ADVERTISEMENT

BBMP Budget | ಆಕಾಶ ಗೋಪುರಕ್ಕೆ ₹50 ಕೋಟಿ, ಹೆಚ್ಚುವರಿ ತೆರಿಗೆ ಸಂಗ್ರಹ ಗುರಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2025, 0:30 IST
Last Updated 30 ಮಾರ್ಚ್ 2025, 0:30 IST
   

ಆರೋಗ್ಯಕ್ಕೆ ₹413 ಕೋಟಿ

‘ಆರೋಗ್ಯಕರ ಬೆಂಗಳೂರು’ ಅಭಿಯಾನದಡಿ ಮುಂದಿನ ಎರಡು ವರ್ಷಗಳಲ್ಲಿ ₹413 ಕೋಟಿ ವೆಚ್ಚದಲ್ಲಿ 19 ಆಸ್ಪತ್ರೆಗಳು ಸೇರಿ ಒಟ್ಟಾರೆ 852 ಹಾಸಿಗೆಗಳಿಂದ 1,122 ಹಾಸಿಗೆಗಳಿಗೆ ಹೆಚ್ಚಿಸಲಾಗುವುದು. 60ಕ್ಕೂ ಹೆಚ್ಚಿನ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. 26 ಹೊಸ ಆರೋಗ್ಯ‌ ಕೇಂದ್ರಗಳಲ್ಲಿ ದಂತಚಿಕಿತ್ಸಾ ಸೇವೆಗಳನ್ನು ಒದಗಿಸಲು ಉದ್ದೇಶಿಸಲಾಗಿದೆ.

ಹೃದಯ ಸ್ತಂಭನ ಮತ್ತು ಇತರ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ತುರ್ತು ಆರೈಕೆಗಾಗಿ 26 ಬಿಎಲ್‌ಎಸ್‌ ಆಂಬುಲೆನ್ಸ್‌; ಅಲೆಮಾರಿಗಳು ಮತ್ತು ಕೊಳೆಗೇರಿ ನಿವಾಸಿಗಳ ಮಕ್ಕಳಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೈಗೊಳ್ಳುವ ಕಾರ್ಯಕ್ರಮಕ್ಕೆ 144 ಎಲೆಕ್ಟ್ರಿಕ್ ವಾಹನ, ಅಂಗವಿಕಲ ಮಕ್ಕಳಿಗೆ ಏಳು ಫಿಸಿಯೋಥೆರಪಿ ಸೌಲಭ್ಯ.

ADVERTISEMENT

ರಾಯಪುರಂ ಹೆರಿಗೆ ಆಸ್ಪತ್ರೆ, ಸಗಾಯಪುರ, ಕುಶಾಲನಗರ ಆಸ್ಪತ್ರೆ ಮತ್ತು ಸಿಂಗಾಪುರ ಗ್ರಾಮದ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಕಾಮಗಾರಿ ಹಾಗೂ ಕುಂಬಳಗೋಡು ಮತ್ತು ತಾವರೆಕೆರೆಗಳಲ್ಲಿ ಚಿತಾಗಾರ.

₹633 ಕೋಟಿ; ಎಂ.ಸಿ. ಲೇಔಟ್‌ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ವೈದ್ಯಕೀಯ ಮಹಾವಿದ್ಯಾಲಯವನ್ನಾಗಿ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವ

