ADVERTISEMENT

ಬಿಬಿಎಂಪಿ| ಪ್ರತಿದಿನ 2,500 ಟನ್‌ ಮಿಶ್ರತ್ಯಾಜ್ಯ ಭೂಭರ್ತಿಗೆ: ತುಷಾರ್‌ ಗಿರಿನಾಥ್

275 ಕೋಟಿ ಲೀಟರ್‌ ದ್ರವತ್ಯಾಜ್ಯ ಸಂಸ್ಕರಣೆಗೆ ಮೂರೂವರೆ ವರ್ಷ; ₹474 ಕೋಟಿ ವೆಚ್ಚ: ತುಷಾರ್‌ ಗಿರಿನಾಥ್‌

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 23:30 IST
Last Updated 17 ಮಾರ್ಚ್ 2025, 23:30 IST
ಬಿಬಿಎಂಪಿ ಕೇಂದ್ರ ಕಚೇರಿಯ ಸಂಗ್ರಹ ಚಿತ್ರ
ಬಿಬಿಎಂಪಿ ಕೇಂದ್ರ ಕಚೇರಿಯ ಸಂಗ್ರಹ ಚಿತ್ರ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಒಂದು ಸಾವಿರ ಟನ್‌ ತ್ಯಾಜ್ಯ ಸಂಸ್ಕರಣೆಯಾಗುತ್ತಿದ್ದು, ಸುಮಾರು 2,500 ಟನ್‌ ಮಿಶ್ರತ್ಯಾಜ್ಯ ಭೂಭರ್ತಿಯಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ಮಿಟ್ಟಗಾನಹಳ್ಳಿ- ಕಣ್ಣೂರು ಭೂಭರ್ತಿ ಪ್ರದೇಶದದಲ್ಲಿ ಕಸ ವಿಲೇವಾರಿಗೆ ಉದ್ಭವಿಸಿದ್ದ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಎಂದಿನಂತೆ ತ್ಯಾಜ್ಯ ವಿಲೇವಾರಿಯಾಗುತ್ತಿದೆ ಎಂದು ಸುದ್ದಿಗಾರರಿಗೆ ಸೋಮವಾರ ಮಾಹಿತಿ ನೀಡಿದರು.

ಮಿಟ್ಟಗಾನಹಳ್ಳಿ, ಕಣ್ಣೂರಿನ ಸ್ಥಳೀಯರು ಹಾಗೂ ಗುತ್ತಿಗೆದಾರರು– ಅಧಿಕಾರಿಗಳ ನಡುವೆ ಸಂವಹನ ಕೊರತೆ ಉಂಟಾಗಿ ಸಮಸ್ಯೆಯಾಗಿತ್ತು. ₹500 ಕೋಟಿ ವೆಚ್ಚದಲ್ಲಿ ಗ್ರಾಮಗಳ ಅಭಿವೃದ್ಧಿಗೆ ಕಾರ್ಯಾದೇಶ ನೀಡಿ ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.

ADVERTISEMENT

ಮಿಟ್ಟಗಾನಹಳ್ಳಿ ಭೂಭರ್ತಿಯಲ್ಲಿ ರಾತ್ರಿ ವೇಳೆ ಕಸ ವಿಲೇವಾರಿ ಮಾಡಲಾಗುತ್ತಿದ್ದು, ಹಗಲಿನಲ್ಲಿಯೂ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಣ್ಣ-ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಹೇಳಿದರು.

