಗಳು ಪ್ರಜಾಪ್ರಭುತ್ವದ ಮುಖವಾಡ ಧರಿಸಿ ಜನರನ್ನು ವಂಚಿಸುತ್ತಿದ್ದಾರೆ.ಈಗ ಅದರ ಬೆನ್ನಿಗೆ ಮೂಲಭೂತವಾದವೂ ನಿಂತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ’ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

‘ಎಡಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಜಾಗತಿಕ ಬಂಡವಾಳವನ್ನು ಆಹ್ವಾನಿಸಲಾಗುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಗೆ ಇದು ಪರ್ಯಾಯ ಆಗಲಾರದು. ಮನುಷ್ಯನಿಗೆ ಹೊಸತನಗಳನ್ನು ಹುಟ್ಟುಹಾಕುವ ಶಕ್ತಿ ಇದೆ, ಹೊಸ ವ್ಯವಸ್ಥೆಯೊಂದನ್ನು ಕಟ್ಟುವ ಬಗ್ಗೆ ಎಡಪಕ್ಷಗಳು ಆಲೋಚನೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಯಾವುದೇ ಸುಧಾರಣಾವಾದಿ ಚಳವಳಿ ಬೆಳೆಯುತ್ತಾ ಹೋದಂತೆ ಬದಲಾವಣೆಗೆ ಬೇಕಾದ ಕ್ರಾಂತಿಕಾರತ್ವ ಗುಣಗಳನ್ನು ರೂಪಿಸಿಕೊಳ್ಳಬೇಕು. ಆಗ ಮಾತ್ರ ಅದು ಸರಿದಾರಿಯಲ್ಲಿ ಇದೆ ಎಂದು ಅರ್ಥ. ಎಡಪಂಥೀಯರು ಹಿಂದಿನ ಮಿತಿಗಳನ್ನು ಮೀರಿ ಬೆಳೆಯಬೇಕಿದೆ ಎಂದು ಹೇಳಿದರು.

ಕೃತಿಯ ಹೆಸರು:ಬಂಡವಾಳ
ಪ್ರಕಾಶಕರು: ನವ ಕರ್ನಾಟಕ, ಕ್ರಿಯಾ ಪ್ರಕಾಶನ
ಬೆಲೆ: ₹1250

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.