₹12 ಕೋಟಿ; ಕಸಾಯಿಖಾನೆ ನಿರ್ಮಾಣ ಹಾಗೂ ನಿರ್ವಹಣೆಗೆ ಅನುದಾನ

ನಾಯಿಗಳಿಗೆ ಆಶ್ರಯತಾಣ

ತೀವ್ರ ಕಾಯಿಲೆ ಮತ್ತು ಅಪಘಾತಕ್ಕೆ ಒಳಗಾಗಿರುವ ನಾಯಿಗಳಿಗೆ ಆಶ್ರಯ ಕೇಂದ್ರಗಳನ್ನು ಹಾಗೂ ಮೂರು ವಲಯಗಳಲ್ಲಿ ಪ್ರಾಣಿಗಳ ಚಿತಾಗಾರವನ್ನು ಸ್ಥಾಪಿಸಲಾಗುವುದು. ಪದೇಪದೇ ಕಚ್ಚುವುದನ್ನೇ ರೂಢಿಯಾಗಿಸಿಕೊಂಡ ನಾಯಿಗಳಿಗಾಗಿ ಯಲಹಂಕ ವಲಯದಲ್ಲಿ ವೀಕ್ಷಣಾ ಕೇಂದ್ರ ಸ್ಥಾಪಿಸಲಾಗುವುದು. ₹7.5 ಕೋಟಿ ವೆಚ್ಚದಲ್ಲಿ ಆರು ವಲಯಗಳಲ್ಲಿ ಪಶುವೈದ್ಯಕೀಯ ಚಿಕಿತ್ಸಾಲಯ, ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯಗಳಲ್ಲಿ ಎರಡು ಎ.ಬಿ.ಸಿ. ಕೇಂದ್ರ ಸ್ಥಾಪನೆ, ಬೀದಿ ನಾಯಿಗಳಿಗೆ ಮೈಕ್ರೊಚಿಪ್‌, ಬೀದಿ ನಾಯಿಗಳಿಗೆ ಆಹಾರ ಯೋಜನೆ, ನಿರ್ವಹಣೆಗಾಗಿ ₹60 ಕೋಟಿ.

ನಾಗರಿಕ ಸಮಸ್ಯೆ ಪರಿಹಾರಕ್ಕೆ ‘ಬಿಬಿಎಂಪಿ–ಒನ್–ಆ್ಯಪ್‌’

ನಾಗರಿಕರಿಗೆ ತ್ವರಿತಗತಿಯಲ್ಲಿ ಪಾಲಿಕೆಯ ಸೇವೆಗಳನ್ನು ಒದಗಿಸಲು ‘ಟೆಕ್‌ ಬೆಂಗಳೂರು’ ಪರಿಕಲ್ಪನೆಯಡಿ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಮೂಲಕ ಸೇವೆ ಒದಗಿಸಲು ಬೇಕಾಗುವ ಸಮಯ ಮತ್ತು ಸಂಪನ್ಮೂಲವನ್ನು ಉಳಿತಾಯ ಮಾಡಲಾಗುತ್ತಿದೆ. ನಾಗರಿಕ ಸೇವೆಗಳಿಗಾಗಿ ಮೊಬೈಲ್ ಅಪ್ಲಿಕೇಷನ್‌ಗಳನ್ನು ‘ಬಿಬಿಎಂಪಿ-ಒನ್-ಆ್ಯಪ್‌’ ಅಡಿ ಸಂಯೋಜಿಸಲು ₹40 ಕೋಟಿ ಮೀಸಲಿರಿಸಿದೆ.

ಕಟ್ಟಡ ನಕ್ಷೆ ಅನುಮೋದನೆಗೆ ಎಐ ಚಾಲಿತ ವ್ಯವಸ್ಥೆ, ವ್ಯಾಪಾರ ಪರವಾನಗಿ, ಟೆಲಿಕಾಂ ಟವರ್ಸ್, ಕ್ಲೀನ್-ಸಿಟಿ-ವೇಸ್ಟ್-ಮ್ಯಾನೇಜ್‌ಮೆಂಟ್, ವಿದ್ಯುತ್‌ ಚಿತಾಗಾರ, ಕೆರೆ ನಿರ್ವಹಣೆ, ಆಸ್ತಿ ನಿರ್ವಹಣೆಗಾಗಿ ನಾಗರಿಕ ಸ್ನೇಹಿ ಆ್ಯಪ್‌ ಅಭಿವೃದ್ಧಿಪಡಿಸಲಾಗುತ್ತದೆ. ಸೇಫ್ ಸಿಟಿ ಕ್ಯಾಮೆರಾ, ಪಾಲಿಕೆಗಳಲ್ಲಿರುವ ಕ್ಯಾಮೆರಾ ಮಾಹಿತಿ, ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನದಿಂದ ಹದಗೆಟ್ಟ ರಸ್ತೆಗಳು, ಮಳೆನೀರು ನಿಂತ ಸ್ಥಳಗಳು, ತ್ಯಾಜ್ಯ ಸಮಸ್ಯೆ, ಅನಧಿಕೃತ ಜಾಹೀರಾತು, ಪಾದಚಾರಿ ಮಾರ್ಗ ಒತ್ತುವರಿ, ಅಕ್ರಮ ಕಟ್ಟಡಗಳು ಇತ್ಯಾದಿಗಳನ್ನು ಪತ್ತೆಹಚ್ಚಿ ನಾಗರಿಕರ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲು ಕ್ರಮವಹಿಸಲಾಗುವುದು.