ಮಿಟ್ಟಗಾನಹಳ್ಳಿ ಭೂಭರ್ತಿ ಘಟಕದಲ್ಲಿ ಸುಮಾರು 275 ಕೋಟಿ ಲೀಟರ್ ದ್ರವತ್ಯಾಜ್ಯ (ಲಿಚೆಟ್‌) ಸಂಗ್ರಹವಾಗಿದ್ದು, ಅದನ್ನು ಸಂಸ್ಕರಿಸಲು ₹474 ಕೋಟಿ ವೆಚ್ಚ ಮಾಡಲಾಗುತ್ತದೆ. ಅದಕ್ಕಾಗಿ ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ. ಮಿಟ್ಟಗಾನಹಳ್ಳಿಯಲ್ಲಿರುವ 50 ಕೆಎಲ್‌ಡಿಯ ಎರಡು ದ್ರವತ್ಯಾಜ್ಯ ಸಂಸ್ಕರಣೆ ಘಟಕಗಳಿಂದ ಸಂಸ್ಕರಣೆ ಮಾಡಿದರೆ, ಹತ್ತು ವರ್ಷ ಬೇಕಾಗುತ್ತದೆ. ಎರಡು ಎಂಎಲ್‌ಡಿ ಸಾಮರ್ಥ್ಯದ ಸಂಸ್ಕರಣ ಘಟಕ ಸ್ಥಾಪಿಸಿ, ಮೂರೂವರೆ ವರ್ಷಗಳಲ್ಲಿ ಸಂಸ್ಕರಣೆ ಮಾಡಲಾಗುತ್ತದೆ ಎಂದು ವಿವರಿಸಿದರು.

ನಗರದಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ ಹೊಸ ಯೋಜನೆಯಂತೆ ಟೆಂಡರ್ ಕರೆಯಲಾಗಿತ್ತು. ಆ ಟೆಂಡರ್‌ ನಲ್ಲಿ ಕಡಿಮೆ ಜನರು ಭಾಗವಹಿಸಿದ್ದರು. ಕೆಲವು ಅಂಶಗಳನ್ನು ತೆಗೆದು ಮತ್ತೆ ಟೆಂಡರ್‌ ಕರೆಯಲಾಗುತ್ತಿದೆ. 100 ಎಕರೆ ಜಾಗವನ್ನು ದೊಡ್ಡಬಳ್ಳಾಪುರದಲ್ಲಿ ಟೆರ‍್ರಾಫಾರ್ಮ್‌ ಬಳಿ ಅಂತಿಮಗೊಳಿ
ಸಲಾಗಿದೆ ಎಂದರು.

ಸರ್ಕಾರದ 50 ಎಕರೆ ಭೂಮಿ ಇದ್ದು, ಖಾಸಗಿಯವರಿಂದ ಸುಮಾರು 65 ಎಕರೆ ಖರೀದಿಸಲಾಗುತ್ತಿದೆ. ಅಲ್ಲದೆ, ನೈಸ್‌ ರಸ್ತೆಗೆ ಗೊಲ್ಲರಹಳ್ಳಿ ಬಳಿ ನೀಡಿರುವ ಭೂಮಿಯಲ್ಲಿ 100 ಎಕರೆ ಪಡೆದು
ಕೊಳ್ಳಲಾಗುತ್ತಿದೆ. ಈ ಎರಡೂ ಸ್ಥಳಗಳಲ್ಲಿ ಸಮಗ್ರ ಘನತ್ಯಾಜ್ಯ ವಿಲೇವಾರಿ, ಸಂಸ್ಕರಣೆ ಪ್ರಾರಂಭವಾಗಲಿದೆ ಎಂದರು.

