ಬೆಂಗಳೂರು: ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ– 1 ಬಿಬಿಸಿ) ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಕೇಂದ್ರ ಸರ್ಕಾರದ 2013ರ ಭೂ ಸ್ವಾಧೀನ ಕಾಯ್ದೆ ಅಡಿ ಪರಿಹಾರ ನೀಡಬೇಕು. ಇಲ್ಲವಾದರೆ ಅಧಿಸೂಚನೆ ರದ್ದುಪಡಿಸಿ, ಹೊಸದಾಗಿ ಹೊರಡಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಚೇರಿಯಲ್ಲಿ ಗುರುವಾರ ಯೋಜನೆಗೆ ಸಂಬಂಧಿಸಿದಂತೆ ಕರೆದಿದ್ದ ಸಭೆಯಲ್ಲಿ ಮಾತನಾಡಿದ ರೈತರು, ‘ಬಿಡಿಎ ಕಾನೂನಿಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಅಳವಡಿಸಿಕೊಳ್ಳಬೇಕು. ಈ ಕಾಯ್ದೆ ಪ್ರಕಾರ ಮಾರುಕಟ್ಟೆ ಬೆಲೆಗಿಂತ ಎರಡು ಪಟ್ಟು ಪರಿಹಾರ ನೀಡುವುದರ ಜತೆಗೆ ಪುನರ್ವಸತಿ ಕಲ್ಪಿಸಬೇಕು’ ಎಂದು ಪಟ್ಟು ಹಿಡಿದರು.
ಪಿಆರ್‌ಆರ್ ರೈತ ಹಾಗೂ ನಿವೇಶನದಾರರ ಸಂಘದ ಅಧ್ಯಕ್ಷ ಮಾವಳ್ಳಿಪುರ ಶ್ರೀನಿವಾಸ್ ಮಾತನಾಡಿ, ‘1894ರಲ್ಲಿ ಬ್ರಿಟಿಷರು ರೂಪಿಸಿದ ಕಾನೂನಿನಡಿ ನೀಡುವ ಪರಿಹಾರ ಬೇಡ. ಮೆಟ್ರೊ, ರೈಲ್ವೆ ಕೆಐಎಡಿಬಿ, ಕೆಎಚ್‌ಬಿ ಸೇರಿ ಅನೇಕ ಪ್ರಾಧಿಕಾರಿಗಳು 2013ರ ಕಾಯ್ದೆ ಅಳವಡಿಸಿಕೊಂಡು ವಿವಿಧ ಯೋಜನೆಗೆ ಪರಿಹಾರ ನೀಡುತ್ತಿವೆ. 2006ರಲ್ಲಿ ಅಧಿಸೂಚನೆ ಹೊರಡಿಸಿ, ಅಲ್ಲಿಂದ ಇಲ್ಲಿವರೆಗೆ ಯೋಜನೆ ಕುಂಟುತ್ತ ಸಾಗಿದೆ. ಪರಿಹಾರ ನೀಡಲು ಏನು ತೊಂದರೆ? ಅಧಿಕಾರಿಗಳು ಅವರ ಮನೆಯಿಂದ ಹಣವನ್ನು ತಂದು ಕೊಡುತ್ತಾರೆಯೇ’ ಎಂದು ತರಾಟೆಗೆ ತೆಗೆದುಕೊಂಡರು.
‘ಈಗಾಗಲೇ 400 ಮಂದಿ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದಾರೆ. ಬಿಡಿಎ ವರ್ತನೆ ಹೀಗೆ ಮುಂದುವರಿದರೆ ಮತ್ತೆ ನೂರಾರು ಮಂದಿ ಕೇಸ್ ದಾಖಲಿಸುತ್ತಾರೆ’ ಎಂದು ಎಚ್ಚರಿಸಿದರು.
‘ಪಿಆರ್‌ಆರ್‌ಗೆ ಗುರುತಿಸಿರುವ ಸರ್ವೆ ನಂಬರ್‌ಗಳ ಭೂಮಿಗೆ ಶೇಕಡ 60 ಮಾರ್ಗಸೂಚಿ ದರ ಕಡಿಮೆ ಮಾಡಲಾಗಿದೆ. ಈಗ ಮಾರ್ಗಸೂಚಿ ಪ್ರಕಾರ ಎರಡು, ಮೂರು ಪಟ್ಟು ಪರಿಹಾರ ನೀಡಲಾಗುವುದು ಎಂದರೆ ಏನು ಅರ್ಥ. ರೈತರನ್ನು ಮೋಸ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡಲಾಗಿದೆ’ ಎಂದು ವರ್ತೂರು ರೈತ ಜಗದೀಶ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ರಘು ಮಾತನಾಡಿ, ‘ರಸ್ತೆಗೆ ಎಷ್ಟು ಬೇಕೋ ಅಷ್ಟು ಭೂಮಿ ಮಾತ್ರ ಸ್ವಾಧೀನ ಪಡಿಸಿಕೊಂಡು ಉಳಿದಿದ್ದನ್ನು ರೈತರಿಗೆ ನೀಡಬೇಕು. ಉದಾಹರಣೆಗೆ 60 ಮೀಟರ್ ರಸ್ತೆಗೆ ಅಷ್ಟೇ ಭೂಮಿಯನ್ನು ವಶಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಪರಿಹಾರ ನಿಗದಿಯಲ್ಲೂ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಹೊಸ ಕಾಯ್ದೆ ಪ್ರಕಾರ ಪರಿಹಾರ ಸಿಗುವುದಿಲ್ಲ ಎಂದು ಅಧಿಕಾರಿಗಳು ಧಮ್ಕಿ ಹಾಕಿ ಸಂಧಾನ ಸೂತ್ರದ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ಎರಡು ದಶಕಗಳಿಂದ ರೈತರು ಅನುಭವಿಸಿದ ಸಂಕಷ್ಟ ಅಷ್ಟಿಷ್ಟಲ್ಲ. ಸಾಲ ಪಡೆಯಲು ಆಗುತ್ತಿಲ್ಲ. ನಗರದಿಂದ ಹೊರಗೆ ಭೂಮಿ ಮೌಲ್ಯ ಕೋಟ್ಯಂತರ ರೂಪಾಯಿ ಇದೆ. ಅಲ್ಲಿಗೆ ಹೋಗಿ ಬದುಕು ಕಟ್ಟಿಕೊಳ್ಳಲು ಕಷ್ಟ. ಆದಷ್ಟು ಬೇಗ ಇತ್ಯರ್ಥ ಪಡಿಸಿ’ ಎಂದು ರೈತರಾದ ಶ್ರೀಧರ, ಹೇಮಂತ್ ಕುಮಾರ್, ರಂಜನಿ ಮನವಿ ಮಾಡಿದರು.