ಕೆರೆ ನಿರ್ವಹಣೆಗೆ ₹210 ಕೋಟಿ

‘ಜಲ ಸುರಕ್ಷತೆ ಬೆಂಗಳೂರು’ ಪರಿಕಲ್ಪನೆಯಡಿ ಕೆರೆಗಳ ನಿರ್ವಹಣೆ ಹಾಗೂ ಅಭಿವೃದ್ದಿ ಕಾಮ
ಗಾರಿಗಳಿಗಾಗಿ ₹210 ಕೋಟಿಗಳನ್ನು ನಿಗದಿಪಡಿಸಲಾಗಿದೆ. ಎಲ್ಲಾ ಕೆರೆಗಳಲ್ಲಿನ ಪಕ್ಷಿಗಳ ಅಧ್ಯಯನ, ಪಾಲಿಕೆಯ ಕಟ್ಟಡಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ ಕಲ್ಪಿಸಲಾಗುವುದು. ನಗರದಲ್ಲಿ ಹವಾಮಾನ ವೈಪರೀತ್ಯ ಕಡಿಮೆಗೊಳಿಸಿ, ಸುಸ್ಥಿರವಾದ ವಾತಾವರಣ ಸೃಜಿಸಲು, ವಿಶ್ವ ಬ್ಯಾಂಕ್ ಆರ್ಥಿಕ ನೆರವಿನೊಂದಿಗೆ ಕರ್ನಾಟಕ ಜಲ ಭದ್ರತೆ ಮತ್ತು ಸ್ಥಿತಿ ಸ್ಥಾಪಕತ್ವ ಕಾರ್ಯಕ್ರಮದಡಿ ಕರ್ನಾಟಕ ಸರ್ಕಾರ ಹಾಗೂ ಬಿಬಿಎಂಪಿ ₹2,000 ಕೋಟಿಗಳ ಅನುದಾನದಲ್ಲಿ 174 ಕಿ.ಮೀ. ಉದ್ದದ ರಾಜಕಾಲುವೆಗೆ ತಡೆಗೋಡೆಯನ್ನು ಮುಂದಿನ ಮೂರು ವರ್ಷಗಳಲ್ಲಿ ನಿರ್ಮಿಸಲು ಉದ್ದೇಶಿಸಿದೆ. ವಿಶ್ವ ಬ್ಯಾಂಕ್‌ನಿಂದ ಈ ಸಾಲಿನಲ್ಲಿ ₹500 ಕೋಟಿ ನಿರೀಕ್ಷಿಸಲಾಗಿದೆ.

₹247.25 ಕೋಟಿ; ರಾಷ್ಟೀಯ ವಿಪತ್ತು ಪರಿಹಾರ ನಿಧಿಯಿಂದ ನಗರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ

ಶಾಲೆ ನವೀಕರಣಕ್ಕೆ ₹183.69 ಕೋಟಿ

ಪಾಲಿಕೆಯ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಓದುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ₹183.69 ಕೋಟಿ ಅನುದಾನ ಒದಗಿಸಲಾಗಿದೆ. ಐದು‌ ವಲಯಗಳಲ್ಲಿ ಹೊಸದಾಗಿ ಶಾಲೆಗಳ ಪ್ರಾರಂಭ, ಶಾಲಾ ಕಟ್ಟಡಗಳ ನವೀಕರಣಕ್ಕೆ ಒತ್ತು ನೀಡಲಾಗಿದೆ. ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಮಳೆನೀರು ಸಂಗ್ರಹ, ಕೈ ತೋಟಗಳು ಮತ್ತು ಸೌರ ಚಾವಣಿ ಫಲಕಗಳ ಸ್ಥಾಪನೆ, ಸ್ಯಾನಿಟರಿ ನ್ಯಾಪ್‌ಕಿನ್ ಇನ್ಸಿನರೇಟರ್‌ಗಳನ್ನು ಅಳವಡಿಸಲಾಗುವುದು.