  • ದೊಡ್ಡಬಳ್ಳಾಪುರ ಟೆರ‍್ರಾಫಾರ್ಮ್‌ ಬಳಿ 100 ಎಕರೆಯಲ್ಲಿ ಸಂಸ್ಕರಣೆ ಘಟಕ

  • ಗೊಲ್ಲರಹಳ್ಳಿಯಲ್ಲಿ ನೈಸ್‌ ರಸ್ತೆ ನೀಡಿದ್ದ 100 ಎಕರೆ ಭೂಮಿಯಲ್ಲಿ ಮತ್ತೊಂದು ಘಟಕ

ಸರ್ಕಾರಿ ಕಟ್ಟಡಗಳ ಆಸ್ತಿ ತೆರಿಗೆ: 31ರವರೆಗೆ ಒಟಿಎಸ್ 

ಬಿಬಿಎಂಪಿ ವ್ಯಾಪ್ತಿಯ ವಿಧಾನಸೌಧ, ವಿಕಾಸಸೌಧ ಸೇರಿದಂತೆ ಸರ್ಕಾರದ ಕಟ್ಟಡಗಳು ಹಾಗೂ ಸರ್ಕಾರದ ಅಂಗ ಸಂಸ್ಥೆಗಳು, ಕೇಂದ್ರ ಸರ್ಕಾರದ ಕಟ್ಟಡಗಳು ತೆರಿಗೆ ಪಾವತಿಸಲು ಮಾರ್ಚ್‌ 31ರ ಗಡುವು ನೀಡಲಾಗಿದೆ. ಒಂದು ಬಾರಿ ಪರಿಹಾರ (ಒಟಿಎಸ್‌) ಯೋಜನೆಯನ್ನು 31ರವರೆಗೆ ಜಾರಿಗೊಳಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಒಟಿಎಸ್‌ ಜಾರಿಯಲ್ಲಿರುವುದರಿಂದ ಬಡ್ಡಿ ಹಾಗೂ ದಂಡ ಕಟ್ಟುವಂತಿಲ್ಲ. ಮಾರ್ಚ್‌ 31ರೊಳಗೆ ಆಸ್ತಿ ತೆರಿಗೆ ಪಾವತಿಸದಿದ್ದರೆ 2025ರ ಏಪ್ರಿಲ್‌ನಿಂದ ತೆರಿಗೆಯ ದುಪ್ಪಟ್ಟು ಮೊತ್ತ ಪಾವತಿಸಬೇಕಾಗುತ್ತದೆ. ಈ ಬಗ್ಗೆ ಇಲಾಖೆಗಳ ಅಧಿಕಾರಿಗಳಿಗೆ ಪತ್ರ ಬರೆದು, ತೆರಿಗೆ ಪಾವತಿ ಮಾಡುವಂತೆ ತಿಳಿಸಬೇಕು ಎಂದು ವಲಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದರು. ಒಟಿಎಸ್‌ ಜಾರಿಗೆ
ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ನಾಗರಿಕರಿಗಾಗಿ ಜಾರಿಯಾಗಿದ್ದ ಒಟಿಎಸ್‌ ಯೋಜನೆಯಿಂದ ₹1,277 ಕೋಟಿ ಸಂಗ್ರಹಿಸಲಾಗಿದೆ ಎಂದೂ ಈ ಆದೇಶದಲ್ಲಿ ತಿಳಿಸಲಾಗಿದೆ.

27ರಂದು ಬಿಬಿಎಂಪಿ ಬಜೆಟ್‌
‘ಬಿಬಿಎಂಪಿ ಬಜೆಟ್‌ ಅನ್ನು ಮಾರ್ಚ್‌ 27ರಂದು ಮಂಡಿಸಲಾಗುತ್ತದೆ. ಆಡಳಿತಾಧಿಕಾರಿಯವರು ನಗರದ ಎಲ್ಲ ಶಾಸಕರಿಗೆ ಆಹ್ವಾನ ನೀಡಿದ್ದು, 24ರಂದು ಸಭೆ ನಡೆಯಲಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೂ ಸಭೆಯಲ್ಲಿ ಭಾಗವಹಿಸುತ್ತಾರೆ’ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು. ‘ಕಸ ನಿರ್ವಹಣೆಗೆ ಬಳಕೆದಾರರ ಶುಲ್ಕ ಏಪ್ರಿಲ್‌ 1ರಿಂದಲೇ ಜಾರಿಗೆ ಬರಲಿದೆ. ವಾಣಿಜ್ಯ ಕಟ್ಟಡಗಳಿಗೆ ಸಂಬಂಧಿಸಿದಂತೆ ಗೊಂದಲ ಇದೆ. ದಿನಸಿ ಅಂಗಡಿ, ತರಕಾರಿ ಮಳಿಗೆ, ಹೋಟೆಲ್‌ಗೆ ಒಂದೇ ರೀತಿಯಲ್ಲಿ ಶುಲ್ಕ ವಿಧಿಸಲು ಸಾಧ್ಯವಿಲ್ಲ. ಹೀಗಾಗಿ, ಈ ಬಗ್ಗೆ ಒಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.