ADVERTISEMENT

ರಾಜಕೀಯ ವಸ್ತುವಾಗಿ ಬಸವಣ್ಣ ಬಳಕೆ: ಬೊಮ್ಮಾಯಿ ಬೇಸರ

ಸಂಸ್ಕೃತಿ ಸಂಗಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೊಮ್ಮಾಯಿ ಬೇಸರ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 16:30 IST
Last Updated 31 ಅಕ್ಟೋಬರ್ 2025, 16:30 IST
   

ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ಬಸವಣ್ಣನನ್ನು ಕೆಲವರು ತಮ್ಮ ಇಚ್ಛೆಯ ರೀತಿ ವ್ಯಾಖ್ಯಾನಿಸಿ ಹರಿದು ಹಂಚಿಕೊಂಡಿದ್ದೂ ಅಲ್ಲದೇ ರಾಜಕೀಯ ವಸ್ತುವಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ದುರ್ದೈವ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು.

ಸಿ.‌ಸೋಮಶೇಖರ ಎನ್.ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಧಕರಿಗೆ ಸಂಸ್ಕೃತಿ ಸಂಗಮ–2025 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ADVERTISEMENT

‘ನಾವು ಈಗಲೂ ಕಲ್ಯಾಣ ರಾಜ್ಯವನ್ನು ವಚನಗಳ ಮೂಲಕ ನೆನಪಿಸಿಕೊಳ್ಳುತ್ತೇವೆ. ಬಸವಣ್ಣ ಈ ನಾಡಿನಲ್ಲಿ ಜನಿಸಿ ಕ್ರಾಂತಿ ಮಾಡಿದವರು ಎನ್ನುವುದು ನಮ್ಮ ಹಿರಿಮೆ. ವಚನಗಳನ್ನು ನೀಡಿದ ಬಸವಣ್ಣನನ್ನು ತಮ್ಮ ಇಚ್ಛೆಯ ರೀತಿ ಕೆಲವರು ವ್ಯಾಖ್ಯಾನಿಸುತ್ತಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ವಿಚಾರಧಾರೆಯನ್ನು ಸೀಮಿತಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ಹೇಳಿದರು.

‘ಈಗಂತೂ ದೇಶ ಎನ್ನುವ ಪರಿಕಲ್ಪನೆಗೆ ಹೊಸ ರೂಪವನ್ನೇ ನೀಡಿ ವಿಕೃತಗೊಳಿಸುವ ಪ್ರಯತ್ನಗಳು ನಡೆದಿವೆ. ಜಾಗತಿಕವಾಗಿ ಸವಾಲು ಹಾಗೂ ಪರೀಕ್ಷೆಗೊಳಪಡುವ ದಿನಗಳಿವು. ಮುಂದಿನ ಶತಮಾನದಲ್ಲಿ ಭಾರತದ ಅಖಂಡತೆ ಉಳಿಯಬೇಕೆಂದರೆ ‍ಒಗ್ಗಟ್ಟಾಗಿ ನಿಲ್ಲಬೇಕು’ ಎಂದು ನುಡಿದರು.