₹ 2,000 - ಪಾಲಿಕೆಯ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ವೇತನ ಹೆಚ್ಚಳ

₹ 23.34 ಕೋಟಿ - ಪಾಲಿಕೆಯ ಶಾಲಾ ಕಟ್ಟಡಗಳ ನಿರ್ವಹಣೆ

₹ 30 ಕೋಟಿ - ಆಟದ ಮೈದಾನ ಅಭಿವೃದ್ಧಿ‌

₹ 120.35 ಕೋಟಿ - ಶೈಕ್ಷಣಿಕ ಕಾರ್ಯಕ್ರಮ

ಆಕಾಶ ಗೋಪುರಕ್ಕೆ ₹50 ಕೋಟಿ

‘ರೋಮಾಂಚಕ ಬೆಂಗಳೂರು’ ಪರಿಕಲ್ಪನೆಯಲ್ಲಿ ನಗರದ ಸೌಂದರ್ಯೀಕರಣಕ್ಕಾಗಿ ಅಲಂಕಾರಿಕ ದೀಪ ಅಳವಡಿಸಲು ₹50 ಕೋಟಿ, ಜಂಕ್ಷನ್ ಸುಧಾರಣೆ ಮತ್ತು ಸಾರ್ವಜನಿಕ ಸ್ಥಳಗಳ ಸೌಂದರ್ಯೀಕರಣ
ಕ್ಕಾಗಿ ₹25 ಕೋಟಿ, ಆಕಾಶ ಗೋಪುರ (ಸ್ಕೈ-ಡೆಕ್) ನಿರ್ಮಾಣಕ್ಕಾಗಿ ₹50 ಕೋಟಿ ಮೀಸಲಿಟ್ಟಿದ್ದು, ಈ ಕಾಮಗಾರಿಗಳು ಪ್ರಗತಿಯಲ್ಲಿವೆ.

ಕ್ರೀಡಾ ಇಲಾಖೆಯ ಸಂಯೋಜನೆಯೊಂದಿಗೆ ಜಕ್ಕೂರಿನಲ್ಲಿ ವಿವಿಧೋದ್ದೇಶ ಕ್ರೀಡಾ ಸೌಲಭ್ಯ ರೂಪಿಸುವ ಯೋಜನೆಗೆ ಅನುದಾನ ಹಾಗೂ ಸಮುದಾಯದ ಬಾಂಧವ್ಯಗಳನ್ನು ಬಲಪಡಿಸಲು ಉದ್ಯಾನಗಳಲ್ಲಿ ವರ್ಷಪೂರ್ತಿ ‘ಬೆಂಗಳೂರು ಹಬ್ಬ’ ಆಯೋಜಿಸಲು ಉದ್ದೇಶಿಸಲಾಗಿದೆ.

ನಗರದಲ್ಲಿ ಎಲ್ಲೆಡೆ ಎಲ್‌ಇಡಿ ತಂತ್ರಜ್ಞಾನ ಬಳಸಿಕೊಂಡು, ಇಂಧನ ವೆಚ್ಚವನ್ನು ₹300 ಕೋಟಿಯಿಂದ ₹200 ಕೋಟಿಗೆ ಕಡಿತಗೊಳಿಸಲಾಗುತ್ತದೆ. ಉಳಿತಾಯವಾಗುವ ₹100 ಕೋಟಿಯನ್ನು ರೋಮಾಂಚಕ ಬೆಂಗಳೂರು ಯೋಜನೆಗೆ ಬಳಸಲಾಗುತ್ತದೆ ಎಂದು ತಿಳಿಸಲಾಗಿದೆ.

₹100 ಕೋಟಿ; ಮಾಗಡಿ ಕೋಟೆ ಅಭಿವೃದ್ಧಿಗಾಗಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ

ಹೆಚ್ಚುವರಿ ತೆರಿಗೆ ಸಂಗ್ರಹ ಗುರಿ

ತೆರಿಗೆ ಸಂಗ್ರಹದಲ್ಲಿ ಸತತ ಎರಡನೇ ವರ್ಷವೂ ದೇಶದಲ್ಲಿಯೇ ಮೊದಲ ಸ್ಥಾನವನ್ನು ಪಡೆದಿರುವ ಬಿಬಿಎಂಪಿ 2025–26ನೇ ಸಾಲಿನಲ್ಲಿಯೂ ಈ ಸ್ಥಾನ ಉಳಿಸಿಕೊಳ್ಳಲು ಮುಂದಾಗಿದ್ದು, ₹5,716 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ.