ಆಯುಕ್ತ ಪಿ.ಮಣಿವಣ್ಣನ್, ಬಿಬಿಸಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ)ದ ಅಧ್ಯಕ್ಷ ಎಲ್.ಕೆ.ಅತೀಕ್ ಹಾಜರಿದ್ದರು.
ಮುಖ್ಯಮಂತ್ರಿ ಜತೆ ಚರ್ಚಿಸಿ ಪರಿಹಾರ: ಹ್ಯಾರಿಸ್
‘ರೈತರ ನೋವು ಅರ್ಥವಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ರೂಪಿಸಿರುವ ಯೋಜನೆಯನ್ನು ರದ್ದು ಮಾಡಲು ಆಗುವುದಿಲ್ಲ. ಕೇಂದ್ರ ಸರ್ಕಾರದ ಕಾಯ್ದೆ ಅಡಿ ಪರಿಹಾರಕ್ಕೆ ನೀಡುವಂತೆ ರೈತರು ಒತ್ತಾಯಿಸಿದ್ದಾರೆ. ಯಾರಿಗೂ ನಷ್ಟವಾಗಬಾರದು. ಹಾಗಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ರೈತರು ಸಹ ಮುಖ್ಯಮಂತ್ರಿ ಜತೆ ಚರ್ಚಿಸಲು ಅವಕಾಶ ಕಲ್ಪಿಸಲಾಗುವುದು’ ಎಂದು ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ತಿಳಿಸಿದರು. ‘ಯೋಜನೆಗೆ ಹುಡ್ಕೊ ಸಾಲ ಮಂಜೂರು ಮಾಡಿದೆ. ಅಂತಿಮ ವಿಸ್ತೃತ ವರದಿ ಸಹ ಸಿದ್ದಗೊಂಡಿದೆ. ಭೂ ಮಾಲೀಕರಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದ್ದು ಇದು ಅವರಿಗೆ ಲಾಭವೇ ಹೊರತು ನಷ್ಟವಲ್ಲ’ ಎಂದರು.
ವಿಷ ಕೊಟ್ಟು ಬಿಡಿ: ರೈತರ ಅಳಲು
‘ಬಿಡಿಎ ಕಚೇರಿಗೆ ಅಲೆದು ಸಾಕಾಗಿದೆ. ಪರಿಹಾರವೂ ನಿಗದಿ ಆಗಿಲ್ಲ. ಸ್ವಲ್ಪ ವಿಷ ಕೊಟ್ಟು ಬಿಡಿ ಜಮೀನು ಪಡೆದುಕೊಂಡು ರಸ್ತೆ ನಿರ್ಮಿಸಿಕೊಳ್ಳಿ. ಕೇಂದ್ರ ಕಾಯ್ದೆ ಅಡಿ ಪರಿಹಾರ ನೀಡಲು ಸಾಧ್ಯವಾಗದಿದ್ದರೆ ಅಧಿಸೂಚನೆ ರದ್ದು ಪಡಿಸಿ ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡಿ’ ಎಂದು ರೈತರು ಸಭೆಯಲ್ಲಿ ಅಳಲು ತೋಡಿಕೊಂಡರು.
ಭೂ ಮಾಲೀಕರಿಗೆ ನೀಡಿದ ಆಯ್ಕೆಗಳು
*2013ರ ಕಾಯ್ದೆ ಅಡಿ ಮಾರ್ಗಸೂಚಿ ದರದ ಪ್ರಕಾರ ಪರಿಹಾರ ನೀಡಲಾಗುವುದು. (ನಗರ ಪ್ರದೇಶಕ್ಕೆ ಎರಡು ಪಟ್ಟು ಹಾಗೂ ಗ್ರಾಮೀಣ ಪ್ರದೇಶಕ್ಕೆ ಮೂರು ಪಟ್ಟು)
* ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಮಾರ್ಗಸೂಚಿ ಅನ್ವಯ ನಗದು ಪರಿಹಾರ.
*ಯೋಜನೆಗೆ ಭೂಮಿ ನೀಡುವವರಿಗೆ ಪರ್ಯಾಯವಾಗಿ ಶೇಕಡ 40 ಅಭಿವೃದ್ಧಿ ಪಡಿಸಿದ ನಿವೇಶನ. (ಜನವಸತಿ ಪ್ರದೇಶದಲ್ಲಿ ಶೇಕಡ 40 ವಾಣಿಜ್ಯ ಪ್ರದೇಶದಲ್ಲಿ ಶೇಕಡ 30)
* ಫ್ಲೋರ್ ಏರಿಯಾ ರೇಷಿಯೊ (ಎಫ್‌ಎಆರ್) ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ಪ್ರಮಾಣಪತ್ರಕ್ಕೆ ಅವಕಾಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.