‘ಜಾನಪದವನ್ನು ಮುಂದಿನ ಪೀಳಿಗೆಗೆ ತಲುಪಿಸಲು ತಂತ್ರಜ್ಞಾನ ಬಳಸಿಕೊಳ್ಳಬೇಕು. ಜಾನಪದ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಜಂಟಿಯಾಗಿ ಕೆಲಸ ಮಾಡಬೇಕು. ಸರ್ಕಾರವೂ ಆರ್ಥಿಕ ನೆರವನ್ನು ನೀಡಬೇಕು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಹೊಸ ತಲೆಮಾರು ತಂತ್ರಜ್ಞಾನ ಸಹಿತ ಹೊಸ ವಿಚಾರ, ಪ್ರಯೋಗಗಳ ಕಡೆ ಯೋಚಿಸುತ್ತಿದೆ. ಇಂತಹ ಪ್ರಯೋಗಗಳ ಲಾಭವನ್ನು ಕನ್ನಡ ಭಾಷೆಗೆ ಪಡೆಯಲು ವಿಫಲವಾಗುತ್ತಿದ್ದೇವೆ. ಸಾಂಸ್ಕೃತಿಕ ಪರಿಕಲ್ಪನೆಯನ್ನೂ ಹೊಸ ನೆಲೆಯಲ್ಲಿ ನೋಡಬೇಕಿದೆ‘ ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ತಮಿಳುನಾಡಿನಲ್ಲೂ ನಮ್ಮ ಸಂಸ್ಥೆಗಳಿವೆ. ಅಲ್ಲಿಗೆ ಬರುವ ಸರ್ಕಾರದ ಸೂಚನೆಗಳು ತಮಿಳಿನಲ್ಲೇ ಇರುತ್ತವೆ. ದೆಹಲಿಯಲ್ಲಿ ಹಿಂದಿಯಲ್ಲಿ ಪತ್ರಗಳು ಬರುತ್ತವೆ. ನಮ್ಮಲ್ಲಿ ಮಾತ್ರ ಹಾಗಿಲ್ಲ. ಇಂಗ್ಲಿಷ್‌ನಲ್ಲಿಯೇ ಸುತ್ತೋಲೆ ಹೊರಡಿಸುವುದು ಈಗಲೂ ಇದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದರೂ ಸೌಲಭ್ಯ ಒದಗಿಸುತ್ತಿಲ್ಲ’ ಎಂದು ಹೇಳಿದರು.

ರಾಮನಗರದ ಜಾನಪದ ಪರಿಷತ್ತಿನ ಪರವಾಗಿ ಹಿ.ಚಿ.ಬೋರಲಿಂಗಯ್ಯ, ಲೇಖಕರಾದ ರಂಜಾನ್ ದರ್ಗಾ, ಕಾ.ತ.ಚಿಕ್ಕಣ್ಣ, ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ್ ಜಿ‌. ಕಪ್ಪಣ್ಣ, ಗಾಯಕಿ ಕಸ್ತೂರಿಶಂಕರ್‌ ಅವರು ಸಂಸ್ಕೃತಿ ಸಂಗಮ ಪ್ರಶಸ್ತಿ ಸ್ವೀಕರಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಪ್ರತಿಷ್ಠಾನದ ಅಧ್ಯಕ್ಷ ಸಿ.ಸೋಮಶೇಖರ್‌, ಎನ್‌.ಸರ್ವಮಂಗಳ ಹಾಜರಿದ್ದರು.

‘ಸೋಮಶೇಖರ್‌ ಕಸಾಪ ಅಧ್ಯಕ್ಷರಾಗಲಿ’

ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಬೇಕು ಎನ್ನುವ ಸಲಹೆ ಸಂಸ್ಕೃತಿ ಸಂಗಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಳಿಬಂತು. ಲೋಕಸಭಾ ಚುನಾವಣೆಗಿಂತಲೂ ಕಸಾಪ ಚುನಾವಣೆ ಹೆಚ್ಚು ಎನ್ನುವಂತಾಗಿದೆ. ಸಾಹಿತ್ಯ ಪರಿಷತ್ ಚುನಾವಣೆಗೆ ಸೋಮಶೇಖರ್ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಸಂತೋಷದ ವಿಚಾರ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಕನ್ನಡಿಗರ ಸಾಂಸ್ಕೃತಿಕ ಪ್ರಾತಿನಿಧಿಕ ಸಂಸ್ಥೆಯಾದ ಕಸಾಪದ ಗೌರವ ಘನತೆಯನ್ನು ಹೆಚ್ಚಿಸುವ ಕೆಲಸ ಆಗಬೇಕು ಎಂದು ಪುರುಷೋತ್ತಮ ಬಿಳಿಮಲೆ ನಾಗರಾಜಮೂರ್ತಿ ರಂಜಾನ್‌ ದರ್ಗಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.