ADVERTISEMENT

ಆಸ್ತಿ ತೆರಿಗೆ ಪಾವತಿ ಮಾಡದ 836 ವಾಣಿಜ್ಯ ಕಟ್ಟಡಗಳಿಗೆ ಬೀಗ ಜಡಿದ ಬಿಬಿಎಂಪಿ

ಬಿಬಿಎಂಪಿ: ಆಸ್ತಿ ತೆರಿಗೆ ಸಂಗ್ರಹದಲ್ಲಿ ಶೇ 10ರಷ್ಟು ಹೆಚ್ಚಳ; ಮಹದೇವಪುರ ವಲಯ ಸಂಗ್ರಹದಲ್ಲಿ ಮುಂದು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 0:30 IST
Last Updated 19 ಡಿಸೆಂಬರ್ 2023, 0:30 IST
<div class="paragraphs"><p>&nbsp;ಬಿಬಿಎಂಪಿ</p></div>

 ಬಿಬಿಎಂಪಿ

   

ಬೆಂಗಳೂರು: ಆಸ್ತಿ ತೆರಿಗೆ ಪಾವತಿ ಮಾಡದ 836 ವಾಣಿಜ್ಯ ಕಟ್ಟಡಗಳಿಗೆ ಬಿಬಿಎಂಪಿ ಸಿಬ್ಬಂದಿ ಬೀಗ ಹಾಕಿದ್ದಾರೆ.

ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿದ್ದು, ಪೂರ್ವ ವಲಯದಲ್ಲಿ ಅತಿ ಕಡಿಮೆ ಸಂಖ್ಯೆ ಇದೆ. ವಾಣಿಜ್ಯ ಕಟ್ಟಡಗಳು ಹೆಚ್ಚಿನ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದು, ಡಿಮ್ಯಾಂಡ್‌ ನೋಟಿಸ್‌ ನೀಡಿದ 30 ದಿನಗಳ ನಂತರವೂ ಪಾವತಿಸದಿರುವುದರಿಂದ ಕ್ರಮ ಕೈಗೊಳ್ಳಲಾಗುತ್ತಿದೆ.

ADVERTISEMENT

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಸ್ತಿ ಸಂಗ್ರಹದಲ್ಲಿ ಶೇ 10ರಷ್ಟು ಹೆಚ್ಚಳವಾಗಿದ್ದು, ನ.1ರಿಂದ 1.74 ಲಕ್ಷ ಆಸ್ತಿಗಳ ತೆರಿಗೆಯನ್ನು ಪುನರ್‌ವಿಮರ್ಶಿಸಲಾಗಿದೆ. ಈ ಪುನರ್‌ವಿಮರ್ಶೆಯಿಂದಲೇ ಸುಮಾರು ₹400 ಕೋಟಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸುವ ನಿರೀಕ್ಷೆ ಹೊಂದಲಾಗಿದೆ.

ಆಸ್ತಿ ವಿಸ್ತೀರ್ಣದ ತಪ್ಪು ಮಾಹಿತಿ, ವಲಯ ಬದಲು ಇತ್ಯಾದಿ ಲೋಪವಿರುವ ಆಸ್ತಿಗಳಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ನ.1ರಿಂದ 12 ಸಾವಿರ ಆಸ್ತಿಗಳಿಗೆ ನೋಟಿಸ್‌ ನೀಡಿ, 23 ಸಾವಿರಕ್ಕೂ ಹೆಚ್ಚಿನ ಆಸ್ತಿಗಳಿಗೆ ಡಿಮ್ಯಾಂಡ್‌ ನೋಟಿಸ್‌ ಜಾರಿ ಮಾಡಲಾಗಿದೆ. 233 ’ಎ‘ ಖಾತಾ ಹಾಗೂ 483 ‘ಬಿ‘ ಖಾತಾ ಆಸ್ತಿಗಳು ಹೊಸದಾಗಿ ಆಸ್ತಿ ತೆರಿಗೆ ವ್ಯಾಪ್ತಿ ಬಂದಿವೆ.

‘ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆ ಬಾಕಿಗೆ ಸಂಬಂಧಿಸಿದಂತೆ ಸದ್ಯಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಸತಿ ಕಟ್ಟಡಗಳ ಆಸ್ತಿ ತೆರಿಗೆ ಬಾಕಿ ಇದ್ದರೂ ಶೋಕಾಸ್‌ ನೋಟಿಸ್‌ ನೀಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಚರಾಸ್ತಿ (ವಾಹನಗಳು) ಹಾಗೂ ಬ್ಯಾಂಕ್‌ ಖಾತೆ ಮುಟ್ಟುಗೋಲು ಹಾಕಿಕೊಳ್ಳುವ ಯೋಜನೆಯೂ ಇದೆ. ಈ ಆರ್ಥಿಕ ವರ್ಷದಲ್ಲಿ ಗುರಿ ಹೊಂದಿರುವ ಆಸ್ತಿ ತೆರಿಗೆ ಸಂಗ್ರಹದ ಜೊತೆಗೆ, ಪುನರ್‌ ವಿಮರ್ಶೆ ಪೂರ್ಣಗೊಳಿಸಿ ಹೆಚ್ಚಿನ ತೆರಿಗೆ ಸಂಗ್ರಹಿಸಲು ಯೋಜಿಸಲಾಗಿದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

‘ಸರ್ಕಾರಿ ಹಾಗೂ ಸಾರ್ವಜನಿಕ ವಲಯದ ಕಟ್ಟಡಗಳಿಂದಲೂ ಆಸ್ತಿ ತೆರಿಗೆ ಬಾಕಿ ಬರಬೇಕಿದೆ. ಇದನ್ನು ಪರಿಶೀಲಿಸಲಾಗುತ್ತಿದ್ದು, ಆ ತೆರಿಗೆಯನ್ನೂ ಸಂಗ್ರಹಿಸಲಾಗುತ್ತದೆ’ ಎಂದರು.

‘ಹೊಸದೇನೂ ಇಲ್ಲ’

‘ಆಸ್ತಿ ತೆರಿಗೆ ಸಂಗ್ರಹಕ್ಕೆ ಹೊಸದಾದ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಬಿಬಿಎಂಪಿ ಕಾಯ್ದೆಯಲ್ಲಿರುವ ಆಯ್ಕೆಗಳನ್ನೇ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲು ನೋಟಿಸ್‌, ಡಿಮ್ಯಾಂಡ್‌ ನೋಟಿಸ್‌, ನಂತರ ವಾಣಿಜ್ಯ ಕಟ್ಟಡಗಳಿಗೆ ಬೀಗ, ಬ್ಯಾಂಕ್‌ ಖಾತೆ ವಶಕ್ಕೆ, ಚರಾಸ್ತಿ, ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ವರ್ಷದ ಆಸ್ತಿ ತೆರಿಗೆ ಬಾಕಿ ಇದ್ದರೂ ಕ್ರಮ ಕೈಗೊಳ್ಳಲಾಗುತ್ತದೆ. ನಾಗರಿಕರು ಜವಾಬ್ದಾರಿ ಯುತವಾಗಿ ಆಸ್ತಿ ತೆರಿಗೆ ಪಾವತಿಸಿ ನಗರ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.