ಹೆಚ್ಚುವರಿ ತೆರಿಗೆ ವಿಧಿಸದೇ ತೆರಿಗೆ ಜಾಲದಿಂದ ಹೊರಗಿರುವ ಆಸ್ತಿಗಳನ್ನು ಎಐ ಮೂಲಕ ಗುರುತಿಸಿ, ತೆರಿಗೆ ವ್ಯಾಪ್ತಿಗೆ ತರಲಾಗುತ್ತದೆ. ಈ ಮೂಲಕ ₹1,000 ಕೋಟಿ ಹೆಚ್ಚು ತೆರಿಗೆ ಸಂಗ್ರಹ.

*₹ 210 ಕೋಟಿ: ಗುತ್ತಿಗೆ ಅವಧಿ ಮುಗಿದಿರುವ 143 ಆಸ್ತಿಗಳನ್ನು ಹರಾಜು ಅಥವಾ ನವೀಕರಣ ಮೂಲಕ ಬರಲಿರುವ ಆದಾಯ.

*₹ 100 ಕೋಟಿ: ವಿವಿಧ ಮೂಲ ಸೌಕರ್ಯ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳಲು ಮೀಸಲಿಡಲಾದ ಅನುದಾನ.

*₹ 500 ಕೋಟಿ: ಕಾಯಂಗೊಳ್ಳಲಿರುವ 12,692 ನೇರ ವೇತನ ಪೌರಕಾರ್ಮಿಕರ ವೇತನ ಮತ್ತು ಭತ್ಯೆಗಳಿಗಾಗಿ ಮೀಸಲು

ಪಾರ್ಕಿಂಗ್‌: ಕಟ್ಟಡದ ಎತ್ತರ ವಿಸ್ತಾರ

ರಸ್ತೆಯಲ್ಲಿ ಕಾರ್‌ ಪಾರ್ಕಿಂಗ್ ಮಾಡುವುದನ್ನು ತಪ್ಪಿಸಿ, ಮನೆ ಆವರಣದ ಒಳಗೆ ನಿಲ್ಲಿಸುವಂತೆ ಮಾಡಲು ಮಹಡಿಗಳ ಎತ್ತರವನ್ನು 4.5 ಮೀಟರ್‌ಗೆ ನಿಗದಿಪಡಿಸಲಾಗಿದೆ. ಅದನ್ನು ಕಟ್ಟಡದ ಒಟ್ಟು ಎತ್ತರಕ್ಕೆ ಪರಿಗಣಿಸದಿರಲು, ಮೆಕ್ಯಾನಿಕಲ್‌ ಕಾರ್‌ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.

*₹ 10 ಕೋಟಿ ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಗಳ ಫಲಾನುಭವಿಗಳಿಗೆ 500 ಎಲೆಕ್ಟ್ರಿಕ್‌ ಸಾರಿಗೆ ಆಟೊ, ಸರಕು ಇ–ಆಟೊ

*₹ 15 ಕೋಟಿ 1 ಸಾವಿರ ಉದ್ಯೋಗಸ್ಥ ಮಹಿಳೆಯರು, ಪೌರ ಕಾರ್ಮಿಕರಿಗೆ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನ, ಅಂಗವಿಕಲರಿಗೆ ವಿದ್ಯುತ್‌ ಚಾಲಿತ ವಾಹನ

*₹ 10 ಕೋಟಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ, ಇತರ ಆರ್ಥಿಕ ಹಿಂದುಳಿದವರು ಸಣ್ಣ ಉದ್ಯಮ ಸ್ಥಾಪನೆ– 500 ಫಲಾನುಭವಿಗಳು

*₹ 130 ಕೋಟಿ ವಸತಿ ರಹಿತ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇಡಬ್ಲ್ಯುಎಸ್‌ನವರಿಗೆ, ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ಮನೆ

* ₹ 1 ಕೋಟಿ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಒದಗಿಸಲು ಅನುದಾನ.

*  ₹ 2 ಕೋಟಿ ಹಿರಿಯ ನಾಗರಿಕರಿಗೆ ಜೀವನೋಪಾಯಕ್ಕೆ.

* ₹ 5 ಕೋಟಿ ಕೌಶಲಾಭಿವೃದ್ಧಿಗೆ.

* ₹ 10 ಕೋಟಿ ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕೆ.

* 2 ಕೋಟಿ ವೈದ್ಯಕೀಯ ವೆಚ್ಚಕ್ಕೆ

*  ₹ 5 ಕೋಟಿ ಸ್ವಯಂಸೇವಾ ಸಂಸ್ಥೆಗಳಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.