ADVERTISEMENT

ಕಸ ವಿಲೇವಾರಿ: ‘ವಾರ್ಡ್‌ ಸಮಿತಿ ಸದಸ್ಯರಿಗೂ ಹೊಣೆ’

ಸಾರ್ವಜನಿಕರು ಕೈಜೋಡಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 20:00 IST
Last Updated 20 ಆಗಸ್ಟ್ 2019, 20:00 IST
ಸಭೆಯನ್ನು ಸುಭಾಷ್ ಬಿ.ಆಡಿ ಉದ್ಘಾಟಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಮನೋಜ್‌ ಕುಮಾರ್‌, ಮೇಯರ್ ಗಂಗಾಂಬಿಕೆ, ಹೆಚ್ಚುವರಿ ಆಯುಕ್ತ (ಘನತ್ಯಾಜ್ಯ) ರಂದೀಪ್ ಇದ್ದಾರೆ
ಸಭೆಯನ್ನು ಸುಭಾಷ್ ಬಿ.ಆಡಿ ಉದ್ಘಾಟಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಮನೋಜ್‌ ಕುಮಾರ್‌, ಮೇಯರ್ ಗಂಗಾಂಬಿಕೆ, ಹೆಚ್ಚುವರಿ ಆಯುಕ್ತ (ಘನತ್ಯಾಜ್ಯ) ರಂದೀಪ್ ಇದ್ದಾರೆ   

ಕೆಂಗೇರಿ: ಬಿಬಿಎಂಪಿ ಜತೆಗೆ ಸಾರ್ವಜನಿಕರು ಕೈಜೋಡಿಸಿದರೆ ಮಾತ್ರ ಕಸ ವಿಲೇವಾರಿಯಲ್ಲಿ ಸಂಪೂರ್ಣ ಯಶಸ್ಸು ಕಾಣಬಹುದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೂಚನೆ ಮೇರೆಗೆ ನೇಮಿಸಿದ ರಾಜ್ಯ ಸಮಿತಿ ಅಧ್ಯಕ್ಷ ಸುಭಾಷ್ ಬಿ. ಆಡಿ ಹೇಳಿದರು.

ಬಿಬಿಎಂಪಿ ಆಶ್ರಯದಲ್ಲಿ ಮಂಗಳವಾರ ನಡೆದ ಘನತ್ಯಾಜ್ಯ ನಿರ್ವಹಣೆ ಪಾಲುದಾರರ ಸಭೆಯಲ್ಲಿ ಮಾತನಾಡಿದರು.

‘ಪ್ರತಿಯೊಂದು ವಾರ್ಡ್ ತನ್ನದೇ ಆದ ಸಮಿತಿ ಹೊಂದಿದೆ. ಸಮಿತಿ ಸದಸ್ಯರು ಕಸ ವಿಲೇವಾರಿಯತ್ತ ಗಮನ ಹರಿಸಬೇಕು. ಇಲ್ಲವಾದಲ್ಲಿ ಸದಸ್ಯರನ್ನು ಬದಲಾಯಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ADVERTISEMENT

‘ಸ್ವಯಂಪ್ರೇರಿತರಾಗಿ ಕಸ ವಿಲೇವಾರಿ ಕಾರ್ಯಗಳಲ್ಲಿ ತೊಡಗುವವರಿಗೆ ಗುರುತಿನ ಚೀಟಿ ನೀಡಲಾಗುವುದು. ಅವರು ನೀಡಿದ ಸೂಕ್ತ ಮಾಹಿತಿಯನ್ನು ಆಧರಿಸಿ ಅಕ್ರಮವಾಗಿ ತ್ಯಾಜ್ಯ ಸುರಿದು ಹೋಗುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು. ಬ್ಲಾಕ್ ಸ್ಪಾಟ್ ಗಳಲ್ಲಿ ಕಸ ಸುರಿಯುವವರು ಮತ್ತು ಆ ನಿವೇಶನದಾರರಿಗೆ ಕನಿಷ್ಠ ₹25,000 ದಂಡ ವಿಧಿಸಲಾಗುವುದು’ ಎಂದು ಹೇಳಿದರು

‘ರಸ್ತೆ ಬದಿಯಲ್ಲಿ ಕಸ ಸುರಿದುಹೋಗುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ. ₹5000 ದಂಡ ಮತ್ತು 6 ತಿಂಗಳವರೆಗೆ ಸಜೆ ವಿಧಿಸಲು ಸಾಧ್ಯವಿದೆ. ಈ ಸಂಬಂಧ ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು’ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ (ಕಸ ವಿಲೇವಾರಿ) ಡಿ.ರಂದೀಪ್ ಹೇಳಿದರು.

ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆ ಡಂಪಿಂಗ್ ಯಾರ್ಡ್ ಆಗಿ ಬದಲಾಗಿದೆ ಎಂದು ಕೆಂಗೇರಿ ವಾರ್ಡ್ ನಾಗರಿಕರು ದೂರಿದರೆ, ರಾಜರಾಜೇಶ್ವರಿನಗರ ವಾರ್ಡ್ ವ್ಯಾಪ್ತಿಯ ಬಂಗಾರಪ್ಪ ಬಡಾವಣೆಯಲ್ಲಿ ಕಸ ಸಂಗ್ರಹಕ್ಕೆ ಆಟೊ ಬರಲು ಸಾಧ್ಯವಾಗದ ಸ್ಥಿತಿಯಿದೆ. ಬದಲಿ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದರು. ಪೀಣ್ಯ ಕೈಗಾರಿಕಾ ಪ್ರದೇಶ ತ್ಯಾಜ್ಯಗಳ ಆಗರವಾಗಿ ಪರಿಣಮಿಸಿದೆ. ತ್ಯಾಜ್ಯ ವಿಲೇವಾರಿಗಾಗಿಯೇ ಮೀಸಲಾಗಿದ್ದ ಜಮೀನು ಬಿಬಿಎಂಪಿ ಪಾಲಾಗಿದೆ. ಇದ್ದ ಕೆರೆಯೂ ಕೂಡಾ ಕೈಗಾರಿಕಾ ತ್ಯಾಜ್ಯದ ಹೊಂಡವಾಗಿ ಬದಲಾಗಿದೆ ಎಂದು ಅಲ್ಲಿನ ನಾಗರಿಕರು ಅವಲತ್ತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.